University of Agricultural and Horticultural Sciences ಹವಾಮಾನ ಬದಲಾವಣೆಯಿಂದಾಗಿ ಮೀನಿನ ಸಂತಾನೋತ್ಪತ್ತಿ ಕಡಿಮೆಯಾಗುತ್ತಿದ್ದು, ಇದರಿಂದಾಗಿ ವರ್ಷ ವರ್ಷ ಮೀನಿನ ಉತ್ಪಾದನೆಯಲ್ಲಿ ಕಡಿಮೆಯಾಗುತ್ತಿದೆ. ಇಂತಹ ಪರಿಸರದ ಬದಲಾವಣೆಯನ್ನು ನಿಯಂತ್ರಿಸುವುದು ನಮ್ಮ ಕೈಯಲ್ಲಿಲ್ಲ. ಹವಾಮಾನ ವೈಪರೀತ್ಯಕ್ಕೆ ಹೊಂದಿಕೊಳ್ಳುವಂತಹ ಮೀನಿನ ತಳಿಗಳನ್ನು ಅಭಿವೃದ್ಧಿಪಡಿಸುವುದು ಇಂದಿನ ಅಗತ್ಯವಾಗಿದೆ. ಇದರ ಜೊತೆಗೆ ಮೀನುಗಾರಿಕೆ ಅಭಿವೃದ್ಧಿಯಲ್ಲಿ ಜಾಗತಿಕವಾಗಿ ಎಲ್ಲಾ ವಿಜ್ಞಾನಿಗಳು ಕೈಜೋಡಿಸಬೇಕೆಂದು ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ಉಪ ಮಹಾನಿರ್ದೇಶಕರಾದ (ಮೀನುಗಾರಿಕೆ). ಡಾ. ಜೆ.ಕೆ. ಜೇನಾ ಅವರು ತಿಳಿಸಿದರು.
ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ -ನವಿಲೆ, ಶಿವಮೊಗ್ಗ ಮತ್ತು ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಮೀನುಗಾರಿಕೆ ವಿಭಾಗ ಹಾಗೂ ಆಸ್ಟ್ರೇಲಿಯನ್ ಹಿರಿಯ ವಿದ್ಯಾರ್ಥಿಗಳ ಗ್ರಾಂಟ್ ಪ್ರಾಯೋಜಿತ ಸಹಯೋಗದೊಂದಿಗೆ ಏರ್ಪಡಿಸಲಾದ “ಬದಲಾಗುತ್ತಿರುವ ಹವಾಮಾನ ವೈಪರೀತ್ಯದಲ್ಲಿ ಮೀನುಗಾರಿಕೆ ವಿಜ್ಞಾನದ ದೃಷ್ಟಿಕೋನಗಳು, ಅವಕಾಶಗಳು ಮತ್ತು ಸವಾಲುಗಳು: ಉದಯೋನ್ಮುಖ ವಿಜ್ಞಾನಿಗಳಿಗೆ ಅಂತಾರಾಷ್ಟ್ರೀಯ ಕಾರ್ಯಾಗಾರವನ್ನು” ಉದ್ಘಾಟಿಸಿ ಅವರು ಮಾತನಾಡಿದರು.
ಹವಮಾನ ಬದಲಾವಣೆಯಿಂದ ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಾಗುತ್ತಿದ್ದು, ಇದು ಮೀನು ಕೃಷಿಗೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಜೊತೆಗೆ ಮೀನುಗಾರಿಕೆಯಲ್ಲಿ ನೀರಿನ ಗುಣಮಟ್ಟವನ್ನು ಕಾಪಾಡಿಕೊಳ್ಳುವಲ್ಲಿ ಹೆಚ್ಚಿನ ಆದ್ಯತೆ ನೀಡಬೇಕು ಹಾಗೂ ಮೀನುಗಾರಿಕೆಯಲ್ಲಿ ತಂತ್ರಜ್ಞಾನ ಬಳಕೆಯಾಗುತ್ತಿದ್ದು, ಇತ್ತೀಚಿನ ಎಐ ತಂತ್ರಜ್ಞಾನವನ್ನು ಸಹ ಅಳವಡಿಸಿಕೊಳ್ಳಬೇಕಾದ ಅಗತ್ಯವಿದೆ ಎಂದು ಮೀನುಗಾರಿಕೆ ವಿಜ್ಞಾನಿಗಳು ಹಾಗೂ ವಿಶ್ರಾಂತ ಕುಲಪತಿಗಳಾದ ಡಾ. ಸಿ. ವಾಸುದೇವಪ್ಪ ಅವರು ತಿಳಿಸಿದರು.
ಮೀನು ಉತ್ಪನ್ನಗಳನ್ನು ಪ್ರಾದೇಶಿಕ ಮಾರುಕಟ್ಟೆ ಮೂಲಕ ಪ್ರತಿಯೊಬ್ಬರಿಗೂ ತಲುಪಿಸುವುದು ಇಂದಿನ ಅಗತ್ಯವಾಗಿದೆ. ಈಗಾಗಲೇ ರಾಷ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿಯು ದೇಶದಾದ್ಯಂತ ಹನ್ನೊಂದು ಜಲಕೃಷಿ ಪಾರ್ಕ್ ನಿರ್ಮಾಣ ಮಾಡಿದೆ ಎಂದು ರಾಷ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿಯ ಹಿರಿಯ ಕಾರ್ಯ ನಿರ್ವಾಹಕ ನಿರ್ದೇಶಕರಾದ ಡಾ. ಎಲ್. ಎಂ. ಮೂರ್ತಿ ಅವರು ತಿಳಿಸಿದರು.
ಭಾರತವು ಮೀನು ಉತ್ಪಾದನೆಯಲ್ಲಿ ಜಾಗತೀಕವಾಗಿ ಎರಡನೇ ಸ್ಥಾನದಲ್ಲಿದೆ. ನಮ್ಮ ದೇಶದಲ್ಲಿ ಕರ್ನಾಟಕವು ಮೀನು ಉತ್ಪಾದನೆಯಲ್ಲಿ ಮೂರನೆ ಸ್ಥಾನದಲ್ಲಿದ್ದು, ಮೀನುಗಾರಿಕೆಗೆ ಕರ್ನಾಟಕದಲ್ಲಿ ವಿಪುಲವಾದ ಅವಕಾಶಗಳಿವೆ. ವಿಶೇಷವಾಗಿ ಶಿವಮೊಗ್ಗದಲ್ಲಿ 9 ಜಲಾನಯನ ಪ್ರದೇಶಗಳು, 5 ಸಾವಿರ ಕೆರೆಗಳಿದ್ದು, ಮೀನುಗಾರಿಕೆಯನ್ನು ವೈಜ್ಞಾನಿಕವಾಗಿ ಕೈಗೊಂಡಲ್ಲಿ ಮೀನು ಉತ್ಪನ್ನಗಳನ್ನು ಹೆಚ್ಚಿಸಬಹುದಾಗಿದೆ.
University of Agricultural and Horticultural Sciences ನಮ್ಮ ವಿಶ್ವವಿದ್ಯಾಲಯವು ಕೃಷಿ ಮತ್ತು ತೋಟಗಾರಿಕೆ ವಿಷಯದ ಜೊತೆಯಲ್ಲಿ ಮೀನುಗಾರಿಕೆ ಮತ್ತು ಪಶುಸಂಗೋಪನೆ ಒಳಗೊಂಡಂತೆ ಸಮಗ್ರ ವಿಶ್ವವಿದ್ಯಾಲಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಶ್ವವಿದ್ಯಾಲಯ ಕುಲಪತಿಗಳಾದ ಡಾ. ಆರ್. ಸಿ. ಜಗದೀಶ ಅವರು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಕಿರಿಯ ವಿಜ್ಞಾನಿ ಪ್ರಶಸ್ತಿ, ಯುವ ವಿಜ್ಞಾನಿ ಪ್ರಶಸ್ತಿ, ಯುವ ವಿಸ್ತರಣಾ ವಿಜ್ಞಾನಿ ಪ್ರಶಸ್ತಿ, ಅತ್ಯುತ್ತಮ ಶಿಕ್ಷಕ ಪ್ರಶಸ್ತಿ, ಜೀವಮಾನ ಸಾಧನೆ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಡಾ. ಗ್ರಿಸನ್ ಜಾರ್ಜ್, ಡಾ. ಜವಾಹರ್ ಜಿ.ಪಾಟೀಲ್ ಮಾತನಾಡಿದರು. ಸಂಶೋಧನಾ ನಿರ್ದೇಶಕರಾದ ಡಾ. ಬಿ.ಎಂ. ದುಷ್ಯಂತಕುಮಾರ್ ಸ್ವಾಗತಿಸಿ, ಸಹ ಸಂಶೋಧನಾ ನಿರ್ದೇಶಕರಾದ ಡಾ. ಎಸ್. ಪ್ರದೀಪ್ ವಂದಿಸಿದರು.
ಈ ಕಾರ್ಯಾಗಾರದಲ್ಲಿ ವಿಶ್ವವಿದ್ಯಾಲಯದ ಅಧಿಕಾರಿಗಳು ಹಾಗೂ ಸಂಘಟಕ ಡಾ. ಶಾಂತನಗೌಡ ಎ.ಹೆಚ್. ಇವರುಗಳು ಉಪಸ್ಥಿತರಿದ್ದರು.
ಈ ಕಾರ್ಯಾಗಾರದಲ್ಲಿ ಆಸ್ಟ್ರೇಲಿಯಾ, ಮಲೇಷ್ಯಾ, ಕುವೈತ್, ಕರ್ನಾಟಕ, ನವದೆಹಲಿ, ಹೈದ್ರಾಬಾದ್, ಕೊಚ್ಚಿನ್, ತಮಿಳುನಾಡು, ಆಂಧ್ರಪ್ರದೇಶ, ಗುಜರಾತ್, ಗೋವಾ, ಮಹಾರಾಷ್ಟ್ರ, ಒರಿಸ್ಸಾ ಮತ್ತು ಉತ್ತರ ಪ್ರದೇಶದ ವಿಜ್ಞಾನಿಗಳು ಭಾಗವಹಿಸಿದ್ದರು.