Lokayukta Police ಭದ್ರಾವತಿ ತಾಲೂಕು ಅಂತರಗಂಗೆ ಗ್ರಾಪಂ ಅಧ್ಯಕ್ಷ ನಾಗೇಶ್ ಬಲ್ಲ ಮೂಲಗಳ ಆದಾಯಕ್ಕಿಂತ ಹೆಚ್ಚು ಅಕ್ರಮ ಆಸ್ತಿ ಗಳಿಸಿರುತ್ತಾರೆಂಬ ದೂರಿನ ಹಿನ್ನೆಲೆಯಲ್ಲಿ ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಕಲಂ ೧೩(೧)(ಬಿ) ಸಹಿತ ೧೩(೨) ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ-೧೯೮೮ (ತಿದ್ದುಪಡಿ ಕಾಯ್ದೆ-೨೦೧೮) ರೀತ್ಯಾ ಪ್ರಕರಣ ದಾಖಲಾಗಿದೆ.
ನಾಗೇಶ್ ಅಕ್ರಮ ಆಸ್ತಿಗಳಿಸಿರುವ ಪ್ರಕರಣದ ತನಿಖೆ ಕೈಗೊಂಡು ಇವರಿಗೆ ಸಂಬಂಧಿಸಿದ ೫ ಸ್ಥಳಗಳಲಿ ಜುಲೈ ೧೯ರಂದು ಶಿವಮೊಗ್ಗ ಲೋಕಾಯುಕ್ತ ಅಧಿಕಾರಿಗಳು ಸ್ಥಳ ಶೋಧನೆ ಮಾಡಿದ್ದು, ನಾಗೇಶ್ ಬಿ. ರವರಿಗೆ ಸಂಬಂದಿಸಿದಂತೆ ೨ ಖಾಲಿ ನಿವೇಶನಗಳು, ೨ ಮನೆಗಳು, ೫.೧೪ ಎಕರೆ ಕೃಷಿ ಜಮೀನು , ಅಂದಾಜು ರೂ ೧೨,೮೦,೦೦೦ ಚಿನ್ನಾಭರಣ ಮತ್ತು ಬೆಳ್ಳಿ ವಸ್ತುಗಳು, ಅಂದಾಜು ೧,೭೬,೦೦೦ ಮೌಲ್ಯದ ವಾಹನಗಳು, ಅಂದಾಜು ೭,೦೦,೦೦೦ ಮೌಲ್ಯದ ಗೃಹಪಯೋಗಿ ವಸ್ತುಗಳು ಮತ್ತು ರೂ ೫,೭೧,೬೪೦ ಗಳು ನಗದು ಹಣ ಪತ್ತೆಯಾಗಿದ್ದು ಅಂದಾಜು ರೂ ೧,೩೩,೮೭,೮೨೬ ಮೌಲ್ಯದ ಅಕ್ರಮ ಆಸ್ತಿ ಸಂಪಾದನೆ ಮಾಡಿರುವುದು ತನಿಖೆಯಿಂದ ಕಂಡು ಬಂದಿರುತ್ತದೆ.
Lokayukta Police ಹಾಗೂ ಅವರ ಮನೆಯಲ್ಲಿ ಪತ್ತೆಯಾದ ನಗದು ರೂ ೫,೦೦,೦೦೦ ಗಳನ್ನು ತನಿಖೆ ಸಂಬಂಧ ಅಮಾನತ್ತುಪಡಿಸಿಕೊಳ್ಳಲಾಗಿರುತ್ತದೆ. ಈ ಪ್ರಕರಣವನ್ನು ಶಿವಮೊಗ್ಗದ ಪೊಲೀಸ್ ಅಧೀಕ್ಷಕರಾದ ಮಂಜುನಾಥ್ ಚೌದರಿ ಎಂ.ಹೆಚ್. ರವರು ದಾಖಲಿಸಿದ್ದು, ವೀರಬಸಪ್ಪ ಎಲ್ ಕುಸಲಾಪುರ ಪೊಲೀಸ್ ನಿರೀಕ್ಷಕರು, ಕ.ಲೋ ಶಿವಮೊಗ್ಗ ಇವರು ತನಿಖೆಯನ್ನು ಮುಂದುವರೆಸಿದ್ದಾರೆ.
ಈ ದಾಳಿ ಸಮಯಕ್ಕೆ ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು, ಹಾಗೂ ಚಿತ್ರದುರ್ಗ, ಉಡುಪಿ ಮತ್ತು ಮಂಗಳೂರು ವಿಭಾಗದ ಲೋಕಾಯುಕ್ತ ಅಧಿಕಾರಿ, ಸಿಬ್ಬಂದಿಗಳು ಭಾಗಿಯಾಗಿರುತ್ತಾರೆ ಎಂದು ಲೋಕಾಯುಕ್ತ ಪೊಲೀಸ್ ಇಲಾಖೆ ತಿಳಿಸಿದೆ.