International Yoga Day ಮನುಷ್ಯನ ಸರ್ವತೋಮುಖ ಬೆಳವಣಿಗೆಗೆ ಪತಂಜಲಿ ಮಹರ್ಷಿಯ ಅಷ್ಟಾಂಗಯೋಗ ಪೂರಕವಾಗಿದೆ. ಪ್ರತಿಯೊಬ್ಬರು ತಮ್ಮ ನಿತ್ಯ ಜೀವನದಲ್ಲಿ ಯೋಗ ಅಭ್ಯಾಸವನ್ನು ಮಾಡಲು ಮುಂದೆ ಬರಬೇಕು. ಖೈದಿಗಳ ಮಾನಸಿಕ ಪರಿವರ್ತನೆಗೆ ಯೋಗಾಸನ ತರಬೇತಿ ಶಿಬಿರ ಸಹಕಾರಿಯಾಗಿದೆ ಎಂದು ಕೇಂದ್ರ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕಿ ಡಾ|| ಅನಿತಾ ಆರ್. ಹೇಳಿದರು.
ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಪತಂಜಲಿ ಯೋಗ ಮತ್ತು ಪ್ರಕೃತಿ ಸಂಸ್ಥೆ, ಕೇಂದ್ರ ಕಾರಾಗೃಹದ ಆಶ್ರಯದಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಖೈದಿಗಳ ಮಾನಸಿಕ ಪರಿವರ್ತನೆಗಾಗಿ ಏರ್ಪಡಿಸಿದ್ದ ವಿಶೇಷ ಯೋಗಾಸನ ತರಬೇತಿ ವ್ಯಕ್ತಿತ್ವ ವಿಕಸನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಕೇಂದ್ರ ಕಾರಾಗೃಹದಲ್ಲಿ ಇರುವ ಪ್ರತಿಯೊಬ್ಬರು ಯೋಗಾಸನ ತರಬೇತಿ ಶಿಬಿರದಲ್ಲಿ ಭಾಗವಹಿಸಿ ಇದರ ಸದುಪಯೋಗವನ್ನು ಪಡೆದುಕೊಳ್ಳಲು ಮುಂದೆ ಬರಬೇಕು. ನುರಿತ ಯೋಗ ಶಿಕ್ಷಕರು ಸಂಪನ್ಮೂಲ ವ್ಯಕ್ತಿಗಳು ಜಾನಪದ ಕಲಾವಿದರ ಮೂಲಕ ಹೆಚ್ಚು ಅರ್ಥಬದ್ಧವಾಗಿ ಈ ಶಿಬಿರವನ್ನು ಆಯೋಜಿಸಿರುವುದು ಶ್ಲಾಘನೀಯವಾದದ್ದು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪತಂಜಲಿ ಜೆ.ನಾಗರಾಜ್, ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರು ಯೋಗಾಸನ ತರಬೇತಿ ನೀಡಲು ಸಹಕಾರ ನೀಡಿದ್ದಾರೆ. 740 ಪುರುಷ ಖೈದಿಗಳು, 40 ಮಹಿಳಾ ಖೈದಿಗಳು ಈ ಶಿಬಿರದ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ ಎಂದರು.
International Yoga Day ಪತಂಜಲಿ ಆಡಳಿತಾಧಿಕಾರಿ ಎಂ.ಪೂವಯ್ಯ ಮಾತನಾಡಿ, ಯೋಗ ಕಲೆಯೂ ಹೌದು, ವಿಜ್ಞಾನವೂ ಹೌದು ಎಂದರು.
ಪತಂಜಲಿ ಸಿ.ಇ.ಓ. ಪರಿಸರ ಸಿ.ರಮೇಶ್ ಮಾತನಾಡಿ, ಪತಂಜಲಿ ಯೋಗ ಶಾಖೆಯನ್ನು ಕೇಂದ್ರ ಕಾರಾಗೃಹದಲ್ಲಿ ಸ್ಥಾಪಿಸಿದ್ದು, ಅದರ ಅಧ್ಯಕ್ಷರಾಗಿ ನಿವೃತ್ತ ಶಿಕ್ಷಕ ಡಿ.ಕೃಷ್ಣಪ್ಪ ದಾಸಪ್ಪ ಮಲ್ಲಾಡಿಹಳ್ಳಿ ಹೊಳಲ್ಕೆರೆ ಚಿತ್ರದುರ್ಗ ಜಿಲ್ಲೆ ಇವರನ್ನು ಆಯ್ಕೆ ಮಾಡಿದ್ದೇವೆ. ಇವರ ನೇತೃತ್ವದಲ್ಲಿ ನಿರಂತರವಾಗಿ ಯೋಗಾಸನ ತರಬೇತಿಯನ್ನು ನಡೆಸಲಾಗುವುದು. ಮೂರು ತಿಂಗಳಿನಲ್ಲಿ ಅತ್ಯುತ್ತಮವಾಗಿ ಯೋಗಾಸನ ತರಬೇತಿ ಕಲಿಯುವ ಶಿಬಿರಾರ್ಥಿಗಳಿಗೆ ಅಭಿನಂದನೆ ಮಾಡಿ ಸನ್ಮಾನಿಸಲಾಗುವುದುಎಂದರು.
ಅಧ್ಯಕ್ಷತೆಯನ್ನು ಪತಂಜಲಿ ರಾಜ್ಯ ಸಮಿತಿ ಸದಸ್ಯ, ಜೇಸಿಐ ಶಿವಮೊಗ್ಗ ಶಾಶ್ವತಿ ಘಟಕದ ಅಧ್ಯಕ್ಷ ನರಸಿಂಹಮೂರ್ತಿ ವಹಿಸಿದ್ದರು.