B.Y.Raghavendra ಶಿವಮೊಗ್ಗ ಲೋಕಸಭಾ ಚುನಾವಣೆ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಭರ್ಜರಿ ಗೆಲುವು ಸಾಧಿಸಿ ನಾಲ್ಕನೇ ಬಾರಿಗೆ ಸಂಸತ್ ಪ್ರವೇಶ ಮಾಡಲಿದ್ದಾರೆ. ಅವರು ತಮ್ಮ ಸಮೀಪ ಸ್ಪರ್ಧಿ ಕಾಂಗ್ರೆಸ್‌ನ ಗೀತಾ ಶಿವರಾಜ್ ಕುಮಾರ್ ಅವರಿಗಿಂತ ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಪ್ರಾರಂಭಿಕ ಹಂತದಿಂದಲೂ ಕೂಡ ಬಿ.ವೈ. ರಾಘವೇಂದ್ರ ಅವರು ಮುನ್ನಡೆ ಗಳಿಸಿದ್ದರು.
ಅಂಚೆ ಮತಗಳಿಂದಲೂ ಕೂಡ ಲೀಡ್ ಪಡೆದಿದ್ದ ಅವರು ಇವಿಎಂಗಳ ಮತ ಎಣಿಕೆ ಆರಂಭವಾಗುತ್ತಿದ್ದಂತೆಯೆ ಪ್ರತಿ ಸುತ್ತಿನಲ್ಲಿಯೂ ಗೆಲುವಿನ ಅಂತರವನ್ನು ಹೆಚ್ಚಿಸುತ್ತಾ ಹೋದರು. ಬೆಳಗ್ಗೆ 11ಗಂಟೆಗೆ 11,380 ಮತಗಳಿಂದ ಮುಂದಿದ್ದರೆ 12 ಗಂಟೆಗೆ 1 ಲಕ್ಷಕ್ಕೂ ಹೆಚ್ಚು ಮತಗಳ ಅಂತರ ಕಾಯ್ದುಕೊಂಡರು. 12.20 ಕ್ಕೆ ರಾಘವೇಂದ್ರ ಅವರು ಸುಮಾರು 5 ಲಕ್ಷ 20 ಸಾವಿರ ಮತಗಳನ್ನು ಪಡೆದು 1.50 ಲಕ್ಷ ಮತಗಳ ಅಂತರ ಕಾಪಾಡಿಕೊಂಡರು. 1 ಗಂಟೆಗೆ 1.86 ಲಕ್ಷ ಮತಗಳ ಅಂತರ ಕಾಯ್ದುಕೊಂಡಿದ್ದರು. ಮಧ್ಯಾಹ್ನ 3ಗಂಟೆ ಹೊತ್ತಿಗೆ ರಾಘವೇಂದ್ರ 754381 ಮತ ಪಡೆದರೆ, ಗೀತಾ ಶಿವರಾಜ್ ಕುಮಾರ್ ಅವರು 522674 ಮತ ಪಡೆದಿದ್ದಾರೆ. ಪಕ್ಷೇತರ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ಅವರು 29123 ಮತ ಪಡೆದಿದ್ದಾರೆ.
ಹೀಗೆ ಪ್ರತಿ ಸುತ್ತಿನಲ್ಲಿಯೂ ಬಿ.ವೈ. ರಾಘವೇಂದ್ರ ಅವರು ತಮ್ಮ ಸಮೀಪ ಸ್ಪರ್ಧಿ ಗೀತಾ ಶಿವರಾಜ್ ಕುಮಾರ್ ಅವರಿಗಿಂತ ಹೆಚ್ಚು ಮತಗಳನ್ನು ಕಾಯ್ದುಕೊಂಡು ಎರಡು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಗೀತಾ ಶಿವರಾಜ್ ಕುಮಾರ್ 5,20 ಲಕ್ಷಕ್ಕೂ ಅಧಿಕ ಮತಗಳನ್ನು ಪಡೆದು ಎರಡನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು.
ಆದರೆ, ಬಿಜೆಪಿಯಿಂದ ಬಂಡಾಯವೆದ್ದು ರಾಷ್ಟ್ರ ಭಕ್ತರ ಬಳಗದಿಂದ ಸ್ಪರ್ಧಿಸಿ ರಾಷ್ಟ್ರದ ಗಮನಸೆಳೆದಿದ್ದ ಕೆ.ಎಸ್. ಈಶ್ವರಪ್ಪನವರಿಗೆ ಈ ಚುನಾವಣೆ ಭಾರಿ ಮುಖಭಂಗ ತಂದಿದೆ. ಪ್ರತಿ ಸುತ್ತಿನಲ್ಲಿಯೂ ಅವರು ಅತ್ಯಂತ ಅಲ್ಪ ಮತಗಳನ್ನು ಪಡೆದು ಹಿನ್ನಡೆ ಸಾಧಿಸುತ್ತಲೇ ಹೋದರು.
B.Y.Raghavendra ರಾಘವೇಂದ್ರ ಅವರ ಗೆಲುವಿನಿಂದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಬಿಜೆಪಿ ರಾಜಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಮತ್ತಷ್ಟು ಶಕ್ತಿ ಬಂದಂತಾಗಿದೆ. ಜಿಲ್ಲೆಯಲ್ಲಿ ಬಿಜೆಪಿ ಪ್ರಬಲವಾಗುವುದಕ್ಕೆ ಇದು ಸಹಾಯಕವಾಗುತ್ತದೆ. ರಾಘವೇಂದ್ರ ಅವರು ಅಭಿವೃದ್ಧಿಯನ್ನೇ ಮುಂದಿಟ್ಟುಕೊಂಡು ಮತ ಯಾಚಿಸಿದ್ದರು. ಅದಕ್ಕೆ ತಕ್ಕ ಪ್ರತಿಫಲ ಸಿಕ್ಕಂತಾಗಿದೆ. ಮತ ಎಣಿಕೆ ಪೂರ್ಣಗೊಂಡ ನಂತರ ಅಂಕಿ ಸಂಖ್ಯೆಗಳಲ್ಲಿ ಬದಲಾವಣೆ ಆಗಲಿದೆ.
ಬಿಜೆಪಿ ಕಛೇರಿಯಲ್ಲಿ ವಿಜಯೋತ್ಸವ :
ಸಂಸದ ಬಿ.ವೈ. ರಾಘವೇಂದ್ರ ಇನ್ನೂ ಒಂದು ಲಕ್ಷ ಮತಗಳ ಎಣಿಕೆ ಬಾಕಿ ಇರುವಾಗಲೇ 224404 ಲಕ್ಷ ಲೀಡ್ ಪಡೆದು ಬಿಜೆಪಿ ಕಚೇರಿಯಲ್ಲಿ ವಿಜಯೋತ್ಸವ ಆಚರಿಸಿದರು. ಇದು ಮಹಿಳಾ ಮತ್ತು ಯುವಶಕ್ತಿಯ ಗೆಲುವಾಗಿದೆ. ಅಪಪ್ರಚಾರದಿಂದ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ ಎಂಬುದಕ್ಕೆ ಇದು ಸಾಕ್ಷಿಯಾಗಿದೆ ಎಂದು ರಾಘವೇಂದ್ರ ಹೇಳಿದರು.
ನಮ್ಮ ಕುಟುಂಬದ, ಕಾರ್ಯಕರ್ತರು ಪಕ್ಷದ ಬಗ್ಗೆ ಹಗುರ ಮಾತನಾಡಿದರು. ದ್ವೇಷದ ಅಪಪ್ರಚಾರ ಮಾಡಿದವರಿಗೆ ಯಾವ ಜಗ ತೋರಿಸಬೇಕೋ ಅದನ್ನು ಜನ ತೋರಿಸಿದ್ದಾರೆ ಎಂದು ಪರೋಕ್ಷವಾಗಿ ಈಶ್ವರಪ್ಪ ಅವರಿಗೆ ಅವರು ಟಾಂಗ್ ಕೊಟ್ಟರು.
ಜನರ ಅಪೇಕ್ಷೆ ಮೇರೆಗೆ ಕೆಲಸ ಮಾಡುತ್ತೇನೆ. ಜನರ ನಿರೀಕ್ಷೆಗೆ ಅನುಗುಣವಾಗಿ ಅಭಿವೃದ್ಧಿ ಕಾರ್ಯ ಮುಂದುವರೆಸುತ್ತೇನೆ. ಅಣ್ಣಾಮಲೈ ಸೋತಿರಬಹುದು. ತಮಿಳುನಾಡಿನಲ್ಲಿ ಉತ್ತಮ ಜನಾಭಿಪ್ರಾಯ ಮೂಡಿಸಿದ್ದಾರೆ. ಶಿವಮೊಗ್ಗಕ್ಕೂ ಬಂದು ನಮ್ಮ ಗೆಲುವಿಗೆ ಶಕ್ತಿ ತುಂಬಿದ್ದಾರೆ. ನನಗೆ ಮತ ಹಾಕಲು ಯುವಕರು ಬೇರೆ ಬೇರೆ ಜಿಲ್ಲೆ ರಾಜ್ಯಗಳಿಂದ ಬಂದು ಮತ ಹಾಕಿದ್ದಾರೆ. ಜೆಡಿಎಸ್ ಬೆಂಬಲ ಕೂಡ ನನ್ನ ಗೆಲುವಿಗೆ ಕಾರಣವಾಗಿದೆ ಎಂದರು.
ದೇವರು ಮೆಚ್ಚುವ ರೀತಿಯಲ್ಲಿ ಜನರ ಅಪೇಕ್ಷೆಗೆ ತಕ್ಕಂತೆ ಕೆಲಸ ಮಾqಡುತ್ತೇನೆ, ರಾಜ್ಯದಲ್ಲಿ ಬಿಜೆಪಿ ಜೆಡಿಎಸ್ ಹೆಚ್ಚು ಸ್ಥಾನ ಗಳಿಸಿದೆ.
ಶಿವಮೊಗ್ಗ ನಗರದಿಂದ 50 ಸಾವಿರ ಲೀಡ್, ಸೊರಬದಿಂದ 18 ಸಾವಿರ, ಸಾಗರ 20, ಶಿಕಾರಿಪುರ 12 ಸಾವಿರ, ಶಿವಮೊಗ್ಗ ಗ್ರಾಮಾಂತರ 30 ಸಾವಿರ, ತೀರ್ಥಹಳ್ಳಿ 24 ಸಾವಿರ, ಬೈಂದೂರು 51 ಸಾವಿರ, ಭದ್ರಾವತಿಯಲ್ಲಿ 6 ಸಾವಿರ ಲೀಡ್ ಬಂದಿದೆ ಎಂದರು.