B.Y.Raghavendra ಬಿ ವೈ ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಘೋಷಣೆ ಮಾಡಿದ್ದನ್ನು ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ಅವರಿಗೆ ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ. ಇನ್ನು ಈಗ ತಮ್ಮ ಪುತ್ರ ಕಾಂತೇಶ್ ಗೆ ಟಿಕೆಟ್ ಸಿಕ್ಕಿಲ್ಲ ಅಂತ ಇನ್ನೂ ಹತಾಶರಾಗಿ ಹೀಗೆಲ್ಲ ನಮ್ಮ ಕುಟುಂಬದ ವಿರುದ್ಧ ಈಶ್ವರಪ್ಪ ಮಾತನಾಡುತ್ತಿದ್ದಾರೆ. ಇದಕ್ಕೆಲ್ಲಾ ಜನತೆ ಚುನಾವಣೆಯಲ್ಲಿ ಮತದಾನದ ಮೂಲಕ ಉತ್ತರ ನೀಡಲಿದ್ದಾರೆ ಎಂದು ಶಿವಮೊಗ್ಗ ಬಿಜೆಪಿ ಅಭ್ಯರ್ಥಿ ಬಿ ವೈ ರಾಘವೇಂದ್ರ ಹೇಳಿದರು.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದುತ್ವ ಉಳಿಸಬೇಕು, ಬಿಜೆಪಿ ಶುದ್ಧ ಮಾಡಬೇಕು, ಯಡಿಯೂರಪ್ಪ ಕುಟುಂಬದ ಹಿಡಿತದಿಂದ ಪಕ್ಷ ಬಿಡಿಸಬೇಕು ಅಂತ ಈಶ್ವರಪ್ಪ ಅವರಿಗೆ ಕಳೆದ 15 ದಿನಗಳಿಂದ ಹೀಗೆ ಅನಿಸಿದೆ. ಪಾಪ ಈ ಮೊದಲು ಹೀಗೆಲ್ಲ ಅವರಿಗೆ ಅನಿಸಿಲ್ಲ ಎಂದು ಟೀಕಿಸಿದರು.
ಎಲ್ಲವೂ ಹೈಕಮಾಂಡ್ ನಿರ್ಧಾರ: ಸಹೋದರ ಸಮಾನ ಕಾಂತೇಶ್ಗೆ ಟಿಕೆಟ್ ಕೊಡದಿರುವುದು ಹೈಕಮಾಂಡ್ ನಿರ್ಧಾರ, ಕಾಂತೇಶ್ಗೆ ಟಿಕೆಟ್ ಸಿಗಬೇಕು ಅನ್ನೋದು ನಮ್ಮದು ಆಶಯ ಆಗಿತ್ತು. ಆದರೆ ಅದು ಹೈಕಮಾಂಡ್ ನಿರ್ಧಾರ, ಪಕ್ಷದ ತೀರ್ಮಾನವನ್ನು ಗೌರವಿಸುವ ಬದಲು ಅದನ್ನು ವೈಯಕ್ತಿಕವಾಗಿ ತಗೊಂಡಿದ್ದಾರೆ. ನಮ್ಮ ಕುಟುಂಬದ ವಿರುದ್ಧ ಈಶ್ವರಪ್ಪ ವೈಯಕ್ತಿಕ ಟೀಕೆ ಮಾಡುತ್ತಿದ್ದಾರೆ.
ಅವರು ಏನೇ ಮಾತನಾಡಿದರೂ ನಾನು ಆಶೀರ್ವಾದ ಅಂದುಕೊಳ್ಳುತ್ತೇನೆ. ಜನ ಇದಕ್ಕೆಲ್ಲ ಮತದಾನದ ಮೂಲಕ ಉತ್ತರ ಕೊಡುತ್ತಾರೆ. ಮೋದಿಯವರೇ ಶಿವಮೊಗ್ಗಕ್ಕೆ ಬಂದು ನನ್ನ ಗೆಲ್ಲಿಸಿ ಅಂತ ಪ್ರಚಾರ ಮಾಡಿ ಹೋಗಿದ್ದಾರೆ. ಹೀಗಿದ್ದಾಗಲೂ ಜನರನ್ನ ತಪ್ಪು ದಾರಿಗೆ ಎಳೆಯುವ ಕೆಲಸವನ್ನು ಈಶ್ವರಪ್ಪ ಮಾಡುತ್ತಿದ್ದಾರೆ ಎಂದು ರಾಘವೇಂದ್ರ ಹೇಳಿದರು.
ಈಶ್ವರಪ್ಪಗೆ ನಮ್ಮ ಕುಟುಂಬ ಯಾವ ಅನ್ಯಾಯ ಮಾಡಿಲ್ಲ: ಈಶ್ವರಪ್ಪ ಅವರಿಗೆ ನಮ್ಮ ಕುಟುಂಬ ಯಾವ ಅನ್ಯಾಯವನ್ನು ಮಾಡಿಲ್ಲ. ಆದರೆ ಅವರು ನಮ್ಮ ಕುಟುಂಬದ ಕಡೆ ಬೆರಳು ತೋರಿಸಿ ಮಾತನಾಡುತ್ತಿದ್ದಾರೆ. ಈಶ್ವರಪ್ಪ ನಮ್ಮ ಕುಟುಂಬದ ಬಗ್ಗೆ ಮಾತನಾಡುತ್ತಿರಬಹುದು. ಆದರೆ ಅವರು ಬಂದೂಕಿನ ಗುರಿ ಇಟ್ಟಿರುವುದು ಹೈಕಮಾಂಡ್ ಕಡೆಗೆ, ಯಡಿಯೂರಪ್ಪ ಕುಟುಂಬದ ಬಗ್ಗೆ ಮಾತನಾಡುತ್ತಲೇ ಬಂದೂಕನ್ನು ಹೈಕಮಾಂಡ್ ಕಡೆ ತೋರಿಸ್ತಿದ್ದಾರೆ. ಅದನ್ನ ಅವರು ಬಹಿರಂಗವಾಗಿ ಹೇಳಿಕೊಳ್ಳುತ್ತಿಲ್ಲ ಅಷ್ಟೇ ಎಂದು ಆರೋಪಿಸಿದರು.
B.Y.Raghavendra ನಾನು ಶಿವಮೊಗ್ಗದಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿ, ಯಾವುದೇ ಗೊಂದಲಗಳು ಉದ್ಭವಿಸಲ್ಲ. ನಾನು ಈಶ್ವರಪ್ಪ ಬಗ್ಗೆ ಮಾಧ್ಯಮಗಳಲ್ಲಿ ಮಾತಾಡಬಾರದು ಅಂದುಕೊಂಡಿದ್ದೆ. ಆದರೆ ಇವತ್ತು ಅನಿವಾರ್ಯವಾಗಿ ಮಾತನಾಡಬೇಕಾಯ್ತು, ಅವರೇ ನನ್ನಿಂದ ಇವತ್ತು ಮಾತಾಡಿಸಿದ್ದಾರೆ. ಯಡಿಯೂರಪ್ಪ ಎಲ್ಲ ಸವಾಲು ಹೋರಾಟ ಎದುರಿಸಿ ಬಂದವರು. ಯಡಿಯೂರಪ್ಪ ಅವರನ್ನು ರಾಜಕೀಯವಾಗಿ ಮುಗಿಸಬೇಕು ಅಂತ ಶಿಕಾರಿಪುರದಲ್ಲಿ ಈ ಹಿಂದೆ ಮಾರಣಾಂತಿಕ ಹಲ್ಲೆಯೂ ಆಗಿತ್ತು. ಗುಂಡೇಟು ತಿಂದು, ಹೋರಾಟ ಎದುರಿಸಿ ಬಂದವರು ಯಡಿಯೂರಪ್ಪ, ಹಿಂದುತ್ವ, ಪಕ್ಷದ ವಿಚಾರದಲ್ಲಿ ನಮ್ಮ ಕುಟುಂಬದಿಂದ ಯಾವುದೇ ರಾಜೀ ಇಲ್ಲ ಎಂದು ಬಿ ವೈ ರಾಘವೇಂದ್ರ ಸ್ಷಷ್ಟಪಡಿಸಿದರು.
ಈಶ್ವರಪ್ಪ ಪಕ್ಷ ಕಟ್ಟಿದವರು, ಪರಿಸ್ಥಿತಿ ಅರ್ಥ ಮಾಡಿಕೊಳ್ಳಲಿ. ಈಶ್ವರಪ್ಪರ ಸಿಟ್ಟು ಇರೋದೇ ಹೈಕಮಾಂಡ್ ಮೇಲೆ, ಅದನ್ನ ಹೇಳಿಕೊಳ್ಳಲು ಅವರಿಗೆ ಆಗುತ್ತಿಲ್ಲ. ಈಶ್ವರಪ್ಪ ವಾರಕ್ಕೊಮ್ಮೆ, ಹದಿನೈದು ದಿನಕ್ಕೊಮ್ಮೆ ತಮ್ಮ ನಿಲುವು ಬದಲಾಯಿಸಿಕೊಳ್ತಾರೆ.
ಜನ ಇದನ್ನೆಲ್ಲ ಗಮನಿಸುತ್ತಿದ್ದಾರೆ ಎಂದರು.