Arvind Kejriwal ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಸಿಎಂ ಹುದ್ದೆಯಿಂದ ಪದಚ್ಯುತಿಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಮನವಿಯನ್ನು ದೆಹಲಿ ಹೈಕೋರ್ಟ್ ಗುರುವಾರ ತಿರಸ್ಕರಿಸಿದೆ.
ಈ ಕುರಿತ ಅರ್ಜಿಯನ್ನು ತಳ್ಳಿಹಾಕಿದ ದೆಹಲಿ ನ್ಯಾಯಾಲಯ, ಈ ವಿಚಾರದಲ್ಲಿ ನ್ಯಾಯಾಂಗ ಹಸ್ತಕ್ಷೇಪಕ್ಕೆ ಯಾವುದೇ ಅವಕಾಶವಿಲ್ಲ ಎಂದು ಹೇಳಿದೆ.
ರೈತ ಮತ್ತು ಸಾಮಾಜಿಕ ಕಾರ್ಯಕರ್ತ ಎಂದು ಹೇಳಿಕೊಂಡಿದ್ದ ದೆಹಲಿ ನಿವಾಸಿ ಸುರ್ಜಿತ್ ಸಿಂಗ್ ಯಾದವ್ ಈ ಬಗ್ಗೆ ಕೋರ್ಟ್ ಮೊರೆ ಹೋಗಿದ್ದರು. ಹಣಕಾಸು ಅವ್ಯವಹಾರದ ಆರೋಪ ಹೊತ್ತಿರುವ ಮುಖ್ಯಮಂತ್ರಿಯೊಬ್ಬರು ಸಾರ್ವಜನಿಕ ಹುದ್ದೆಯಲ್ಲಿ ಮುಂದುವರಿಯಲು ಅವಕಾಶ ನೀಡಬಾರದು ಎಂದು ಯಾದವ್ ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದರು.
Arvind Kejriwal ಅರ್ಜಿಯನ್ನು ವಜಾಗೊಳಿಸಿದ ದೆಹಲಿ ಹೈಕೋರ್ಟ್ನ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್, ಇದರಲ್ಲಿ ನ್ಯಾಯಾಂಗ ಹಸ್ತಕ್ಷೇಪಕ್ಕೆ ಯಾವುದೇ ಅವಕಾಶವಿದೆಯೇ? ನಾವು ಇಂದಿನ ಪತ್ರಿಕೆಯನ್ನು ಓದಿದ್ದೇವೆ. ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು ಈ ಸಮಸ್ಯೆಯನ್ನು ಪರಿಶೀಲಿಸುತ್ತಿದ್ದಾರೆ. ಅದು ರಾಷ್ಟ್ರಪತಿಗಳ ಬಳಿಗೆ ಹೋಗಲಿದೆ. ಲೆಫ್ಟಿನೆಂಟ್ ಗವರ್ನರ್ ಈ ಬಗ್ಗೆ ಪರಿಗಣಿಸಬೇಕು, ರಾಷ್ಟ್ರಪತಿಗಳು ಪರಿಗಣಿಸಬೇಕು. ನಾವು ಏಕೆ ಪರಿಗಣಿಸಬೇಕು, ಅವರು ಪರಿಗಣಿಸುತ್ತಾರೆ. ನಾವು ರಾಷ್ಟ್ರಪತಿ ಆಳ್ವಿಕೆಯನ್ನು ಹೇರುವುದಿಲ್ಲ. ಯಾವುದೇ ಹೈಕೋರ್ಟ್ ಅದನ್ನು ಮಾಡುವುದಿಲ್ಲ. ಅವರು ತೀರ್ಮಾನಕ್ಕೆ ಬರುತ್ತಾರೆ. ಅವರು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ಇದರಲ್ಲಿ ನ್ಯಾಯಾಂಗ ಹಸ್ತಕ್ಷೇಪಕ್ಕೆ ಯಾವುದೇ ಅವಕಾಶವಿಲ್ಲ ಎಂದು ನ್ಯಾಯಮೂರ್ತಿ ಮನಮೋಹನ್ ಅವರು ಹೇಳಿದ್ದಾರೆ.