Shimoga District Chamber Of Commerce ಮಲೆನಾಡಿನ ವ್ಯಾಪ್ತಿಯ ಮೂರ್ನಾಲ್ಕು ಜಿಲ್ಲೆಗಳ ಪ್ರವಾಸೋದ್ಯಮ ದೃಷ್ಠಿಯಿಂದ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು ಎಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಅಭಿಪ್ರಾಯಪಟ್ಟರು.
ಶಿವಮೊಗ್ಗ ನಗರದ ಶಾಂತಲಾ ಸ್ಪೆರೋಕಾಸ್ಟ್ ಸಭಾಂಗಣದಲ್ಲಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಆಯೋಜಿಸಿದ್ದ “2024-25 ರಾಜ್ಯ ಮತ್ತು ಕೇಂದ್ರ ಬಜೆಟ್ಗಳ ವಿಚಾರವಾಗಿ ಪೂರ್ವಭಾವಿ ಸಭೆ”ಯಲ್ಲಿ ಮಾತನಾಡಿದರು.
ರಾಜ್ಯ ಸರ್ಕಾರ ಬಜೆಟ್ನಲ್ಲಿ ಪ್ರವಾಸೋದ್ಯಮ ಅಭಿವೃದ್ದಿ ನಿಗಮ ಸ್ಥಾಪಿಸಲು ಕ್ರಮ ವಹಿಸಿ ಅನುದಾನ ಮೀಸಲಿಡಬೇಕು. ಪ್ರವಾಸೋದ್ಯಮದ ನಿಗಮದ ಮೂಲಕ ಶಿವಮೊಗ್ಗ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಪೂರಕ ಪ್ರವಾಸಿ ಯೋಜನೆ ರೂಪಿಸಿ ಅನುಷ್ಠಾನಗೊಳಿಸಬೇಕು. ಮಲೆನಾಡಿನ ಭಾಗದ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ವಿಮಾನ ನಿಲ್ದಾಣದಲ್ಲಿ ರಾತ್ರಿ ಲ್ಯಾಂಡಿಂಗ್ ವ್ಯವಸ್ಥೆಯು ಆರಂಭಗೊಂಡು ಹೆಚ್ಚು ವಿಮಾನ ಸೇವೆ ಆರಂಭಗೊಳ್ಳಬೇಕು. ಶಿವಮೊಗ್ಗ-ದಾವಣಗೆರೆ, ಚಿತ್ರದುರ್ಗ ಕೈಗಾರಿಕಾ ಕಾರಿಡಾರ್ ಸ್ಥಾಪನೆಗೆ ರಾಜ್ಯ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದರು.
ಬೀರೂರು ಶಿವಮೊಗ್ಗ ರೈಲ್ವೇ ಡಬ್ಲಿಂಗ್ ಕಾಮಗಾರಿ ಪೂರ್ಣಗೊಳಿಸಬೇಕು. ತಾಳಗುಪ್ಪ – ಹುಬ್ಬಳ್ಳಿ ಹಾಗೂ ಶಿವಮೊಗ್ಗ – ಹರಿಹರ ರೈಲ್ವೇ ಮಾರ್ಗದ ಯೋಜನೆಗಳಿಗೆ ಅನುದಾನ ನೀಡಬೇಕು. ಶಿವಮೊಗ್ಗದಿಂದ ಆಗಬೇಕಿರುವ ಹೊಸ ರೈಲ್ವೇ ಕಾಮಗಾರಿಗಳ ಶೀಘ್ರ ಅನುಷ್ಠಾನಕ್ಕೆ ಕೇಂದ್ರ ಸರ್ಕಾರ ಕ್ರಮ ವಹಿಸಬೇಕು. ಇ ತ್ಯಾಜ್ಯ ನಿರ್ವಹಣೆಗೆ ಎಲ್ಲ ಜಿಲ್ಲೆಗಳಲ್ಲಿ ಜಾಗ ಮೀಸಲಿಟ್ಟು ವಾಣಿಜ್ಯ ಮತ್ತು ಕೈಗಾರಿಕಾ ಸಂಘಗಳಿಗೆ ನಿರ್ವಹಣೆ ಮಾಡಲು ಅವಕಾಶ ನೀಡಬೇಕು. ಉದ್ಯೋಗ ಸೃಷ್ಠಿಗೆ ಹೆಚ್ಚಿನ ಕೆರಿಯರ್ ಪಾರ್ಕ್ ನಿರ್ಮಿಸಬೇಕು ಎಂದು ತಿಳಿಸಿದರು.
Shimoga District Chamber Of Commerce ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ತೆರಿಗೆ ಸಲಹಾ ಸಮಿತಿ ಅಧ್ಯಕ್ಷ ಇ.ಪರಮೇಶ್ವರ್ ಅವರು ತೆರಿಗೆ ಸಂಬಂಧಿಸಿದ ನೀತಿಗಳನ್ನು ಸರಳಗೊಳಿಸಬೇಕು ಎಂದು ತಿಳಿಸಿದರು. ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಕಾರ್ಯದರ್ಶಿ ವಸಂತ ಹೋಬಳಿದಾರ್, ಸಹ ಕಾರ್ಯದರ್ಶಿ ಜಿ.ವಿಜಯಕುಮಾರ್ ಉಪಸ್ಥಿತರಿದ್ದರು.