Congress Karnataka ರಾಜ್ಯ ಸರ್ಕಾರ ಬರ ಪರಿಹಾರದ ಯೋಜನೆಗಳನ್ನು ರೂಪಿಸದೆ ಕೈಚೆಲ್ಲಿ ಕುಳಿತಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂಪ್ಪರವರು ಮಾಡಿರುವ ಆರೋಪವು ತಮ್ಮ ಮಕ್ಕಳ ರಾಜಕೀಯ ಭವಿಷ್ಯವನ್ನು ಮತ್ತಷ್ಷು ಗಟ್ಟಿ ಮಾಡುವ ತಂತ್ರದ ಆರೋಪವಾಗಿದೆ ಎಂದು ಜಿಲ್ಲಾ ಕಾಂಗ್ರೇಸ್ ವಕ್ತಾರರಾದ ವೈ.ಬಿ.ಚಂದ್ರಕಾಂತ್ ತಿರುಗೇಟು ನೀಡಿದ್ದಾರೆ.
ರಾಜ್ಯದಲ್ಲಿ ಮಳೆ ಬರದೆ ಬರಗಾಲ ಆವರಿಸಿರುವುದು ನಿಜವಾದರೂ ಜನ ಸಾಮಾನ್ಯರ ಮತ್ತು ರೈತರ ಹಿತವನ್ನು ಕಾಪಾಡಲು ರಾಜ್ಯ ಸರ್ಕಾರ ತ್ವರಿತವಾಗಿ ಈಗಾಗಲೆ ಎಲ್ಲಾ ಮಾಹಿತಿಯನ್ನು ಸಂಗ್ರಹಿಸಿದೆ. ಅದೆ ರೀತಿ ರಾಜ್ಯದ ಜಿಲ್ಲಾಡಳಿತಗಳಿಗೆ ಸಮರೋಪಾದೆಯಲ್ಲಿ ಕುಡಿಯುವ ನೀರು ಮತ್ತು ಇನ್ನಿತರೆ ಪರಿಹಾರ ಕಾರ್ಯಗಳ ಕೈಗೊಳ್ಳುವಂತೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ ಎಂದು ವಕ್ತಾರರಾದ ವೈ.ಬಿ.ಚಂದ್ರಕಾಂತ್ ಅವರು ಹೇಳಿದ್ದಾರೆ.
ಬಿ.ಎಸ್.ಯಡಿಯೂರಪ್ಪರವರು ಮುಖ್ಯಮಂತ್ರಿ ಆಗಿದ್ದಾಗ ಗೊಬ್ಬರ ಕೇಳಿ ಹೋರಾಡಕ್ಕಿಳಿದ ರೈತರ ಮೇಲೆ ಗೋಲಿಬಾರ್ ನೆಡೆದು ರೈತರು ಸಾವು ಕಂಡಿದ್ದರು, ಉತ್ತರ ಕರ್ನಾಟಕ ಭಾಗವೂ ಸೇರಿದಂತೆ ರಾಜ್ಯದೆಲ್ಲೆಡೆ ಮಳೆಯಿಂದ ಪ್ರವಾಹ ಉಂಟಾಗಿ ಸಾವಿರಾರು ಜನರು ಮನೆ ಮಠ ಕಳೆದುಕೊಂಡು ಬೀದಿಗೆ ಬಿದ್ದಾಗ ಬಿ.ಎಸ್.ಯಡಿಯೂರಪ್ಪರವರಾಗಲಿ, ಪ್ರಧಾನಿ ನರೇಂದ್ರ ಮೋದಿಯವರಾಗಲಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಜನರ ಮೇಲೆ ಏಕೆ ಕನಿಕರ ತೋರಿಸಲಿಲ್ಲವೆಂದು ಅವರು ಪ್ರಶ್ನಿಸಿದ್ದಾರೆ.
ಐಟಿ ಇಲಾಖೆಯ ದಾಳಿಯ ವೇಳೆ ದೊರೆತಿರುವ ಕೋಟ್ಯಾಂತರ ಹಣ ಕಾಂಗ್ರೇಸ್ ಪಕ್ಷವು ಪಂಚ ರಾಜ್ಯಗಳ ಚುನಾವಣೆಗೆ ಸಂಗ್ರಹಿಸಿಟ್ಟರುವ ಹಣವೆಂದು ಕೇಂದ್ರದ ಸಚಿವ ಪ್ರಹ್ಲಾದ್ ಜೋಶಿ ನೀಡಿರುವ ಹೇಳಿಕೆಯು ಸರಿಯಾಗಿದೆ ಎಂದು ಬಿ.ಎಸ್.ಯಡಿಯೂರಪ್ಪರವರು ಸಮರ್ಥಿಸಿಕೊಂಡಿರುವುದು ಹಾಸ್ಯಾಸ್ಪದವಾಗಿದೆ. ಕಾಂಗ್ರೇಸ್ ಪಕ್ಷದ ಮೇಲೆ ಮತ್ತು ಕಾಗ್ರೇಸ್ ಪಕ್ಷದ ಮುಖಂಡರ ಮೇಲೆ ಇಂತಹ ಆರೋಪಗಳ ಮಾಡುವ ಮುನ್ನ ತಾವು ರಾಜಕೀಯಕ್ಕೆ ಬರುವ ಮೊದಲಿನ ತಮ್ಮ ಆರ್ಥಿಕ ಸ್ಥಿತಿ ಮತ್ತು ಈಗಿರುವ ಸ್ಥಿತಿಯ ಬಗ್ಗೆ ಅವರೇ ಆತ್ಮಾವಲೋಕನ ಮಾಡಿಕೊಂಡು ಇಂತಹ ಹೇಳಿಕೆಗಳ ಕೊಡುವುದು ಒಳ್ಳೆಯದೆಂದು ವೈ.ಬಿ.ಚಂದ್ರಕಾಂತ್ ಅವರು ಮಾರ್ಮಿಕವಾಗಿ ಹೇಳಿದ್ದಾರೆ.
Congress Karnataka ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷದ ಸರ್ಕಾರ ಆಡಳಿತಕ್ಕೆ ಬಂದು ಇನ್ನು 6 ತಿಂಗಳು ಕಳೆದಿಲ್ಲ. ಬಿಜೆ.ಪಿ. ಸರ್ಕಾರ ಮಂಡಿಸಿದ್ದ ಬಜೆಟ್‌ನ ಅವಧಿಯೂ ಮುಗಿದು ೪ ತಿಂಗಳು ಕಳೆದಿರುವುದಿಲ್ಲ. ಆದರೂ, ಬಿ.ಜೆ.ಪಿ. ನಾಯಕರು ಕಾಂಗ್ರೇಸ್ ಸರ್ಕಾರದ ಮೇಲೆ ಇಂತಹ ಹೊಣೆಗೇಡಿತನದ ಹೇಳಿಕೆಗಳ ಕೊಡುವ ಮೂಲಕ ರಾಜ್ಯದ ಜನರಲ್ಲಿ ಕಾಂಗ್ರೇಸ್ ಸರ್ಕಾರದ ಮೇಲೆ ಕೆಟ್ಟ ಹೆಸರು ತರಬಹುದೆಂದು ಭಾವಿಸಿದ್ದರೆ ರಾಜ್ಯದ ಜನರೇನು ಮೂರ್ಖರಲ್ಲ ಎನ್ನುವುದನ್ನು ಬಿ.ಜೆ.ಪಿ. ನಾಯಕರು ಅರ್ಥಮಾಡಿಕೊಳ್ಳುವುದು ಒಳ್ಳೆಯದೆಂದು ಜಿಲ್ಲಾ ಕಾಂಗ್ರೇಸ್ ವಕ್ತಾರರಾದ ವೈ.ಬಿ.ಚಂದ್ರಕಾಂತ್ ತಿರುಗೇಟು ನೀಡಿದ್ದಾರೆ.