Dr. Sir M. Visveswaraiah ಲಕ್ಷಾಂತರ ಜನರು ಬದುಕು ರೂಪಿಸಿಕೊಳ್ಳಲು ಕಾರಣರಾದ ಮಹಾನ್ ವ್ಯಕ್ತಿ ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯ ಎಂದು ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಹೇಳಿದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಶಾಂತಲಾ ಸ್ಪೇರೋಕಾಸ್ಟ್ ಸಭಾಂಗಣದಲ್ಲಿ ಆಯೋಜಿಸಿದ್ದ ಇಂಜಿನಿಯರ್ ದಿನ ಮತ್ತು ಭಾರತರತ್ನ ಡಾ. ಸರ್.ಎಂ.ವಿಶ್ವೇಶ್ವರಯ್ಯ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿಶ್ವೇಶ್ವರಯ್ಯ ಅವರ ದೂರದೃಷ್ಟಿ ಯೋಜನೆಗಳು ಇಂದಿಗೂ ಜನಮಾನಸದಲ್ಲಿ ಉಳಿದಿದ್ದು, ರಾಜ್ಯಕ್ಕೆ ಅವರು ನೀಡಿದ ಕೊಡುಗೆಗಳು ಸ್ಮರಣೀಯ. ಅಣೆಕಟ್ಟು, ಕಾರ್ಖಾನೆ ಸೇರಿದಂತೆ ವಿಶ್ವೇಶ್ವರಯ್ಯ ಅವರು ಸ್ಥಾಪಿಸಿದ ಸಂಸ್ಥೆಗಳು ಸಾವಿರಾರು ಜನರಿಗೆ ಬದುಕು ಕಟ್ಟಿಕೊಟ್ಟಿವೆ ಎಂದು ತಿಳಿಸಿದರು.
ಉದ್ಯಮ ಆಕಾಂಕ್ಷಿಗಳು ಬಂಡವಾಳ ಹೂಡಿಕೆ ಜತೆಯಲ್ಲಿ ಕೌಶಲ್ಯಕ್ಕೂ ಪ್ರಾಮುಖ್ಯತೆ ನೀಡಬೇಕು. ಉದ್ಯಮ ಆಕಾಂಕ್ಷಿಗಳಿಗೆ ಕೌಶಲ್ಯ ತರಬೇತಿ ನೀಡುವ ಆಶಯದಿಂದ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಸ್ಕೀಲ್ ಅಕಾಡೆಮಿ ಸ್ಥಾಪಿಸಲು ಮುಂದಾಗಿದ್ದು, ಜಿಲ್ಲಾಡಳಿತ ಸಂಪೂರ್ಣ ಸಹಕಾರ ನೀಡಲಾಗುವುದು. ರಾಜ್ಯದ ಸಚಿವರು ಹಾಗೂ ಕಾರ್ಯದರ್ಶಿ ಜತೆ ಸಂಘದ ಪದಾಧಿಕಾರಿಗಳೊಂದಿಗೆ ಭೇಟಿ ನೀಡಿ ಚರ್ಚಿಸಲು ಕ್ರಮ ವಹಿಸಲಾಗುವುದು ಎಂದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಮಾತನಾಡಿ, ದೇಶದ ಅಭಿವೃದ್ಧಿ ಯಲ್ಲಿ ಹಾಗೂ ಅನೇಕ ಯೋಜನೆಗಳಲ್ಲಿ ಮಹತ್ತರ ಪಾತ್ರ ವಹಿಸಿದ ವ್ಯಕ್ತಿ ವಿಶ್ವೇಶ್ವರಯ್ಯ. ಅತ್ಯಂತ ಸಮರ್ಥ ಆಡಳಿತಗಾರ, ಶ್ರೇಷ್ಠ ಇಂಜಿನಿಯರ್ ಆಗಿರುವ ವಿಶ್ವೇಶ್ವರಯ್ಯ ನಮಗೆಲ್ಲರಿಗೂ ಮಾದರಿ ಎಂದು ಹೇಳಿದರು.
Dr. Sir M. Visveswaraiah ಶಿವಮೊಗ್ಗ ದಲ್ಲಿ ವಿಮಾನ ಯಾನ ಆರಂಭಗೊಂಡಿದ್ದು , ಕೈಗಾರಿಕಾ ಕ್ಷೇತ್ರಕ್ಕೆ ಅನುಕೂಲವಾಗಲಿದೆ. ದೇಶದ ಉದ್ಯಮ ಕ್ಷೇತ್ರಕ್ಕೆ ಶಿವಮೊಗ್ಗ ಜಿಲ್ಲೆಯು ಹೆಚ್ಚಿನ ಕೊಡುಗೆ ನೀಡುವಂತಾಗಬೇಕು. ದೇಶದ ಆರ್ಥಿಕ ಸ್ಥಿತಿ ವೃದ್ಧಿಸಲು ಶಿವಮೊಗ್ಗ ಜಿಲ್ಲೆಯು ಮಹತ್ತರ ಪಾತ್ರ ವಹಿಸಬೇಕು ಎಂದು ತಿಳಿಸಿದರು.
ಇನ್ಸ್ಟಿಟ್ಯೂಟ್ ಆಫ್ ಇಂಡಿಯನ್ ಫೌಂಡ್ರಿಮೆನ್ ರಾಷ್ಟ್ರೀಯ ಅಧ್ಯಕ್ಷ ಡಿ.ಎಸ್.ಚಂದ್ರಶೇಖರ್ ಮಾತನಾಡಿ, ರಫ್ತು ಕ್ಷೇತ್ರದಲ್ಲಿ ಶಿವಮೊಗ್ಗ ಜಿಲ್ಲೆಯು ಮುಂದಿನ ವರ್ಷಗಳಲ್ಲಿ ಮಹತ್ತರ ಸ್ಥಾನ ಪಡೆಯುವ ವಿಶ್ವಾಸ ಇದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರ ಪ್ರಯತ್ನದಿಂದ ಶಿವಮೊಗ್ಗ ದಲ್ಲಿ ವಿಮಾನಯಾನ ಸೇವೆ ಆರಂಭಗೊಂಡಿದ್ದು, ಇದರಿಂದ ಉದ್ಯಮ, ಕೈಗಾರಿಕೆ ಹಾಗೂ ರಫ್ತು ಕ್ಷೇತ್ರದಲ್ಲಿ ಶಿವಮೊಗ್ಗ ಜಿಲ್ಲೆ ಹೆಚ್ಚಿನ ಸಾಧನೆ ಮಾಡಲು ಸಾಧ್ಯವಾಗಲಿದೆ ಎಂದು ಹೇಳಿದರು.
ವಿಶ್ವೇಶ್ವರಯ್ಯ ಅವರ ವ್ಯಕ್ತಿತ್ವ ಎಲ್ಲರಿಗೂ ಮಾದರಿ. ಯುವ ಪೀಳಿಗೆಯು ಸರ್ ಎಂ.ವಿ. ಅವರ ಜೀವನ ಚರಿತ್ರೆ ಬಗ್ಗೆ ಅಧ್ಯಯನ ನಡೆಸಿ ಒಳ್ಳೆಯ ವಿಷಯಗಳನ್ನು ಅರಿತುಕೊಳ್ಳಬೇಕು. ಸರಳತೆ, ಸಮಯ ಪಾಲನೆ, ಶಿಸ್ತು ಸೇರಿದಂತೆ ಅವರು ಜೀವನದಲ್ಲಿ ಅನುಸರಿಸುತ್ತಿದ್ದ ಸಣ್ಣ ಸಣ್ಣ ಅಂಶಗಳು ಸಹ ನಾವು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ನೆರವಾಗುತ್ತವೆ ಎಂದು ತಿಳಿಸಿದರು.
ಹಾರ್ನಳ್ಳಿ ಕೆ.ಮಂಜಪ್ಪ & ಕೋ ಸಂಸ್ಥೆಯ ಎಚ್.ಎಂ.ಲೀಲಾಮೂರ್ತಿ ಅವರಿಗೆ ವಿಶೇಷ ಗೌರವಾರ್ಪಣೆ, ವಿಜಯ್ ಟೆಕ್ನೋಕ್ರ್ಯಾಟ್ಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಿ.ಜಿ.ಬೆನಕಪ್ಪ ಅವರಿಗೆ ವಿಶೇಷ ಸನ್ಮಾನ ನೀಡಿ ಅಭಿನಂದಿಸಲಾಯಿತು.
ಪ್ರಣವ್ ಪ್ಯಾಕೆಜಿಂಗ್, ಶಿವಾಜಿ ಆಗ್ರೋ ಕಾಂಪೋನೆಂಟ್ಸ್ ಮತ್ತು ಎನ್.ಎನ್.ಇಂಜಿನಿಯರಿಂಗ್ ಸಂಸ್ಥೆಗಳಿಗೆ 2023ನೇ ಸಾಲಿನ ಕೈಗಾರಿಕಾ ಪ್ರಶಸ್ತಿ ಪುರಸ್ಕಾರ ಪ್ರದಾನ ಮಾಡಲಾಯಿತು.
ಪ್ರಾರ್ಥನಾ ಇಂಜಿನಿಯರಿಂಗ್ ಸೂಪರ್ವೈಸರ್ ಕೆ.ವೇದನಾಥನ್, ವೋಲ್ ಮ್ಯಾಕ್ ಕಾಂಪೋನೆಂಟ್ಸ್ ಸಂಸ್ಥೆಯ ಸಿ.ವಿರೇಂದ್ರ ಅವರಿಗೆ ಅತ್ತ್ಯುತ್ತಮ ಕಾರ್ಮಿಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಖಜಾಂಚಿ ಎಂ.ರಾಜು ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೌಢಶಾಲಾ ಮತ್ತು ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಭಾಷಣ, ರಸಪ್ರಶ್ನೆ, ಪ್ರಬಂಧ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಬಿ.ಗೋಪಿನಾಥ್, ಕಾರ್ಯದರ್ಶಿ ವಸಂತ್ ಹೋಬಳಿದಾರ್, ಖಜಾಂಚಿ ಎಂ.ರಾಜು, ಸಹ ಕಾರ್ಯದರ್ಶಿ ಜಿ.ವಿಜಯ್ಕುಮಾರ್, ನಿರ್ದೇಶಕ ಬಿ.ಆರ್.ಸಂತೋಷ್, ಸಂಘದ ನಿರ್ದೇಶಕರು, ಸಂಯೋಜಿತ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.