Librarian’s Day ಗ್ರಂಥಾಲಯಗಳು ಜ್ಞಾನ ಭಂಡಾರ ನಿಧಿಯಂತೆ. ವ್ಯಕ್ತಿತ್ವ ವಿಕಸನದ ಜತೆಗೆ ಜ್ಞಾನದ ಬೆಳವಣಿಗೆಗೆ ಸಹಕಾರಿಯಾಗಲಿವೆ. ಎಲ್ಲರೂ ಇದರ ಸದುಪಯೋಗಪಡೆದುಕೊಳ್ಳಬೇಕು ಎಂದು ಗ್ರಂಥಪಾಲಕ ಬಿ.ಎಂ.ಸಿದ್ದಪ್ಪ ಹೇಳಿದರು.
ಚಿಕ್ಕಮಗಳೂರು ನಗರ ಕೇಂದ್ರ ಗ್ರಂಥಾಲಯದಲ್ಲಿ ಏರ್ಪಡಿಸಿದ್ದ ‘ಗ್ರಂಥಪಾಲಕರ ದಿನಾಚರಣೆ’ ಹಾಗೂ ಪುಸ್ತಕ ಪ್ರದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಓದುಗರಿಗೆ ಅನುಕೂಲವಾಗಬೇಕು ಎಂಬ ಉದ್ದೇಶದಿಂದ ಅನೇಕ ಪುಸ್ತಕಗಳನ್ನು ಡಿಜಿಟಲೀಕರಣ ಮಾಡಲಾಗಿದೆ. ಓದುಗರು ಇದರ ಪ್ರಯೋಜನ ಪಡೆದುಕೊಳ್ಳಬೇಕು. ಜಿಲ್ಲೆಯಲ್ಲಿ ಈಗಾಗಲೇ ಆನ್‌ಲೈನ್ ಮೂಲಕ ಸದಸ್ಯತ್ವ ನೋಂದಣ ಪ್ರಾರಂಭವಾಗಿದೆ. ಪ್ರತಿಯೊಬ್ಬರು ಸದಸ್ಯತ್ವ ಪಡೆದುಕೊಂಡು ಲಭ್ಯವಿರುವ ಪುಸ್ತಕಗಳನ್ನು ಡಿಜಿಟಲ್‌ನಲ್ಲೂ ಓದಿಕೊಳ್ಳಬಹುದು ಎಂದರು.
ಜಿಲ್ಲಾ ಗ್ರಂಥಾಲಯದಲ್ಲಿ ೯೦೦ ಸಾವಿರಕ್ಕೂ ಹೆಚ್ಚು ಪುಸ್ತಕಗಳಿವೆ. ವಿದ್ಯಾರ್ಥಿಗಳು ಪುಸ್ತಕಗಳನ್ನು ಓದುವ ಹವ್ಯಾಸ ಮೈಗೂಡಿಸಿಕೊಳ್ಳಬೇಕು. ಅವುಗಳು ವಿದ್ಯಾರ್ಥಿಗಳ ಪಾಲಿಗೆ ಉತ್ತಮ ಸ್ನೇಹಿತರಿದ್ದಂತೆ ಎಂದು ಹೇಳಿದರು.
Librarian’s Day ಗ್ರಂಥಾಲಯ ಪಿತಾಮಹರಾದ ಡಾ.ಎಸ್.ಆರ್.ರಂಗನಾಥನ್ ಅವರ ಜನ್ಮ ದಿನಾಚರಣೆ ಸ್ಮರಣಾರ್ಥ ಆ. ೧೨ ರಂದು ಗ್ರಂಥಪಾಲಕರ ದಿನ ಆಚರಿಸಲಾಗುತ್ತಿದೆ. ಗ್ರಂಥಾಲಯ ವಿಜ್ಞಾನಕ್ಕೆ ಹೆಚ್ಚು ಮನ್ನಣೆ ತಂದುಕೊಟ್ಟವರು ರಂಗನಾಥನ್. ಆಧುನಿಕ ತಂತ್ರಜ್ಞಾನ ಕಾಲದಲ್ಲಿ ಗ್ರಂಥಾಲಯಗಳು ಡಿಜಿಟಲೀಕರಣಗೊಳ್ಳುತ್ತಿವೆ. ಬೆರಳ ತುದಿ ಪುಸ್ತಕಗಳನ್ನು ಓದಿ ಮಾಹಿತಿ ಸಂಗ್ರಹಿಸಿ ಕೊಳ್ಳಲು ಸಾಧ್ಯವಾಗುತ್ತಿದೆ ಎಂದರು.
ಜಿಲ್ಲೆಯಲ್ಲಿ ೧,೨೯,೪೩೨ ಸದಸ್ಯತ್ವ: ಪುಸ್ತಕಗಳು ಒಂದೆಡೆ ಲಭ್ಯವಾಗುವುದರಿಂದ ವಿದ್ಯಾರ್ಥಿಗಳಿಗೆ, ಸ್ಪರ್ಧಾತ್ಮಕ ಪರೀಕ್ಷೆ ಆಕಾಂಕ್ಷಿಗಳಿಗೆ ಅನುಕೂಲಕರ. ಗ್ರಂಥಾಲಯಗಳಲ್ಲಿ ಕುಳಿತು ಪುಸ್ತಕಗಳನ್ನು ಓದಿದವರು ಸರ್ಕಾರಿ ಹುದ್ದೆ ಅಲಂಕರಿಸಿದ್ದಾರೆ. ಗ್ರಂಥಾಲಯ ತನ್ನ ಮೌಲ್ಯ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ, ಜಾಗತಿಕ ಮಟ್ಟದಲ್ಲಿ ತಂತ್ರಜ್ಞಾನ ಮುಂದುವರೆಯುತ್ತಿದ್ದರು ಗ್ರಂಥಾಲಯಕ್ಕೆ ಬರುವವರ ಸಂಖ್ಯೆ ಹೆಚ್ಚುತ್ತಿದೆ ಎಂದು ತಿಳಿಸಿದರು.
ನಗರ ಕೇಂದ್ರ ಗ್ರಂಥಾಲಯ ಸಿಬ್ಬಂದಿಗಳಾದ ರಾಘವೇಂದ್ರ, ಮಂಜುನಾಥಸ್ವಾಮಿ, ಬಿ.ರೂಪಾ, ಸೌಮ್ಯ, ಲೋಕೇಶ್ ಇದ್ದರು.