VISL Bhadravathi ಭದ್ರಾವತಿಯಲ್ಲಿರುವ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯನ್ನು ಮುಚ್ಚಬಾರದು ಎಂದು ಒತ್ತಾಯಿಸಿ ಕೇಂದ್ರ ಉಕ್ಕು ಸಚಿವ ಜ್ಯೋತಿರಾದಿತ್ಯ ಸಿಂಧಿಯ ಹಾಗೂ ಭಾರತೀಯ ಉಕ್ಕು ಪ್ರಾಧಿಕಾರದ ಅಧ್ಯಕ್ಷರಿಗೆ ಕರ್ನಾಟಕ ಸರ್ಕಾರ ಮತ್ತೊಮ್ಮೆ ಪತ್ರ ಬರೆದಿದೆ.
ಕಾರ್ಖಾನೆಯನ್ನು ಪುನರ್ಜೀವನಗೊಳಿಸಲು ಕೇಂದ್ರ ಸರ್ಕಾರ ಕೈಗೊಂಡ ಎಲ್ಲಾ ಕ್ರಮಗಳು ವಿಫಲಗೊಂಡ ಕಾರಣ ಕಾರ್ಖಾನೆಯನ್ನ ಮುಚ್ಚಲು ತೀರ್ಮಾನಿಸಲಾಗಿದೆ ಎಂದು ಉಕ್ಕು ಸಚಿವರು ಲೋಕಸಭೆಗೆ ತಿಳಿಸಿದ್ದರು.
ಸಂಸ್ಥೆ ಖಾಸಗಿಕರಣ ಮಾಡಲು ಕೇಂದ್ರ ಸಚಿವ ಸಂಪುಟ ವು 2016ರಲ್ಲಿ ಒಪ್ಪಿಗೆ ನೀಡಿತ್ತು. ಸಂಸ್ಥೆಯನ್ನು ಸಂಪೂರ್ಣವಾಗಿ ಮಾರಾಟ ಮಾಡಲು ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣಾ ಇಲಾಖೆಯು ಈ ಹಿಂದೆ ಬಿಡ್ ಕರೆದಿತ್ತು. ಬಿಡ್ ದಾರರು ಆಸಕ್ತಿ ವಹಿಸದ ಕಾರಣಕ್ಕೆ ಖಾಸಗಿಕರಣ ಮಾಡುವ ಪ್ರಕ್ರಿಯೆಯನ್ನು ಕೇಂದ್ರ 2022 ರ ನವೆಂಬರ್ ನಲ್ಲಿ ಕೈಬಿಟ್ಟಿತ್ತು. ನಂತರ ಸರ್ಕಾರವು ಕಾರ್ಖಾನೆಯನ್ನು ಮುಚ್ಚಲು ತೀರ್ಮಾನಿಸಿತ್ತು.
VISL Bhadravathi ಕಾರ್ಖಾನೆಯನ್ನು ಮುಚ್ಚಬಾರದು ಎಂದು ಒತ್ತಾಯಿಸಿ ರಾಜ್ಯ ಸರ್ಕಾರವು 2019,2020, ಹಾಗೂ 2021 ರಲ್ಲಿ ಪತ್ರ ಬರೆದು ಒತ್ತಾಯಿಸಿತ್ತು. ಆದರೆ, ಕಾರ್ಖಾನೆಯನ್ನು ಬಂದ್ ಮಾಡಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಅದರ ಬದಲು ಉಕ್ಕು ಪ್ರಾಧಿಕಾರವು ಕಾರ್ಖಾನೆಗೆ ಹೆಚ್ಚಿನ ಬಂಡವಾಳ ಹೂಡಬೇಕು. ಅಗತ್ಯವಿದ್ದರೆ ಖಾಸಗಿಯವರಿಗೆ ವಹಿಸಲು ಮತ್ತೊಮ್ಮೆ ಬಿಡ್ ಕರೆಯಬೇಕು ಎಂದು ರಾಜ್ಯ ಸರ್ಕಾರವು ಪತ್ರದಲ್ಲಿ ತಿಳಿಸಿದೆ.