Bike Jatha ಸಾಧಕರನ್ನು ಗೌರವಿಸುವುದರಿಂದ ಸಮಾಜದಲ್ಲಿ ಇತತರಿಗೂ ಪ್ರೇರಣೆ ನೀಡಲು ಸಾಧ್ಯವಾಗುತ್ತದೆ. ಪ್ರತಿಯೊಬ್ಬರು ಸಾಹಸ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಹೇಳಿದರು.
ನೇಪಾಳದಿಂದ ಶಿವಮೊಗ್ಗದ ಗೋಪಾಳದವರೆಗೂ ಬೈಕ್ ರ‍್ಯಾಲಿ ನಡೆಸಿದ ಸಾಹಸಿಗರಿಗೆ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಮಾತನಾಡಿದರು.
ಅಂತರಾಷ್ಟ್ರೀಯ ಬೈಕ್ ರ‍್ಯಾಲಿ ಕಾರ್ಯದಲ್ಲಿ ಸಾಹಸಿಗರು ವೈವಿಧ್ಯಮಯ ಸಂಸ್ಕೃತಿ ಪರಂಪರೆಯ ಅರಿವು ಹೊಂದಿದ್ದಾರೆ. ದೇಶದ ವಿವಿಧ ರಾಜ್ಯಗಳ ಸಂಸ್ಕೃತಿ, ಜೀವನಶೈಲಿ ಪರಿಚಯವಾಗಿದೆ. ಸಾಹಸದ ಬೈಕ್ ಪ್ರಯಾಣ ಮಾಡಿರುವುದಕ್ಕೆ ಅಭಿನಂದನೆಗಳು ಎಂದು ತಿಳಿಸಿದರು.
ಹದಿನೈದು ದಿನಗಳ ಮೊದಲು ಇದೇ ಶಾಂತಲಾ ಸಭಾಂಗಣದಲ್ಲಿ ಶುಭಹಾರೈಸಿ ಬೀಳ್ಕೋಟ್ಟಿದ್ದೆವು. ಎಲ್ಲರೂ ಸುರಕ್ಷಿತವಾಗಿ ಹಿಂದಿರುಗಿರುವುದು ಬಹಳ ಸಂತೋಷ. ಸಾಹಸ ಪ್ರವಾಸ ಕೈಗೊಳ್ಳಲು ಅನುವು ಮಾಡಿಕೊಟ್ಟ ಅವರ ಕುಟುಂಬದವರಿಗೆ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಕೇಂದ್ರದ ಪದಾಧಿಕಾರಿಗಳಿಗೆ ಹಾಗೂ ಸಹಕರಿಸಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದರು.
ಸುರಕ್ಷತೆ ಪ್ರಯಾಣದ ಜಾಗೃತಿ ಬಗ್ಗೆ ಸಂದೇಶ ಸಾರಿದ ಬೈಕ್ ಸವಾರರಿಗೆ ರೋಟರಿ ಸಹಾಯಕ ಗವರ್ನರ್ ಡಾ. ಗುಡದಪ್ಪ ಕಸಬಿ ಅಭಿನಂದಿಸಿದರು.
ಅಂತರಾಷ್ಟ್ರೀಯ ರೋಟರಿ ಸಂಸ್ಥೆ ಸಹಕಾರದಲ್ಲಿ ಕಾರ್ಯಕ್ರಮ ಜರುಗಿರುವುದು ಸಂತಸ ತಂದಿದೆ ಎಂದು ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷೆ ಸುಮತಿ ಕುಮಾರಸ್ವಾಮಿ ತಿಳಿಸಿದರು.
ತರುಣೋದಯ ಘಟಕದ ಅಧ್ಯಕ್ಷ ವಾಗೇಶ್ ಮಾತನಾಡಿ, ಚಾರಣ, ಸಾಹಸಕ್ಕೆ ಹೆಚ್ಚು ಒತ್ತು ಕೊಡುವ ಯೂತ್ ಹಾಸ್ಟೆಲ್ಸ್, ಪ್ರಥಮ ಬಾರಿಗೆ ಅಂತರ ರಾಷ್ಟ್ರೀಯ ಬೈಕ್ ಸಾಹಸ ಯಶಸ್ವಿಯಾಗಿ ಪೂರೈಸಿದೆ. ಸಾಹಸಿಗಳು ಎಷ್ಟೇ ಸಂಖ್ಯೆಯಲ್ಲಿ ಬರಲಿ ನಾವು ಅವರಿಗೆ ಉತ್ತೇಜನ ನೀಡಿ ಸಹಕಾರ ನೀಡಲಾಗುವುದು ಎಂದು ಹೇಳಿದರು.
ಸಾಹಸಿ ಅ.ನಾ.ವಿಜಯೇಂದ್ರ ಮಾತನಾಡಿ, ಕೆಲವು ಸಾಹಸಿಗರನ್ನು ಸೇರಿಸಿಕೊಂಡು ಬೈಕ್ ನಲ್ಲಿ ದೇಶ ಸುತ್ತುತ್ತಿದ್ದೆವು. ಈ ಬಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ, ರೋಟರಿ, ಯೂತ್ ಹಾಸ್ಟೆಲ್ಸ್ ನೆರವಿನಿಂದ ಕ್ರಮ ಬದ್ಧ ಪ್ರಯಾಣ ಹಾಗೂ ಉತ್ತಮ ಪ್ರದೇಶಗಳ ಭೇಟಿ ಮಾಡಿ ಕೊಂಡು ಬರಲು ಸಹಕಾರಿಯಾಯಿತು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಮಾತನಾಡಿ, ಸಂಘದ ವಜ್ರ ಮಹೋತ್ಸವ ಪ್ರಯುಕ್ತ ಪ್ರಥಮ ಕಾರ್ಯಕ್ರಮ ರೂಪದಲ್ಲಿ ಆಯೋಜಿಸಿದ್ದ ಅಂತರಾಷ್ಟ್ರೀಯ ಬೈಕ್ ರ‍್ಯಾಲಿ ಯಶಸ್ವಿಯಾಗಿದೆ. ಪ್ರವಾಸೋದ್ಯಮ ಉನ್ನತೀಕರಣಕ್ಕಾಗಿ ಶಿವಮೊಗ್ಗಕ್ಕೆ ಬನ್ನಿ, ಸುರಕ್ಷಿತ ವಾಹನ ಚಾಲನೆ ಎಂಬ ವಿಚಾರವನ್ನು ಜಾಗೃತಿ ಮೂಡಿಸಲಾಗಿದೆ ಎಂದರು.
Bike Jatha ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಕಾರ್ಯದರ್ಶಿ ವಸಂತ ಹೋಬಳಿದಾರ್, ಸಹ ಕಾರ್ಯದರ್ಶಿ ಜಿ.ವಿಜಯ್‌ಕುಮಾರ್, ಉಪಾಧ್ಯಕ್ಷ ಬಿ.ಗೋಪಿನಾಥ್, ಖಜಾಂಚಿ ಎಂ.ರಾಜು, ಇ.ಪರಮೇಶ್ವರ್, ಗಣೇಶ್ ಅಂಗಡಿ, ಸುಮತಿ ಕುಮಾರಸ್ವಾಮಿ ಉಪಸ್ಥಿತರಿದ್ದರು.