ಬೆಂಗಳೂರು ತಂತ್ರಜ್ಞಾನ ಶೃಂಗ- 2021ರ ಕಾರ್ಯಕ್ರಮ ಕುರಿತಂತೆ ಐಟಿ, ಬಿಟಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರು `ಕೋವಿಡ್ ಪಿಡುಗಿನ ನಂತರ ಅಭಿವೃದ್ಧಿಯ ಮಾನದಂಡಗಳು ಬದಲಾಗಿದ್ದು, ರಾಜ್ಯವು ಈ ಪರಿಸ್ಥಿತಿಯನ್ನು ತಂತ್ರಜ್ಞಾನದ ಬಲದಿಂದ ಸಕಾರಾತ್ಮಕವಾಗಿ ಬಳಸಿಕೊಳ್ಳುತ್ತಿದೆ’ ಎಂದರು.
ಉದ್ದಿಮೆಗಳ ಬೆಳವಣಿಗೆಗೆ ಸರಕಾರವು ಹಲವು ಅನುಕೂಲಕರ ನೀತಿಗಳನ್ನು ರೂಪಿಸಿದೆ. ಇದರಿಂದಾಗಿ ಐಟಿ, ಬಿಟಿ, ಯೂನಿಕಾರ್ನ್ ಉದ್ದಿಮೆಗಳಲ್ಲಿ ರಾಜ್ಯವು ಅಗ್ರಸ್ಥಾನದಲ್ಲಿದೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಜಾರಿಯಿಂದಾಗಿ ಮುಂಬರುವ ವರ್ಷಗಳಲ್ಲಿ ರಾಜ್ಯವು ಜಾಗತಿಕ ಮಟ್ಟದಲ್ಲಿ ಮುಂಚೂಣಿಯಲ್ಲಿ ನಿಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನವೋದ್ಯಮಗಳ ಸ್ಥಾಪನೆಯಲ್ಲಿ ರಾಜ್ಯವು ಜಾಗತಿಕ ಮಟ್ಟದಲ್ಲಿ ಅಗ್ರಪಂಕ್ತಿಯಲ್ಲಿದೆ. ನೀತಿ ಆಯೋಗದ ಸಮೀಕ್ಷೆಯಲ್ಲಿ ರಾಜ್ಯವು ಸತತ ಎರಡನೇ ವರ್ಷವೂ ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ಐಟಿ ರಫ್ತಿನಲ್ಲಿ ಕರ್ನಾಟಕವು ದೇಶದ ಶೇ.40ರಷ್ಟು ಕೊಡುಗೆಯ ಸಿಂಹಪಾಲನ್ನು ನೀಡುತ್ತಿದೆ ಎಂಬುದರ ಬಗ್ಗೆ ಗಮನಸೆಳೆದರು.
ರಾಜ್ಯವು ಮುಂಬರುವ ದಿನಗಳಲ್ಲಿ ಬಯೋಎಕಾನಮಿಯಲ್ಲೂ ದೇಶಕ್ಕೆ ಅಗ್ರ ಸ್ಥಾನವನ್ನು ಅಲಂಕರಿಸುವಂತೆ ಮಾಡಲಿದೆ. ಜೀವವಿಜ್ಞಾನವನ್ನು ಉತ್ತೇಜಿಸಲು ಸದ್ಯದಲ್ಲೇ ಎಲಿಕ್ಸ್ ಪಾರ್ಕ್ ಸ್ಥಾಪನೆ ಮಾಡಲಾಗುವುದು.