ಜೀವನದಲ್ಲಿ ಶಿಸ್ತಿನ ಮೂಲಕ ದಾರಿ ಸಾಗಿಸಿದಲ್ಲಿ ಮಾತ್ರ ಬದುಕಿನ ಪ್ರತಿ ಹಂತಗಳಲ್ಲಿ ಒಂದೊಂದು ಮೆಟ್ಟಿಲನ್ನು ಹತ್ತಲು ಸಾಧ್ಯ, ಶಿಸ್ತಿನ ಬದುಕು ಅತ್ಯಂತ ಉತ್ತಮ ಎಂದು ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನದ ಪೀಠಾಧ್ಯಕ್ಷರಾದ ಜಗದ್ಗುರು ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ತಿಳಿಸಿದರು.
ಅವರು ಭದ್ರಾವತಿ ತಾಲೂಕು ಕಾರೇಹಳ್ಳಿಯ ಬಿಜಿಎಸ್ ಕೇಂದ್ರೀಯ ವಿದ್ಯಾಲಯದ ಆವರಣದಲ್ಲಿ ಮೂರು ದಿನಗಳ ಕಾಲ ಆಯೋಜಿಸಿದ್ದ ಶ್ರೀ ಆದಿಚುಂಚನಗಿರಿ ಶಾಲಾ ಕಾಲೇಜುಗಳ ರಾಜ್ಯಮಟ್ಟದ ರಜತ ಚುಂಚಾದ್ರಿ ಕ್ರೀಡೋತ್ಸವ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ನಾವು ಜೀವನದಲ್ಲಿ ಓಡುವುದು, ಆಟ ಆಡುವುದು ಮುಖ್ಯವಾಗುವುದಿಲ್ಲ ಅದು ಶಿಸ್ತಿನಿಂದ ಇದ್ದಾಗ ಮಾತ್ರ ಸಮರ್ಪಕವಾಗಿರುತ್ತದೆ ಎಂದು ವಿವರಣೆ ನೀಡಿದರು.
ಕ್ರೀಡೆ ಎಂದರೆ ಕೇವಲ ಆಟವಲ್ಲ ,ಅದು ಪ್ರತಿ ವಿದ್ಯಾರ್ಥಿಗಳ ಪ್ರಮುಖ ಘಟ್ಟವಾಗುತ್ತದೆ.ಕ್ರೀಡೆ ಶಿಸ್ತು ಬದ್ದ ಜೀವನವನ್ನು ಕಲಿಸುತ್ತದೆ ಎಂದರು. ಭಾರತ ದೇಶದಲ್ಲಿ ಸುಮಾರು 124 ಹೆಚ್ಚು ಕ್ರೀಡೆಗಳು ಅಸ್ತಿತ್ವದಲ್ಲಿವೆ ಆದರೆ ನಮ್ಮ ರಾಜ್ಯದಲ್ಲಿ 24 ಕ್ರೀಡೆಗಳು ಮಾತ್ರ ಆಡಲಾಗುತ್ತಿದೆ. ಆದಿಚುಂಚನಗಿರಿ ಮಠವು ಮುಂದಿನ ದಿನಗಳಲ್ಲಿ ದೇಶದ ಎಲ್ಲಾ ಕ್ರೀಡೆಗಳಲ್ಲಿ ಮಕ್ಕಳನ್ನು ತೊಡಗಿಸುವ ಮೂಲಕ ಕ್ರೀಡೋತ್ಸವವನ್ನು ನಡೆಸಲು ಚಿಂತಿಸಿದೆ ಎಂದರು.
ಕ್ರೀಡೆಯಲ್ಲಿ ಗೆಲುವು ಸಂತಸ ನೀಡಿದರೆ, ಸೋಲನ್ನು ಅದೇ ಚಿತ್ತದಿಂದ ಕ್ರೀಡಾಪಟುಗಳು ಸ್ವೀಕರಿಸಿ ಮುಂದೆ ಗೆಲುವು ಸಿಗುತ್ತದೆ ಎಂದು ಆಟವಾಡಿ ಎಂದು ಮಕ್ಕಳನ್ನು ಹುರಿದುಂಬಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಆದಿಚುಂಚನಗಿರಿ ಮಹಾಸಂಸ್ಥಾನದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಅವರು ಹಿಂದಿನಿಂದಲೂ ಕ್ರೀಡೆಯ ಬಗ್ಗೆ ಆದಿಚುಂಚನಗಿರಿ ಮಹಾಸಂಸ್ಥಾನ ವಿಶೇಷವಾದ ಆಸಕ್ತಿಯನ್ನು ವಹಿಸಿ, ಲೆಕ್ಕವಿಲ್ಲದಷ್ಟು ಮಕ್ಕಳನ್ನು ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟಕ್ಕೆ ಬೆಳೆಸಿದೆ.
ಕ್ರೀಡಾಕೂಟದ ಯಶಸ್ಸಿಗೆ ಕಾರಣರಾದ ಸರ್ವರನ್ನೂ ಅಭಿನಂದಿಸಿದರು. ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ. ಮಿಥುನ್ ಕುಮಾರ್ ಮಾತನಾಡುತ್ತಾ , ಕ್ರೀಡೆ ಧ್ಯಾನವಿದ್ದಂತೆ ಕ್ರೀಡೆಯಲ್ಲಿನ ಸೋಲು ಹಾಗೂ ಗೆಲುವನ್ನು ಕ್ರೀಡಾಪಟುಗಳು ಸಮಾನವಾಗಿ ಸ್ವೀಕರಿಸಬೇಕು ಎಂದರು.
ನಗರಸಭೆ ಪೌರಾಯುಕ್ತ ಮನುಕುಮಾರ್ ಮಾತನಾಡಿ, ಶ್ರೀಮಠದ ಶೈಕ್ಷಣಿಕ ಸಂಸ್ಥೆಗಳು ಸಮಾಜದ ಎಲ್ಲಾ ವರ್ಗದ ಸಾವಿರಾರು ಮಕ್ಕಳಿಗೆ ಅನ್ನ, ಅರಿವು, ಆಶ್ರಯ ನೀಡಿದ ಪರಿಣಾಮ ಇಂದು ಅವರೆಲ್ಲ ಉನ್ನತ ಹುದ್ದೆ, ಸ್ಥಾನಮಾನಗಳನ್ನು ಅಲಂಕರಿಸುವಂತಾಗಿದೆ. ವಿದ್ಯಾರ್ಥಿಗಳಿಗೆ ಓದಿನೊಂದಿಗೆ ಕ್ರೀಡೆಗಳಲ್ಲಿಯೂ ಭಾಗವಹಿಸುವಂತೆ ಪ್ರೋತ್ಸಾಹ ನೀಡುತ್ತಿರುವುದು ವಿಶೇಷ ಸಂಗತಿ ಆಗಿದೆ ಎಂದರು.
ಶಿವಮೊಗ್ಗ ಆದಿಚುಂಚನಗಿರಿ ವಿಭಾಗಕ್ಕೆ ಸಮಗ್ರ ಪ್ರಶಸ್ತಿ, ಪ್ರಾಥಮಿಕ ಶಾಲಾ ಬಾಲಕರ ವಿಭಾಗದಲ್ಲಿ ಬಿಜಿ ನಗರ ಶಾಲೆಯ ಮಕ್ಕಳು ಚಾಂಪಿಯನ್ ಆಗಿ ಹೊರಹಮ್ಮಿದ್ದಾರೆ. ಪ್ರಾಥಮಿಕ ಶಾಲಾ ಬಾಲಕಿಯರ ವಿಭಾಗದಲ್ಲಿ ಭದ್ರಾವತಿಯ ಶಾಲಾ ಮಕ್ಕಳು ಚಾಂಪಿಯನ್ ಆಗಿದ್ದು ವಿಶೇಷ. ಪ್ರೌಢಶಾಲಾ ವಿಭಾಗದ ಬಾಲಕರ ವಿಭಾಗದಲ್ಲಿ ಆದಿಚುಂಚನಗಿರಿ ಕ್ಷೇತ್ರದ ಶಾಲೆಗಳು ಚಾಂಪಿಯನ್ ಶಿಫ್ ಪಡೆದಿದ್ದರೆ, ಬಾಲಕಿಯರ ವಿಭಾಗದಲ್ಲಿ ಶಿವಮೊಗ್ಗ ವಿಭಾಗದ ಕ್ರೀಡಾಪಟುಗಳು ಚಾಂಪಿಯನ್ ಶಿಫ್ ಪಡೆದಿದ್ದಾರೆ.
ಶಿವಮೊಗ್ಗ ಕಾಲೇಜು ವ್ಯಾಸಂಗದ ಬಾಲಕರ ತಂಡ ಚಾಂಪಿಯನ್ ಶಿಫ್ ಪಡೆದಿದ್ದರೆ, ಆದಿಚುಂಚನಗಿರಿ ಕ್ಷೇತ್ರದ ಬಾಲಕಿಯರ ತಂಡ ಚಾಂಪಿಯನ್ ಶಿಫ್ ನ್ನು ಮುಡಿಗೇರಿಸಿಕೊಂಡಿದೆ. ಗುಂಪು ಹಾಗೂ ಅಥ್ಲೆಟಿಕ್ಸ್ ವಿಭಾಗದಲ್ಲಿ ಶಿವಮೊಗ್ಗ ವಿಭಾಗವು ವೀರಗ್ರಹಣಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ಸುಳ್ಯದ ಕೆವಿಜಿ ಸಮೂಹ ಸಂಸ್ಥೆಗಳ ಜಂಟಿ ಕಾರ್ಯದರ್ಶಿ ಜಿ.ಎಸ್. ಅಕ್ಷಯ್, ಶ್ರೀಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ, ಬೆಂಗಳೂರು ಶಾಖಾ ಮಠದ ಶ್ರೀ ಸ್ವಾಮಿನಾಥ ಸ್ವಾಮೀಜಿ , ತಿಪಟೂರು ದಸರೀಘಟ್ಟದ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ, ಕಾರೆ ಹಳ್ಳಿಯ ಶ್ರೀ ವಿಶ್ವದೇವಾನಂದ ಸ್ವಾಮೀಜಿ, ಆಯುರ್ವೇದ ಕಾಲೇಜಿನ ಪ್ರಾಚಾರ್ಯ ಡಾ. ಲೀಲಾಧರ್, ಸಂಸ್ಥೆಯ ನಿರ್ದೇಶಕರಾದ ಪಾಸಪ್ಪಗೌಡ, ಗುಂಡೇಗೌಡ ಹಾಗೂ ಆಡಳಿತಾಧಿಕಾರಿಗಳು, ಪ್ರಾಂಶುಪಾಲರುಗಳು, ಇನ್ನೂ ಮುಂತಾದವರು ಉಪಸ್ಥಿತರಿದ್ದರು.