ಘನ ಮತ್ತು ದ್ರವ ತ್ಯಾಜ್ಯದ ಅಸಮರ್ಪಕ ನಿರ್ವಹಣೆಗೆ ಪರಿಹಾರವಾಗಿ 200 ಕೋಟಿ ರೂ. ದಂಡ ಕಟ್ಟುವಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಮಣಿಪುರ ಸರ್ಕಾರಕ್ಕೆ ಆದೇಶಿಸಿದೆ.
ನ್ಯಾಯಮೂರ್ತಿ ಆದರ್ಶ್ ಕುಮಾರ್ ಗೋಯೆಲ್ ನೇತೃತ್ವದ ಪೀಠವು, ನೀವು ಪರಿಹಾರ ಕ್ರಮ ಕೈಗೊಳ್ಳುವ ಅವಧಿಯವರೆಗೆ ಕಾಯಲು ಸಾಧ್ಯವಿಲ್ಲ, ಜೊತೆಗೆ ತ್ಯಾಜ್ಯ ನಿರ್ವಹಣೆ ಹೊಣೆಗಾರಿಕೆಯಿಂದ ನೀವು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದೆ.
ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿತ ಸಂಪನ್ಮೂಲಗಳೊಂದಿಗೆ ಸಮಗ್ರ ಕಾಲಮಿತಿಯ ಯೋಜನೆಯನ್ನು ಹೊಂದುವುದು ರಾಜ್ಯದ ಜವಾಬ್ದಾರಿಯಾಗಿದೆ ಎಂದು ಅದು ಹೇಳಿದೆ.
ರಾಜ್ಯ ಮಟ್ಟದಲ್ಲಿ ತ್ಯಾಜ್ಯ ನಿರ್ವಹಣೆಯ ಯೋಜನೆ, ಸಾಮರ್ಥ್ಯ ವೃದ್ಧಿ ಮತ್ತು ಮೇಲ್ವಿಚಾರಣೆಗಾಗಿ ಕೇಂದ್ರೀಕೃತ ಏಕ ಗವಾಕ್ಷಿ ಕಾರ್ಯವಿಧಾನವನ್ನು ಸ್ಥಾಪಿಸುವುದು ಅಗತ್ಯವಿರುವ ಮೊದಲ ಬದಲಾವಣೆಯಾಗಿದೆ ಎಂದು ನ್ಯಾಯಮಂಡಳಿ ಹೇಳಿದೆ.
ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ, ಪರಿಸರ ಮತ್ತು ಅರಣ್ಯ, ಕೃಷಿ, ಜಲಸಂಪನ್ಮೂಲ, ಮೀನುಗಾರಿಕೆ ಮತ್ತು ಕೈಗಾರಿಕೆಗಳ ಇಲಾಖೆಗಳ ಪ್ರಾತಿನಿಧ್ಯದೊಂದಿಗೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶ್ರೇಣಿಯ ಅಧಿಕಾರಿಯು ಇದರ ನೇತೃತ್ವ ವಹಿಸಬೇಕು ಎಂದು ನ್ಯಾಯಮಂಡಳಿ ಹೇಳಿದೆ.
ಈ ಹಿಂದೆ ನವೆಂಬರ್ 27 ರಂದು, ಪರಿಸರಕ್ಕೆ ಹಾನಿ ಉಂಟುಮಾಡುವ ಘನ ಮತ್ತು ದ್ರವ ತ್ಯಾಜ್ಯವನ್ನು ನಿರ್ವಹಿಸದ ಆರೋಪದ ಮೇಲೆ ನಾಗಾಲ್ಯಾಂಡ್ಗೆ ಎನ್ಜಿಟಿ 200 ಕೋಟಿ ರೂಪಾಯಿಗಳ ದಂಡ ವಿಧಿಸಿತ್ತು.
ನ್ಯಾಯಮೂರ್ತಿ ಆದರ್ಶ್ ಕುಮಾರ್ ಗೋಯೆಲ್ ಅವರ ಪೀಠವು ನವೆಂಬರ್ 24 ರಂದು ಆದೇಶವನ್ನು ನೀಡುವಾಗ, ಒಳಚರಂಡಿ ಉತ್ಪಾದನೆ ಮತ್ತು ಸಂಸ್ಕರಣೆಯಲ್ಲಿನ ಅಂತರ ಮತ್ತು ಘನ ತ್ಯಾಜ್ಯ ನಿರ್ವಹಣೆಯಲ್ಲಿನ ಅಂತರದ ಬಗ್ಗೆ ಹೇಳಿಕೆಯನ್ನು ಪರಿಗಣಿಸಿ, “ನಾವು ಮಾಲಿನ್ಯಕಾರಕ ಪಾವತಿ ತತ್ವದ ಮೇಲೆ ರಾಜ್ಯಕ್ಕೆ 200 ಕೋಟಿ ರೂಪಾಯಿಗಳ ದಂಡವನ್ನು ವಿಧಿಸುತ್ತೇವೆ.
ಕಾನೂನಿನ ಆದೇಶವನ್ನು ವಿಶೇಷವಾಗಿ ಸುಪ್ರೀಂ ಕೋರ್ಟ್ ಮತ್ತು ಈ ನ್ಯಾಯಮಂಡಳಿಯ ತೀರ್ಪುಗಳನ್ನು ಉಲ್ಲಂಘಿಸಿ ದ್ರವ ಮತ್ತು ಘನ ತ್ಯಾಜ್ಯವನ್ನು ವೈಜ್ಞಾನಿಕವಾಗಿ ನಿರ್ವಹಿಸುವಲ್ಲಿ ವಿಫಲವಾಗಿದೆ ಎಂದು ನ್ಯಾಯಪೀಠ ಹೇಳಿದೆ.