ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು (ಎನ್ಇಪಿ) ಮುಂದಿನ ವರ್ಷದಿಂದ ಪ್ರಾಥಮಿಕ ಹಂತದಲ್ಲೂ ಅಳವಡಿಸಲು ಸರ್ಕಾರ ಸಿದ್ಧತೆ ನಡೆಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಭದ್ರಾವತಿ ತಾಲ್ಲೂಕಿನ ಕಾರೇಹಳ್ಳಿಯ ಬಿಜಿಎಸ್ ಕೇಂದ್ರೀಯ ವಿದ್ಯಾಲಯದಲ್ಲಿ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆ ಶಾಲೆಗಳ ವಿದ್ಯಾರ್ಥಿಗಳಿಗೆ ಗುರುವಾರ ಆಯೋಜಿಸಿದ್ದ ‘ರಜತ ಚುಂಚಾದ್ರಿ’ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ರಾಷ್ಟ್ರದಲ್ಲಿ ವಿದ್ಯಾರ್ಥಿ ಕೇಂದ್ರಿತ ಶಿಕ್ಷಣ ನೀತಿ ಇಲ್ಲಿಯವರೆಗೂ ಇರಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಪ್ರಯತ್ನದಿಂದ ಎನ್ಇಪಿ ಮೂಲಕ ಆ ಆಶಯ ಈಡೇರಿದೆ. ಒಂದೇ ಅವಧಿಯಲ್ಲಿ ಹಲವು ಪದವಿ ಪಡೆಯುವ ಅವಕಾಶವನ್ನು ಎನ್ಇಪಿ ಕಲ್ಪಿಸಿದೆ. ಮಕ್ಕಳ ಸಮಗ್ರ ವ್ಯಕ್ತಿತ್ವ ರೂಪುಗೊಳ್ಳಲು ಈ ಶಿಕ್ಷಣ ವ್ಯವಸ್ಥೆ ರೂಪಿಸಿದ್ದು, ಪ್ರಾಥಮಿಕ ಹಂತದಿಂದಲೇ ಇದು ಜಾರಿಗೊಂಡರೆ ಮಕ್ಕಳಿಗೆ ಅನುಕೂಲವಾಗಲಿದೆ’ ಎಂದರು.
ಕಲಿಕೆಯನ್ನು ಇನ್ನಷ್ಟು ಸರಳಗೊಳಿಸುವ ಅಗತ್ಯವಿದ್ದು, ಸಾಮಾನ್ಯ ಕುಟುಂಬದಿಂದ ಬರುವ ಮಗು ಮಾನಸಿಕ ಒತ್ತಡಕ್ಕೆ ಒಳಗಾಗದೆ ಕಲಿಯುವ ವಾತಾವರಣ ನಿರ್ಮಿಸಬೇಕಿದೆ. ಈ ಸರಳೀಕರಣ ಎನ್ಇಪಿಯ ಭಾಗ ಎಂದರು.