ಊರಿನ ಮಕ್ಕಳಿಗೆ ಶಿಕ್ಷಣ ಸಿಗಬೇಕು ಎನ್ನುವ ಆಶಯದಲ್ಲಿ ಕೂಡಿಟ್ಟ ಹಣದಿಂದ ಶಾಲೆ ಕಟ್ಟಸಿದೆ. ಎಲ್ಲ ಮಕ್ಕಳಿಗೂ ಉತ್ತಮ ಶಿಕ್ಷಣ ಸಿಗುವಂತಾಗಬೇಕು ಎಂದು ಪದ್ಮಶ್ರೀ ಪುರಸ್ಕೃತ ಶ್ರೀ ಹರೇಕಳ ಹಾಜಬ್ಬ ಅಭಿಪ್ರಾಯ ವ್ಯಕ್ತಪಡಿಸಿದರು.
ಮಹಾತ್ಮ ಗಾಂಧೀಜಿ ಜಯಂತಿ ಪ್ರಯುಕ್ತ ಶಿವಮೊಗ್ಗ ನಗರ ಸಮೀಪದ ಒಡ್ಡಿನಕೊಪ್ಪದಲ್ಲಿ ಸಮನ್ವಯ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ “ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ”ಯನ್ನು ದತ್ತು ತೆಗೆದುಕೊಳ್ಳುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಾಮಾನ್ಯನಾಗಿದ್ದ ನನ್ನನ್ನು ಶಾಲೆಗಾಗಿ ಮಾಡಿದ ಸೇವೆಯಿಂದ ರಾಷ್ಟ್ರ ಮಟ್ಟದಲ್ಲಿ ಗುರುತಿಸುವಂತಾಯಿತು. ಕುವೆಂಪು ವಿಶ್ವವಿದ್ಯಾಲಯದ ಪಠ್ಯದಲ್ಲಿಯೂ ನನ್ನ ಅಕ್ಷರ ಸೇವೆ ಬಗ್ಗೆ ಪಾಠ ಇರುವುದು ನನ್ನ ಪುಣ್ಯ. ಹೆಚ್ಚಿನ ಪ್ರೀತಿ, ಆತ್ಮೀಯತೆ ತೋರಿಸುತ್ತಿರುವ ಕುವೆಂಪು ನಾಡಿಗೆ ನಾನು ಸದಾ ಚಿರಋಣಿ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ ಮಾತನಾಡಿ,
ವಿದ್ಯೆ ಎಲ್ಲರಿಗೂ ಅವಶ್ಯಕ. ಪ್ರತಿಭಾವಂತ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಸಿಗುವಂತೆ ಮಾಡುತ್ತಿರುವ ಸಮನ್ವಯ ಟ್ರಸ್ಟ್ ಕಾರ್ಯ ಶ್ಲಾಘನೀಯ. ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ಹಾಗೂ ಮಾದರಿ ಶಾಲೆಯಾಗಿ ರೂಪಿಸುವುದು ಎಲ್ಲರ ಕರ್ತವ್ಯ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯನಾಗಿ ಮೂರು ಶಾಲೆಗಳ ದತ್ತು ಸ್ವೀಕಾರ ಮಾಡಿದ್ದು, ಮೂಲಸೌಕರ್ಯಗಳ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಲಾಗಿದೆ. ಬೋಧನಾ ಗುಣಮಟ್ಟ ವೃದ್ಧಿಸುವ ಹಾಗೂ ಮಕ್ಕಳು ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡುವಂತೆ ಪ್ರೋತ್ಸಾಹಿಸುವ ಕೆಲಸಕ್ಕೂ ಪ್ರಾಮುಖ್ಯತೆ ನೀಡಲಾಗುವುದು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಮಾತನಾಡಿ, ಶಾಲೆಗಳ ದತ್ತು ಸ್ವೀಕಾರ ಎಂದರೆ ಕೇವಲ ಒಮ್ಮೆ ಅಥವಾ ಅಪರೂಪಕ್ಕೆ ಧನಸಹಾಯ ಮಾಡುವುದಲ್ಲ. ಶಾಲೆಯ ಸಮಗ್ರ ಅಭಿವೃದ್ಧಿಯಲ್ಲಿ ಭಾಗಿಯಾಗಬೇಕು. ಸಮನ್ವಯ ಟ್ರಸ್ಟ್ ವತಿಯಿಂದ ದತ್ತು ಸ್ವೀಕಾರದ ಜತೆಯಲ್ಲಿ ಐದು ವರ್ಷಗಳ ಕಾಲ ಮಕ್ಕಳಿಗೆ ಶಾಲೆಯಲ್ಲಿ ಕೌಶಲ್ಯ ಕಲಿಕೆ ಹಾಗೂ ಮಕ್ಕಳ ಸಮಗ್ರ ಬೆಳವಣಿಗೆಯಲ್ಲಿ ಬಹುಮುಖ್ಯ ಪಾತ್ರ ವಹಿಸುವ ಜವಾಬ್ದಾರಿ ಹೊತ್ತಿರುವುದು ಒಳ್ಳೆಯ ಸಂಗತಿ ಎಂದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಮಾತನಾಡಿ, ಸರ್ಕಾರಿ ಶಾಲೆ ಉಳಿಸುವ ಮಹತ್ತರ ಕಾರ್ಯವನ್ನು ಸಮನ್ವಯ ಟ್ರಸ್ಟ್ ವತಿಯಿಂದ ನಡೆಸುತ್ತಿದ್ದು, ಸರ್ಕಾರಿ ಶಾಲೆಗಳನ್ನು ಉಳಿಸುವ ಹಾಗೂ ಅಭಿವೃದ್ಧಿ ಪಥದಲ್ಲಿ ಮುನ್ನಡೆಸಲು ದೃಷ್ಠಿಯಿಂದ ಎಲ್ಲರ ಸಹಕಾರವು ಮುಖ್ಯ ಎಂದು ಹೇಳಿದರು.
ಸಮನ್ವಯ ಟ್ರಸ್ಟ್ ನಿರ್ವಾಹಕ ನಿರ್ದೇಶಕ ಸಮನ್ವಯ ಕಾಶಿ ಮಾತನಾಡಿ, ನಮ್ಮ ಟ್ರಸ್ಟ್ 15 ವರ್ಷಗಳಿಂದ ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದು, ಗಾಂಧಿ ಜಯಂತಿ ವಿಶೇಷ ಸಂದರ್ಭದಲ್ಲಿ ಒಡ್ಡಿನಕೊಪ್ಪದ ಸರ್ಕಾರಿ ಶಾಲೆಯನ್ನು ಸಮನ್ವಯ ಟ್ರಸ್ಟ್ ವತಿಯಿಂದ ದತ್ತು ಸ್ವೀಕಾರ ಮಾಡಲಾಗಿದೆ. ಮಕ್ಕಳ ಶೈಕ್ಷಣಿಕ ಪ್ರಗತಿಗೆ ಎಲ್ಲ ರೀತಿಯ ಸಹಕಾರ ಮಾಡಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಎಚ್.ಎಂ.ಸುರೇಶ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಪರಮೇಶ್ವರಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ್, ಒಡ್ಡಿನಕೊಪ್ಪ ಸರ್ಕಾರಿ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ತ್ರಿವೇಣಿ.ಜಿ, ಸ್ಮಿತಾ, ವಿಜಯ್, ಅಭಿ ಎಚ್.ಎನ್.ಗೌಡ, ಮಲ್ಲಿಕಾರ್ಜುನ್, ಸಿದ್ದನಗೌಡ, ನಾರಾಯಣ್, ಶರಣ್ಯ ಹಾಗೂ ಸ್ಥಳೀಯ ಪ್ರಮುಖರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.