ಎಲ್ಲರನ್ನೂ ಮನುಷ್ಯರನ್ನಾಗಿ ನೋಡಬೇಕು. ಜಾತಿ-ಧರ್ಮಕ್ಕಿಂತಲೂ ಮನುಷ್ಯತ್ವ ಮುಖ್ಯ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಕಾಗಿನೆಲೆ ಮಹಾಸಂಸ್ಥಾನ ಕನಕ ಗುರು ಪೀಠದಿಂದ ಇಲ್ಲಿನ ವಿಜಯನಗರ 3ನೇ ಹಂತದಲ್ಲಿ ‘ಸಿದ್ದರಾಮಯ್ಯ ಮೆಟ್ರಿಕ್ ನಂತರದ ಬಾಲಕಿಯರ ವಸತಿನಿಲಯ’ದ ಹೆಚ್ಚುವರಿ ಕಟ್ಟಡ ಮತ್ತು ಯುಪಿಎಸ್‌ಸಿ, ಕೆಪಿಎಸ್‌ಸಿ ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕಟ್ಟಡದ ನಿರ್ಮಾಣಕ್ಕೆ ಗುರುವಾರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
‘ನಾನು ಜಾತಿ, ಧರ್ಮ ನೋಡದೆ ಜನಪರ ಕಾರ್ಯಕ್ರಮಗಳನ್ನು ರೂಪಿಸಿದ್ದೆ. ಎಲ್ಲ ವರ್ಗಗಳ ಬಡವರು, ಸಾಮಾಜಿಕವಾಗಿ ಹಿಂದುಳಿದವರಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ಜಾರಿಗೊಳಿಸಿದ್ದೆ. ಆದರೆ, ಈ ಸರ್ಕಾರದವರು ಉಚಿತವಾಗಿ ಐದು ಕೆ.ಜಿ. ಅಕ್ಕಿ ವಿತರಣೆಯನ್ನೂ ನಿಲ್ಲಿಸಲು ನೋಡುತ್ತಿದ್ದಾರೆ ಎಂದು ಆರೋಪಿಸಿದರು.