ವಿಘಟನೆಯ ಆತಂಕಕಾರಿ ಹಾದಿಯಲ್ಲಿ ಸಾಗುತ್ತಿರುವ ಸಮಕಾಲೀನ ಸಮಾಜವನ್ನು ರಚನಾತ್ಮಕವಾಗಿ ಕಟ್ಟುವ ಗುರುತರ ಜವಾಬ್ದಾರಿಯನ್ನು ಭವಿಷ್ಯದ ಪತ್ರಕರ್ತರು ನಿರ್ವಹಿಸಬೇಕಿದೆ ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ ಅಭಿಪ್ರಾಯಪಟ್ಟರು.
ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಶನಿವಾರ ನಡೆದ ಈ-ಟಿವಿ ಭಾರತ್ನ ಕ್ಯಾಂಪಸ್ ಆಯ್ಕೆ ಪ್ರಕ್ರಿಯೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರಜಾತಂತ್ರ ವ್ಯವಸ್ಥೆಯ ಪ್ರಮುಖ ಅಂಗವಾಗಿರುವ ಪತ್ರಿಕಾ ರಂಗಕ್ಕೆ ಕಾಲಿಡಲಿರುವ ಉದಯೋನ್ಮುಖ ಪತ್ರಕರ್ತರು ಸಮಾಜವನ್ನು ಒಗ್ಗೂಡಿಸುವ ಕಾರ್ಯನಿರ್ವಹಿಸಬೇಕಿದೆ. ಜಾತಿ, ಧರ್ಮ, ಸಮುದಾಯಗಳ ನಡುವಿನ ಬಿರುಕುಗಳನ್ನು ಗುಣಪಡಿಸುವ ಹೊಣೆಗಾರಿಕೆ ಅವರ ಮೇಲಿದೆ ಎಂದರು.
ಸಮಾಜದ ವಿವಿಧ ಸ್ಥರಗಳಲ್ಲಿ ನಡೆಯುವ ವಿದ್ಯಮಾನಗಳ ಬಗ್ಗೆ ನೈಜ ವರದಿ ಮಾಡುವುದರ ಜೊತೆಗೆ ಜನಪರವಾದ ನೈತಿಕ ಮೌಲ್ಯ ಮತ್ತು ವೃತ್ತಿಪರತೆ ಪತ್ರಕರ್ತರಿಗೆ ಅತ್ಯಗತ್ಯ. ಈ ನಿಟ್ಟಿನಲ್ಲಿ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗವು ಪ್ರಾಯೋಗಿಕ ಕಲಿಕೆಯ ಜೊತೆಗೆ ನೈತಿಕ ಮೌಲ್ಯಗಳಿಗೆ ಒತ್ತು ನೀಡುತ್ತಿದೆ ಎಂದರು.
ಪ್ರಾಧ್ಯಾಪಕ ಪ್ರೊ. ಡಿ. ಎಸ್. ಪೂರ್ಣಾನಂದ ಮಾತನಾಡಿ, ಕಳೆದ ದಶಕದಿಂದೀಚೆಗೆ ಎಲ್ಲ ಮಾಧ್ಯಮ ಸಂಸ್ಥೆಗಳು ಡಿಜಿಟಲ್ ವೇದಿಕೆಯನ್ನು ಪ್ರವೇಶಿಸುತ್ತಿವೆ. ಒಂದು ಕಾಲದಲ್ಲಿ ದಕ್ಷಿಣ ಭಾರತದ ಪ್ರಬಲ ಟಿ.ವಿ ವಾಹಿನಿಗಳ ಸಮೂಹವನ್ನು ಹೊಂದಿದ್ದ ರಾಮೋಜಿ ರಾವ್ ಒಡೆತನದ ಈ-ಟಿವಿ, ಡಿಜಿಟಲ್ ಕ್ಷೇತ್ರಕ್ಕೆ ದೊಡ್ಡ ಮಟ್ಟದಲ್ಲಿ ಕಾಲಿರಿಸಿದ ಮೊದಲ ಮುಖ್ಯವಾಹಿನಿಯ ಮಾಧ್ಯಮ ಸಂಸ್ಥೆ ಎಂದರೆ ತಪ್ಪಾಗಲಾರದು. ಭವಿಷ್ಯದಲ್ಲಿ ಪತ್ರಿಕೋದ್ಯಮವನ್ನು ಡಿಜಿಟಲ್ ಮಾಧ್ಯಮ ಆವರಿಸಿಕೊಳ್ಳಲಿದೆ ಎಂದರು.
ವಿಭಾಗದ ಮುಖ್ಯಸ್ಥ ಡಾ. ಸತೀಶ್ ಕುಮಾರ್, ಡಾ. ಸತ್ಯಪ್ರಕಾಶ್ ಎಂ. ಆರ್, ಈ-ಟಿವಿ ಭಾರತ್ನ ಶಿವಮೊಗ್ಗ ಜಿಲ್ಲಾ ವರದಿಗಾರ ಕಿರಣ್ ಕಂಕಾರಿ, ಸಂಶೋಧನಾರ್ಥಿಗಳು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.