ಕಟ್ಟಡ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಪ್ರೋತ್ಸಾಹ ಧನ ಸೇರಿ ಇತರ ಸೌಲಭ್ಯಗಳ ಸಮರ್ಪಕ ವಿತರಣೆ ಅಗತ್ಯ ಕ್ರಮ ವಹಿಸಲಾಗುವುದು ಎಂದು ಕಾರ್ಮಿಕ ಸಚಿವ ಅರಬೈಲ್ ಶಿವರಾಂ ಹೆಬ್ಬಾರ್ ಅವರು ತಿಳಿಸಿದರು.
ವಿಧಾನ ಪರಿಷತ್ತಿನ ಕಲಾಪದ ವೇಳೆಯಲ್ಲಿ ಮಾನ್ಯ ವಿರೋಧ ಪಕ್ಷ ಮುಖ್ಯ ಸಚೇತಕರಾದ ಪ್ರಕಾಶ್ ಕೆ ರಾಥೋಡ್ ಅವರು ಸೆ.14ರಂದು ಪ್ರಸ್ತಾಪಿಸಿದ ಶೂನ್ಯ ವೇಳೆಯ ಪ್ರಸ್ತಾಪಕ್ಕೆ ಉತ್ತರಿಸಿದ ಸಚಿವರು, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ನೋಂದಾಯಿತ ಕಾರ್ಮಿಕರ ಮಕ್ಕಳಿಗೆ ಪ್ರಸ್ತುತ ಶೈಕ್ಷಣಿಕ ಸಹಾಯಧನ ಮತ್ತು ಶಿಶುಪಾಲನಾ ಸೌಲಭ್ಯ ಜಾರಿಯಲ್ಲಿರುತ್ತದೆ.
ಶೈಕ್ಷಣಿಕ ಸಹಾಯಧನವನ್ನು ಎಲ್ ಕೆ ಜಿ ಯಿಂದ ಪಿ.ಹೆಚ್.ಡಿ ಪದವಿಯವರೆಗೆ ಓದುತ್ತಿರುವ ಮಕ್ಕಳಿಗೆ ಪ್ರತಿ ವರ್ಷ ಸಹಾಯಧನವನ್ನು ನೀಡಲಾಗುತ್ತಿದೆ. 2021-22ನೇ ಸಾಲಿನಿಂದ ಈ ಸಹಾಯಧನವನ್ನು ಎಲ್ಲಾ ಮಕ್ಕಳಿಗೂ ನಿಗಧಿತ ಅವಧಿಯಲ್ಲಿ ತಲುಪಿಸುವ ಉದ್ದೇಶದಿಂದ ಸರ್ಕಾರದ ಎಸ್.ಎಸ್.ಪಿ. ಪೋರ್ಟ್ಲ್ ಮೂಲಕ ವಿತರಣೆ ಮಾಡಲಾಗುತ್ತಿದೆ. ಇದರಿಂದಾಗಿ ಮಕ್ಕಳ ಪೋಷಕರ ಖಾತೆಗಳಿಗೆ ಡಿ.ಬಿ.ಟಿ ಮೂಲಕ ನೇರವಾಗಿ ಹಣ ವರ್ಗಾವಣೆಯಾಗುತ್ತಿದೆ.
ಇದಲ್ಲದೆ, ಶಿಶುಪಾಲನಾ ಸೌಲಭ್ಯವು ಕಟ್ಟಡ ಕಾರ್ಮಿಕರು ವಾಸಿಸುವ ಮತ್ತು ಕೆಲಸ ನಿರ್ವಹಿಸುವ ಪ್ರದೇಶಗಳಲ್ಲಿ ಶಿಶುಪಾಲನಾ ಕೇಂದ್ರಗಳನ್ನು ತೆರೆದು 06 ತಿಂಗಳಿಂದ 06 ವರ್ಷದವರೆಗಿನ ಮಕ್ಕಳ ಪಾಲನಾ ಮತ್ತು ಪೋಷಣೆಯನ್ನು ಮಾಡಲಾಗುತ್ತಿದೆ. ಇದರಿಂದಾಗಿ ಮಕ್ಕಳ ಪೋಷಕರು ನೆಮ್ಮದಿಯಿಂದ ಕೆಲಸ ನಿರ್ವಹಿಸಲು ಸಹಾಯಕವಾಗಿರುತ್ತದೆ ಎಂದು ತಿಳಿಸಿದರು.