ಸ್ಕಾಟ್ಲೆಂಡ್ನ ಗ್ಲಾಸ್ಗೊದಲ್ಲಿ ನಡೆಯುತ್ತಿರುವ ಸಿಒಪಿ 26 ಹವಾಮಾನ ಶೃಂಗಸಭೆಗೆ ಇಂಗ್ಲೆಂಡಿನ ಪ್ರಿನ್ಸ್ ವಿಲಿಯಮ್ಸ್ ಅವರಿಂದ ಭಾರತದ ತಮಿಳುನಾಡು ಮೂಲದ 14 ವರ್ಷದ ಬಾಲಕಿ ವಿನಿಷಾ ಉಮಾಶಂಕರ್ ಆಹ್ವಾನಿತರಾಗಿದ್ದರು.
ಬಿಬಿಸಿ ಮಾಧ್ಯಮ ಸಂಸ್ಥೆಯ ಪ್ರತಿಷ್ಠಿತ ‘ಅರ್ಥ್ ಶಾರ್ಟ್’ ಪ್ರಶಸ್ತಿಯ ಫೈನಲ್ ತಲುಪಿದ್ದ 15 ಸ್ಪರ್ಧಿಗಳಲ್ಲಿ ಒಬ್ಬರಾದ ವಿನಿಷಾ ಸೌರಚಾಲಿತ ಐರನಿಂಗ್ ಕಾರ್ಟ್ ಯೋಜನೆ ಮೂಲಕ ಜಾಗತಿಕ ಗಮನ ಸೆಳೆದಿದ್ದಾರೆ.
ಸಿಒಪಿ 26 ಹವಾಮಾನ ಶೃಂಗಸಭೆಯಲ್ಲಿ ವಿನಿಷಾ ಸುಮಾರು ಐದು ನಿಮಿಷ ತಂತ್ರಜ್ಞಾನ ಹಾಗೂ ನಾವಿನ್ಯತೆ ವಿಷಯ ಕುರಿತು ಮಾತನಾಡಿದರು. ” ಹವಾಮಾನ ಬದಲಾವಣೆ, ಪರಿಸರ ರಕ್ಷಣೆ ಕುರಿತು ನಾವೀಗ ಬರೀ ಮಾತನಾಡುವ ಹಂತದಲ್ಲಿಲ್ಲ. ಮಾತನಾಡುವುದನ್ನು ನಿಲ್ಲಿಸಿ, ಕೆಲಸ ಆರಂಭಿಸುವ ಹಂತದಲ್ಲಿದ್ದೇವೆ. ಹಾಗಾಗಿ ನಮ್ಮ ಮುಂದಿನ ಭವಿಷ್ಯಕ್ಕಾಗಿ ಸಮಯ, ಹಣ, ನೂತನ ಧೇಯೋದ್ದೇಶ ಅಳವಡಿಕೆಯ ಅಗತ್ಯವಿದೆ” ಎಂದು ಹೇಳಿದರು.
” ನಾವು ಸಿಟ್ಟು ಮಾಡಿಕೊಳ್ಳಲು ತುಂಬಾ ಕಾರಣಗಳಿವೆ. ಆದರೆ ನಾನು ಸಿಟ್ಟು ಮಾಡಿಕೊಳ್ಳುವುದಿಲ್ಲ. ಏಕೆಂದರೆ ಅದಕ್ಕೆಲ್ಲ ಈಗ ಸಮಯ ಇಲ್ಲ. ನಾನು ಕಾರ್ಯಪ್ರವೃತ್ತಳಾಗಲು ಇಷ್ಟಪಡುತ್ತೇನೆ. ನಾನು ಬರೀ ಭಾರತೀಯಳಲ್ಲ, ನಾನು ಭೂಮಿತಾಯಿಯ ಪುತ್ರಿ. ಇದರ ಬಗ್ಗೆ ನನಗೆ ಹೆಮ್ಮೆ ಇದೆ. ವಿದ್ಯಾರ್ಥಿನಿಯಾಗಿ, ಪರಿಸರ ಕಾಳಜಿವುಳ್ಳವಳಾಗಿ, ಮೇಲಾಗಿ ಆಶಾವಾದ ಇಟ್ಟುಕೊಂಡ ವಳಗಿ ಹೇಳುತ್ತಿದ್ದೇನೆ. ಎಲ್ಲರೂ ಕಾರ್ಯಪ್ರವೃತ್ತರಾಗೋಣ. ನಮ್ಮ ಯುವಪೀಳಿಗೆಯ ಉಜ್ವಲ ಭವಿಷ್ಯಕ್ಕಾಗಿ ಶ್ರಮ ವಹಿಸೋಣ” ಎಂದು ವಿನಿಷಾ ಹೇಳಿದರು.
ಬಾಲಕಿ ವಿನಿಷಾ ಅವರ ಮಾತುಗಳಿಗೆ ಪ್ರಧಾನಿ ಮೋದಿಜಿ, ಅಮೆರಿಕ ಅಧ್ಯಕ್ಷ ಜೋ ಬೈಡನ್ ಸೇರಿದಂತೆ ವಿಶ್ವದ ಹಲವು ನಾಯಕರು ಎದ್ದುನಿಂತು ಗೌರವ ಸಲ್ಲಿಸಿದ್ದಾರೆ.