ಸೆ. 17ರಿಂದ 20ರ ವರೆಗೆ ನಾಲ್ಕು ದಿನಗಳ ಕಾಲ ಇಲ್ಲಿಯ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ‘ರೈತರ ಆದಾಯ ದ್ವಿಗುಣಗೊಳಿಸಲು ಕೃಷಿ ತಾಂತ್ರಿಕತೆಗಳು’ ಘೋಷವಾಕ್ಯದಡಿ ಕೃಷಿ ಮೇಳ-2022 ಆಯೋಜಿಸಲಾಗಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕೃಷಿ ವಿವಿ ಕುಲಪತಿ ಡಾ.ಬಸವರಾಜಪ್ಪ, ಕಳೆದ ಎರಡು ವರ್ಷಗಳ ಕಾಲ ಕೋವಿಡ್ ಹಿನ್ನೆಲೆಯಲ್ಲಿ ಮೇಳ ನಡೆದಿಲ್ಲ. ಕಳೆದ ಜನವರಿ ತಿಂಗಳಲ್ಲಿ ಮಳೆಯ ಹಿನ್ನೆಲೆಯಲ್ಲಿ ಮುಂದೂಡಿ ಇದೀಗ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸೆ. 17ರಂದು ಬೆಳಗ್ಗೆ 10.30ಕ್ಕೆ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಫಲಪುಷ್ಪ, ಗಡ್ಡೆ-ಗೆಣಸು, ಮತ್ಸ ಮೇಳ ಪ್ರದರ್ಶನ, ವಿಸ್ಮಯಕಾರಿ ಕೀಟ ಪ್ರಪಂಚ ಪ್ರದರ್ಶನಕ್ಕೆ ಚಾಲನೆ ದೊರೆಯಲಿದೆ. ಬೆಳಗ್ಗೆ 11.30ಕ್ಕೆ ಬೀಜ ಮೇಳ ಉದ್ಘಾಟನೆ, ಮಧ್ಯಾಹ್ನ 2ಕ್ಕೆ ಸೂರ್ಯಕಾಂತಿ ಬೆಳೆ ವಿಚಾರಗೋಷ್ಠಿ ಹಾಗೂ ಮಧ್ಯಾಹ್ನ 3ಕ್ಕೆ ರೈತರಿಂದ ರೈತರಿಗಾಗಿ ಕಾರ್ಯಕ್ರಮ ನಡೆಯಲಿದೆ ಎಂದರು.
ಸೆ.18ರಿಂದ ಬೆಳಗ್ಗೆ 11ಕ್ಕೆ ಹವಾಮಾನ ವೈಪರಿತ್ಯ ವಿಚಾರಗೋಷ್ಠಿ ನಡೆಯಲಿದ್ದು, ಬೆಳಗ್ಗೆ 11.30ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೃಷಿ ಮೇಳಕ್ಕೆ ಚಾಲನೆ ನೀಡಲಿದ್ದಾರೆ. ಕೃಷಿ ಸಚಿವ ಬಿ.ಸಿ. ಪಾಟೀಲ ಕೃಷಿ ಪ್ರಕಟಣೆಗಳನ್ನು ಬಿಡುಗಡೆಗೊಳಿಸುವರು.
ಅತಿಥಿಗಳಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಮತ್ತಿತರರು ಭಾಗವಹಿಸುತ್ತಾರೆ. ಶಾಸಕ ಅಮೃತ ದೇಸಾಯಿ ಅಧ್ಯಕ್ಷತೆ ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಜಿಲ್ಲಾಮಟ್ಟದ ಶ್ರೇಷ್ಠ ಕೃಷಿಕ ಹಾಗೂ ಕೃಷಿ ಮಹಿಳೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಮಧ್ಯಾಹ್ನ 3.30ಕ್ಕೆ ರೈತರ ಆದಾಯ ದ್ವಿಗುಣ ವಿಚಾರಗೋಷ್ಠಿ ನಡೆಯಲಿದೆ ಎಂದರು.
ಸೆ.19ರಂದು ಬೆಳಗ್ಗೆ 10ಕ್ಕೆ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ವಿಚಾರಗೋಷ್ಠಿ, ಬೆಳಗ್ಗೆ 11.30ಕ್ಕೆ ನೈಸರ್ಗಿಕ ಕೃಷಿ ವಿಚಾರಗೋಷ್ಠಿ, ಮಧ್ಯಾಹ್ನ 2.30ಕ್ಕೆ ರೈತರಿಂದ ರೈತರಿಗಾಗಿ ಕಾರ್ಯಕ್ರಮ, ಸಂಜೆ 4.30ಕ್ಕೆ ಕೃಷಿ ವಿಚಾರಗೋಷ್ಠಿ ನಡೆಯಲಿದೆ. ಸೆ. 20ರಂದು ಬೆಳಗ್ಗೆ 10.30ಕ್ಕೆ ಕನ್ನಡ ಕೃಷಿ ಗೋಷ್ಠಿ, ಡಾ. ಚನ್ನವೀರ ಕಣವಿ ಕೃಷಿ ಲೇಖನ ಪ್ರಶಸ್ತಿ ಪ್ರದಾನ, ಬೆಳಗ್ಗೆ 11.30ಕ್ಕೆ ದ್ವಿತೀಯ ಕೃಷಿ ವಿಚಾರಗೋಷ್ಠಿ, ಮಧ್ಯಾಹ್ನ 2.30ಕ್ಕೆ ರೈತರಿಂದ ರೈತರಿಗಾಗಿ ಕಾರ್ಯಕ್ರಮ ಹಾಗೂ ಸಂಜೆ 4ಕ್ಕೆ ಸಮಾರೋಪ ನಡೆಯಲಿದೆ ಎಂದರು.