ಇನ್ನು ಕೆಲವೇ ವರ್ಷಗಳಲ್ಲಿ ಭಾರತವು ವಿಶ್ವದ 3ನೇ ಅತಿದೊಡ್ಡ ಆರ್ಥಿಕತೆಯಾಗಲಿದೆ. ಮತ್ತು ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಸಹಕಾರಿ ಕ್ಷೇತ್ರವೂ ನಿರ್ಣಾಯಕ ಪಾತ್ರ ವಹಿಸಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಿಳಿಸಿದ್ದಾರೆ.
ಸೆಪ್ಟೆಂಬರ್ 12-15ರ ಅವಧಿಯಲ್ಲಿ ಇಲ್ಲಿನ ಇಂಡಿಯಾ ಎಕ್ಸ್ಪೋ ಸೆಂಟರ್ ಮತ್ತು ಮಾರ್ಟ್ನಲ್ಲಿ ಆಯೋಜಿಸಲಾಗಿದ್ದ ಇಂಟರ್ನ್ಯಾಷನಲ್ ಡೈರಿ ಫೆಡರೇಶನ್ ವರ್ಲ್ಡ್ ಡೈರಿ ಶೃಂಗಸಭೆ 2022 ರಲ್ಲಿ ಮಾತನಾಡಿದ ಶಾ, 2024 ರ ಸಾರ್ವತ್ರಿಕ ಚುನಾವಣೆಗೂ ಮೊದಲು ಗ್ರಾಮ ಮಟ್ಟದಲ್ಲಿ 2 ಲಕ್ಷ ಹೊಸ ಡೈರಿ ಸಹಕಾರಿ ಸಂಘಗಳನ್ನು ಸ್ಥಾಪಿಸಲು ಸರ್ಕಾರ ಸಹಾಯ ಮಾಡುತ್ತದೆ ಎಂದಿದ್ದಾರೆ.
ಕಳೆದ 8 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ, ಭಾರತವು 11 ನೇ ಆರ್ಥಿಕತೆಯಿಂದ 5 ನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಶೀಘ್ರದಲ್ಲೇ ನಾವು 3ನೇ ಅತಿದೊಡ್ಡ ಆರ್ಥಿಕತೆಯಾಗಲಿದ್ದೇವೆ. ಇದರಲ್ಲಿ ಸಹಕಾರಿ ಕ್ಷೇತ್ರವು ದೊಡ್ಡ ಪಾತ್ರವನ್ನು ವಹಿಸುತ್ತದೆ ಎಂದು ನನಗೆ ವಿಶ್ವಾಸವಿದೆ ಎಂದಿದ್ದಾರೆ.
1974 ರಿಂದ ಪ್ರಥಮ ಬಾರಿಗೆ ಭಾರತದಲ್ಲಿ ಅಂತರರಾಷ್ಟ್ರೀಯ ಡೈರಿ ಫೆಡರೇಶನ್ನ ಡೈರಿ ಶೃಂಗಸಭೆಯನ್ನು ಆಯೋಜಿಸಲಾಗುತ್ತಿದೆ. ಇಂದು ಲಕ್ಷಾಂತರ ಸಣ್ಣ ಮತ್ತು ಅತಿ ಸಣ್ಣ ಡೈರಿ ರೈತರ ಕೊಡುಗೆಯೊಂದಿಗೆ ಭಾರತವು ವಿಶ್ವದ ಅತಿದೊಡ್ಡ ಹಾಲು ಉತ್ಪಾದಕರಾಗಿದೆ ಎಂದು ಶಾ ಹೇಳಿದ್ದಾರೆ.