Wednesday, November 27, 2024
Wednesday, November 27, 2024

ಬ್ರಹ್ಮ ಜಿಜ್ಞಾಸು ಮೈತ್ರೇಯಿ…ಒಂದು ರಸಗ್ರಹಣ

Date:

ಮಹಾಜ್ಞಾನಿಯಾದಂತಹ ಯಾಜ್ಞವಲ್ಕ್ಯರು ಒಮ್ಮೆ ಸಂಸಾರ ತ್ಯಜಿಸಿ ಸನ್ಯಾಸಿ ಆಗಬೇಕೆಂಬ ಬಯಕೆಯಿಂದ ತಮ್ಮ ಪತ್ನಿಯರಾದ ಕಾತ್ಯಾಯಿನಿ ಹಾಗೂ ಮೈತ್ರೇಯಿಯರಿಗೆ ಅವರ ಜೀವನ ನಿರ್ವಹಣೆಗಾಗಿ ತನ್ನ ಸಕಲ ಆಸ್ತಿಗಳನ್ನೆಲ್ಲ ಪಾಲು ಮಾಡಿಕೊಡಲು ಮುಂದಾಗುತ್ತಾರೆ.

ಇದಕ್ಕೆ ಕಾತ್ಯಾಯಿನಿ ಒಪ್ಪಿದರರೂ ಮೈತ್ರೇಯಿ ಮಾತ್ರ ಮುಕ್ತಿ ದೊರಕಿಸಿಕೊಡದ ಐಶ್ವರ್ಯ ನನಗೆ ಬೇಕಾಗಿಲ್ಲ. ಮುಕ್ತಿಯ ಮಾರ್ಗ ತೋರಿಸಿ… ಎಂದಾಗ ಅವಳನ್ನು ಅತ್ಯಂತ ಪ್ರೀತಿಯಿಂದ ತನ್ನ ಬಳಿ ಕೂರಿಸಿಕೊಂಡು ಹೆಂಡತಿಗೆ ಉಪದೇಶ ಮಾಡುತ್ತಾ ಹೋಗುತ್ತಾರೆ. ಮೊದಲು ಶ್ರವಣ, ನಂತರ ಮನನ ಮಾಡಿಕೋ ಎಂದು ಒಂದೊಂದಾಗಿ ಹೇಳುತ್ತಾ ಹೋಗುತ್ತಾರೆ.

ಪತಿಗಾಗಿ ಅಲ್ಲ ಪತ್ನಿ ಪ್ರೀತಿಸುವುದು ಆತ್ಮನಿಗಾಗಿ ಪ್ರೀತಿಸುವಳು. ಯಾವ ಗಂಡನೂ ಹೆಂಡತಿಗಾಗಿ ಹೆಂಡತಿಯನ್ನು ಪ್ರೀತಿಸುವುದಿಲ್ಲ ಆತ್ಮನನ್ನು ಪ್ರೀತಿಸುವುದರಿಂದ ಅದಕ್ಕಾಗಿ ಅವಳನ್ನು ಪ್ರೀತಿಸುತ್ತಾನೆ. ಮಕ್ಕಳಿಗಾಗಿ ಅಲ್ಲ ಮಕ್ಕಳನ್ನು ಪ್ರೀತಿಸುವವರು ಒಟ್ಟಾರೆಯಾಗಿ ಯಾರೂ ಸಹ ವಸ್ತುವಿಗೋಸ್ಕರ ಪ್ರೀತಿಸದೇ ಆತ್ಮನಿಗೋಸ್ಕರ ಅದನ್ನು ಪ್ರೀತಿಸುವರು ಎಂಬುದನ್ನೇ ಅದ್ಭುತವಾಗಿ “ಆತ್ಮನಸ್ತು ಕಾಮಾನ್ ಸರ್ವಃ ಪ್ರಿಯೋಭವತಿ” ಎಂದು ನಿರೂಪಿಸಿದರು.

ಯಾರು ಆತ್ಮನ ಅರಿವಿಲ್ಲದೇ ಪ್ರೀತಿಸುವರೋ ಅದು ಸ್ವಾರ್ಥ ಪ್ರೀತಿ. ಆತನನ್ನು ಅರಿತು ಯಾರು ಪ್ರೀತಿಸುವರು ಅದು ನಿಸ್ವಾರ್ಥ ಪ್ರೇಮ. ಅವರೇ ಜ್ಞಾನಿಗಳು ಎಂದು ಯಾಜ್ಞವಲ್ಕ್ಯರು ಉಪದೇಶಿಸುತ್ತಾರೆ. ಈ ರೀತಿಯಾಗಿ ಪ್ರೀತಿಯನ್ನು ವಿವರಿಸಿ ಪೂರ್ಣಾನಂದದ ವಿವರಣೆ ನೀಡುತ್ತಾ ಹೋಗುತ್ತಾರೆ. ಆತ್ಮನ ಮೂಲಕ ನಾವು ಪ್ರೀತಿಸಿದೆಲ್ಲವೂ ಅದರಿಂದ ದುಃಖ ಇರುವುದಿಲ್ಲ. ಅನಂತ ವಿಶ್ವದಲ್ಲಿ ಯಾವುದಾದರೂ ಒಂದು ಪ್ರತ್ಯೇಕ ವಸ್ತು ತೆಗೆದುಕೊಂಡು ಆತ್ಮನ ಅರಿವಿಲ್ಲದೆಯೇ ಅದನ್ನು ಆತ್ಮನೆಂದು ಹೇಗೆ ನೋಡುವುದು ಎಂದಾಗ ನಾವು ಒಂದು ಮೃದಂಗದಿಂದ ದೂರವಿರುವವರೆಗೆ ನಮಗೆ ಧ್ವನಿ ಕೇಳಿಸುವುದಿಲ್ಲ.

ಧ್ವನಿ ನಮ್ಮ ಸ್ವಾಧೀನವಲ್ಲ. ಸಮೀಪಕ್ಕೆ ಬಂದು ಕೈ ಇಟ್ಟೊಡನೆ ಶಂಖ ಊದಿದಾಗ ದ್ವನಿ ಹಿಡಿಯಲಾರವು ಅದರ ಸಮೀಪಕ್ಕೆ ಬಂದು ಸ್ವಾಧೀನ ಪಡಿಸಿಕೊಂಡಾಗ ಅದನ್ನು ಗೆಲ್ಲುವೆವು. ಹಾಗೆಯೇ ಹಸಿ ಸೌದೆ ಉರಿಸಿದಾಗ ಬರುವ ಹೊಗೆ ಕಿಡಿಯಂತೆ ಮಹಾ ಸತ್ಯದಿಂದ ಜ್ಞಾನ ವ್ಯಕ್ತವಾಗಿದೆ.

ನೀರಿಗೆಲ್ಲ ಸಾಗರ, ಎಲ್ಲ ಸ್ಪರ್ಶಕ್ಕೆ ಚರ್ಮ, ವಾಸನೆಗೆ ಮೂಗು, ರುಚಿಗೆ ನಾಲಗೆ, ಆಕಾರಕ್ಕೆ ಕಣ್ಣು, ಶಬ್ದಕ್ಕೆ ಕಿವಿ, ಆಲೋಚನೆಗೆ ಮನಸ್ಸು, ಕರ್ಮಕ್ಕೆ ಕೈಗಳು ಗುರಿಯಾದಂತೆ ಸಮುದ್ರಕ್ಕೆ ಹಾಕಿದ ಉಪ್ಪು ಕರಗಿ ನಮಗೆ ದೊರಕದಂತೆ, ಎಲ್ಲಕ್ಕೂ ವಿಶ್ವಾತ್ಮನು ನಿತ್ಯವಾಗಿರುವನು. ಜನನ ಮರಣಗಳಿಲ್ಲದೆ ನಾವೆಲ್ಲ ಪುರುಷನಿಂದ ಸಿಡಿದ ಕಿಡಿಗಳಂತೆ ತೋರುವೇವು.

ಅದನ್ನು ಅರಿತರೆ ಪುನಃ ಅಲ್ಲಿಗೆ ಹೋಗಿ ಐಕ್ಯರಾಗುವೆವು. ಅಂತಿಮವಾಗಿ ನಾವೇ ಉಪದೇಶವನ್ನು, ಆತ್ಮ ಸಾಕ್ಷಾತ್ಕಾರದ ಬಗೆಯನ್ನು ತಿಳಿಸಿ ಕೊಡುವವರು. ಬಾಹ್ಯ ವಸ್ತುವಿಗಾಗಿ ಪರಸ್ಪರ ಸತಿಪತಿಯರು ಪ್ರೀತಿಸದೇ ಏಕಾತ್ಮತೆಗೆ ಪ್ರೀತಿಸಬೇಕೆಂಬ ಸಾಲನ್ನು ತಿಳಿಸಿದ್ದು ಅಷ್ಟೇ ಅಲ್ಲ ಈ ಪ್ರೀತಿ ಎಲ್ಲದರಲ್ಲೂ ಇರಬೇಕು.

ನಾವು ಪರಮಾತ್ಮ ಎಲ್ಲದರಲ್ಲೂ ಇದ್ದಾನೆ ಎಂದು ಪ್ರೀತಿಸಬೇಕೆಂಬ ಅದ್ಭುತವಾದ ಸಂಗತಿಯನ್ನು ಬ್ರಹ್ಮ ಜಿಜ್ಞಾಸು ಮೈತ್ರೇಯಿ ಎಂಬ ಪರಿಕಲ್ಪನೆಯೊಂದಿಗೆ ತಾವೇ ನಿರ್ದೇಶಿಸಿ ಪ್ರಸ್ತುತಪಡಿಸಿದ ಅದ್ಭುತ ನೃತ್ಯರೂಪಕ ಶಿವಮೊಗ್ಗದ ಸಹಚೇತನ ನಾಟ್ಯಾಲಯದವರಿಂದ ರಾಷ್ಟ್ರೀಯ ನೃತ್ಯೋತ್ಸವವಾದ ನಾಟ್ಯಾರಾಧನಾ -11ರ ಕಾರ್ಯಕ್ರಮದಲ್ಲಿ ಆಯೋಜನೆಗೊಂಡಿತ್ತು.

ಅದು ಪ್ರೇಕ್ಷಕರ ಮನಗೆದ್ದಿದ್ದೇ ಅಲ್ಲದೆ ಶ್ರೀಮತಿ ಸಹನಾ ಚೇತನ್ ಅವರು ಮನೋಜ್ಞ ಅಭಿನಯದೊಂದಿಗೆ ಮನಸ್ಸು, ದೇಹ ಒಂದಾಗಿಸಿದ ತಾದಾತ್ಮ್ಯ ಭಾವದ ನೃತ್ಯವನ್ನು ನಿರೂಪಿಸಿದರು. ಈ ರೂಪಕವು ಬೃಹದಾರಣ್ಯಕ ಉಪನಿಷತ್ತಿನ ಒಂದು ಭಾಗವಾದರೂ ಮೂಲ ಸಂಸ್ಕೃತದ ಸಾಹಿತ್ಯ, ಅಭಿನಯದಲ್ಲಿನ ಏಕತಾನತೆಯ ಸೊಗಸಾದ ದೃಶ್ಯ ಕಣ್ಣೆದುರಿಗೆ ತರುವಲ್ಲಿ ಯಶಸ್ವಿಯಾದರು.

ಅಭಿನಯ ತಾದಾತ್ಮ್ಯತೆಯಂತೂ ಓಂಕಾರದ ಶಂಖನಾದಕ್ಕಿಂತ ಕಿಂಚಿದೂನಂ ಎನಿಸುವಂತಿತ್ತು. ಎಲ್ಲ ದೃಶ್ಯಗಳು ಸಹ ಸೊಗಸಾಗಿದ್ದುದಲ್ಲದೇ ಅಂದಿನ ಮತ್ತೊಂದು ಪ್ರಸ್ತುತಿಯಾದ ನಾಟ್ಯಾಧಿ ದೇವತೆಯ ನರ್ತನೋಲ್ಲಾಸ ಓಂ ನಮಃ ಶಿವಾಯವೂ ಸಹ ನಟರಾಜನ ಪುರಾಣ ಪ್ರಸಂಗಗಳ ನಾಟ್ಯ ಪ್ರಸ್ತುತಿಯಾಗಿ ‘ಶಂಕರಾಭರಣಂ ಕಥನ ರುಚಿರಂ’ ಎನ್ನುವಲ್ಲಿ ಸಾರ್ಥಕತೆ ಪಡೆಯಿತು.

ಸಾಂಸ್ಕೃತಿಕ ತವರೂರಾದ ಶಿವಮೊಗ್ಗದಲ್ಲಿ ಕಾರ್ಯಕ್ರಮಗಳ ಆಯೋಜನೆ ಮಾಡಿದ ಸಹಚೇತನ ನಾಟ್ಯಾಲಯದ ಸರ್ವರಿಗೂ ಅಭಿನಂದನೆಗಳು ತುಂಬು ಹೃದಯದ ಧನ್ಯವಾದಗಳು.

-ಡಾ. ಮೈತ್ರೇಯಿ ಆದಿತ್ಯ ಪ್ರಸಾದ್
ಸಂಸ್ಕೃತ ಉಪನ್ಯಾಸಕರು ಶಿವಮೊಗ್ಗ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related