ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’ ಎಂಬುದು ಅದ್ಭುತ ಜೀವನ ಸಂದೇಶ. ತಂದೆ, ತಾಯಿಯಷ್ಟೇ, ಗುರುವಿಗೂ ಪವಿತ್ರ ಸ್ಥಾನ ಇದೆ. ಮುಂದೆ ಗುರಿ ಇರಬೇಕು, ಹಿಂದೆ ಗುರು ಇರಬೇಕು. ಆಗ ಬದುಕು ಇನ್ನೂ ಚೆಂದ ಎನ್ನುವ ಮಾತಿದೆ. ಒಂದಕ್ಷರ ಕಲಿಸಿದಾತನೂ ಗುರುವೇ. ಬದುಕು ಎಂಬುದೇ ಕಲಿಕೆ. ಜೀವನದ ಪ್ರತಿಯೊಂದು ಹಂತದಲ್ಲೂ ನಮಗೆ ಕಲಿಯುವುದಕ್ಕೆ ಸಿಗುತ್ತದೆ. ಹೀಗೆ ಒಳ್ಳೆಯ ವಿಚಾರಗಳನ್ನು ಕಲಿಯುತ್ತಾ ಮುನ್ನಡೆದಾಗ ಬದುಕು ಇನ್ನಷ್ಟು ಸುಂದರವಾಗಿ ಗೋಚರಿಸುತ್ತಾ ಸಾಗುತ್ತದೆ.
ಗುರು ಬ್ರಹ್ಮ, ಗುರು ವಿಷ್ಣು, ಗುರು ದೇವೋ ಮಹೇಶ್ವರಃ, ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ.. ಇದನ್ನು ಆದಿ ಶಂಕರರು ರಚಿಸಿರುವ ಶ್ಲೋಕವಾಗಿದೆ. ಈ ಶ್ಲೋಕದ ಅರ್ಥ ಗುರು ಬ್ರಹ್ಮ, ಗುರು ವಿಷ್ಣು, ಗುರು ದೇವೋ ಮಹೇಶ್ವರಃ, ಈ ಲೋಕದ ಸೃಷ್ಟಿಕರ್ತ ಗುರು. ಆ ಮಹಾನ್ ಗುರುವಿಗೆ ನಮನ ಎನ್ನುವುದರ ಮೂಲಕ ಇಡೀ ಲೋಕವೇ ಗುರುವಿಗೆ ತಲೆಬಾಗುತ್ತದೆ.
ಒಬ್ಬ ವ್ಯಕ್ತಿಯನ್ನು ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ ರೂಪಿಸುವಲ್ಲಿ ಗುರುವಿನ ಪಾತ್ರ ಮಹತ್ವದಾಗಿದೆ. ಅದಲ್ಲದೇ ಒಂದು ದೇಶವನ್ನು ಕಟ್ಟಲು ಸಹ ಶಿಕ್ಷಕರ ಪಾತ್ರ ಬಹಳ ಮಹತ್ವದಾಗಿದೆ. ಗುರುಕುಲ ಶಿಕ್ಷಣ ದಿಂದ ಹಿಡಿದು ಇಂದಿನ ಶಿಕ್ಷಣದವರೆಗೂ ಶಿಕ್ಷಕರು ಇತರರ ಜೀವನವನ್ನು ರೂಪಿಸಲು ತಮ್ಮನ್ನು ತಾವು ಅರ್ಪಿಸಿಕೊಳ್ಳುತ್ತಿದ್ದಾರೆ. ಅವರು ವ್ಯಕ್ತಿಯ ಆತ್ಮ ವಿಶ್ವಾಸ, ಬದುಕನ್ನು ಬಲಪಡಿಸುತ್ತಾರೆ. ಜೀವನದ ಪ್ರತಿಯೊಂದು ತಪ್ಪು, ಒಪ್ಪುಗಳನ್ನು ತಿದ್ದಿ ತೀಡಿ ಮತ್ತು ಜವಬ್ದಾರಿಯ ಬಗ್ಗೆ ಕಲಿಸಿ ಕೊಡುತ್ತಾರೆ. ಹಾಗಾಗಿ ಇಷ್ಟೆಲ್ಲಾ ಜೀವನದ ಪಾಠಗಳನ್ನು ಕಲಿಸಿಕೊಡುವ ಶಿಕ್ಷಕರಿಗೆ ಧನ್ಯವಾದಗಳನ್ನು ಅರ್ಪಿಸುವ ಸಲುವಾಗಿ ಪ್ರತಿ ವರ್ಷ ಶಿಕ್ಷಕರ ದಿನವನ್ನು ಆಚರಣೆ ಮಾಡಲಾಗುತ್ತದೆ.
ನಮ್ಮ ಜೀವನದಲ್ಲಿ ಒಬ್ಬರು ಮಾರ್ಗದರ್ಶಕರು ಇರಲೇಬೇಕು. ಆಗಾ ಮಾತ್ರ ನಮ್ಮ ಜೀವನದಲ್ಲಿ ಯಶಸ್ಸುಗಳನ್ನು ಕಾಣಬಹುದು. ನಮ್ಮಲ್ಲಿ ಯಶಸ್ಸನ್ನು ಕಾಣಲು ವಿಶ್ವಾಸಯುತವಾದ ಗುರಿಯನ್ನು ಹುಟ್ಟುಹಾಕಲು ಪ್ರೋತ್ಸಾಹ ನೀಡುವವರು ಶಿಕ್ಷಕರೇ.. ಅನೇಕ ಕನಸುಗಳನ್ನು ಹುಟ್ಟು ಹಾಕಿ, ಅವುಗಳನ್ನು ಸಹಕಾರಗೊಳಿಸುವಲ್ಲಿ ಶಿಕ್ಷಕರ ಪಾತ್ರ ಮುಖ್ಯ. ಸೋತಾಗ ಜೊತೆಯಿದ್ದು ಧೈರ್ಯ ತುಂಬುವವರು ಶಿಕ್ಷಕರು. ಗೆದ್ದಾಗ ಬೆನ್ನು ತಟ್ಟಿ ಹುರಿದುಂಬಿಸುವವರು ಶಿಕ್ಷಕರರು… ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವ ಇತಂಹ ಗುರುಗಳಿಗೆ ಶಿಷ್ಯರಾದ ನಾವು ಒಂದು ನಮನ ಸಲ್ಲಿಸುವುದು ನಮ್ಮ ಧರ್ಮ…