ಈ ಬಾರಿ ಸಾರ್ವಜನಿಕ ಗಣೇಶೋತ್ಸವಕ್ಕೆ ಈ ಹಿಂದೆ ವಿಧಿಸಿದ್ದ ನಿರ್ಬಂಧಗಳನ್ನು ಸಂಘ-ಸಂಸ್ಥೆಗಳು ಪಾಲಿಸಬೇಕು. ಹೊಸ ನಿರ್ಬಂಧಗಳನ್ನು ಹೇರುವುದಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್ ಅವರು ತಿಳಿಸಿದ್ದಾರೆ.
ಗಣಪತಿ ಹಬ್ಬದ ಅಂಗವಾಗಿ ಪೊಲೀಸ್ ಇಲಾಖೆ ಏರ್ಪಡಿಸಿದ್ದ ಸಾಗರದ ಶಾರದಾಂಬ ಸಭಾ ಭವನದಲ್ಲಿ, ಮತ್ತು ಭದ್ರಾವತಿಯ ವಿವಿಧ ಸಂಘ-ಸಂಸ್ಥೆಗಳ ಮುಖಂಡರ ಜೊತೆ ಏರ್ಪಡಿಸಿದ್ದ, ಶಾಂತಿ ಸಮಿತಿ ಸಭೆಯಲ್ಲಿ ಮಾತನಾಡಿದರು.
ಯಾವುದೇ ರೀತಿಯ ಕಾನೂನು ಉಲ್ಲಂಘನೆ ಯಂತಹ ಚಟುವಟಿಕೆಗೆ ಅವಕಾಶ ಇಲ್ಲ. ಎಲ್ಲರೂ ಕಾನೂನು ಪಾಲನೆ ಮಾಡಬೇಕು. ಶಾಂತಿಯುತವಾಗಿ ಹಬ್ಬವನ್ನು ಆಚರಿಸಬೇಕು ಎಂದು ಮನವಿ ಮಾಡಿಕೊಂಡರು.
ಗಣಪತಿಯ ವಿಸರ್ಜನಾ ಪೂರ್ವ ಮೆರವಣಿಗೆಯಲ್ಲಿ ಡಿಜೆ ಬಳಕೆಗೆ ಹಿಂದೆಯೇ ನಿರ್ಬಂಧಗಳನ್ನು ಹೇರಲಾಗಿದೆ. ಈ ಬಾರಿಯೂ ಅದೇ ನಿರ್ಬಂಧಗಳು ಮುಂದುವರೆಯಲಿವೆ. ಗಣಪತಿಯ ವಿಗ್ರಹದ ವಿಸರ್ಜನೆಗೆ ನಿಗದಿಪಡಿಸಿದ ಸಮಯದಲ್ಲಿ ನೆರವೇರಿಸುವ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಮನವಿ ಮಾಡಿದರು.
ಗಣಪತಿ ಪೆಂಡಾಲ್ ನಿರ್ಮಿಸುವವರು ಸುರಕ್ಷತೆ ದೃಷ್ಟಿಯಿಂದ ಅಳವಡಿಸುವುದು ಸೂಕ್ತ. ಪೆಂಡಾಲ್ ನಲ್ಲಿ ವಿದ್ಯುತ್, ಅಗ್ನಿ ಅವಘಡಕ್ಕೆ ಅವಕಾಶವಾಗದಂತೆ ಮುಂಜಾಗ್ರತ ಕ್ರಮವನ್ನು ವಹಿಸಬೇಕು ಎಂದು ಲಕ್ಷ್ಮೀ ಪ್ರಸಾದ್ ಅವರು ಸಲಹೆ ನೀಡಿದ್ದಾರೆ.