ಶಿರಾಳಕೊಪ್ಪ ಪಟ್ಟಣದಲ್ಲಿ ನಿನ್ನೆ ಸೋಮವಾರ ಇಬ್ಬರ ಯುವಕರ ಮಧ್ಯೆ ಆರಂಭವಾದ ಜಗಳ ಎರಡು ಕೋಮುಗಳ ನಡುವೆ ಸಂಘರ್ಷಕ್ಕೆ ಕಾರಣವಾಗಿದೆ.
ಈ ಘಟನೆಯ ಹಿನ್ನೆಲೆಯಲ್ಲಿ ವ್ಯಾಪಾರ ವೈವಾಟುಗಳು ಸ್ಥಗಿತಗೊಂಡ ಪರಿಣಾಮ ಪಟ್ಟಣದಲ್ಲಿ ಅಘೋಷಿತ ಬಂದ್ ಸ್ಥಿತಿ ನಿರ್ಮಾಣಗೊಂಡಿದೆ.
ಇಲ್ಲಿನ ಸೊರಬ ರಸ್ತೆಯಲ್ಲಿರುವ ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ನಿನ್ನೆ ಸೋಮವಾರ ಮಂಚಿಕೊಪ್ಪ ವಲಯ ಮಟ್ಟದ ಕ್ರೀಡಾಕೂಟ ನಡೆಯುತ್ತಿತ್ತು. ಕ್ರೀಡಾಕೂಟ ನೋಡಲು ಬಂದಿದ್ದ ಇಬ್ಬರು ಯುವಕರು ಗಲಾಟೆ ಮಾಡಿಕೊಂಡಿದ್ದು, ಅವರನ್ನು ಕ್ರೀಡಾಂಗಣದಿಂದ ಹೊರಗೆ ಕಳುಹಿಸಲಾಗಿತ್ತು.
ನಂತರ ಅವರು ಹತ್ತಿರದ ಮಂಚಿಕೊಪ್ಪ ಗ್ರಾಮಕ್ಕೆ ತೆರಳುತ್ತಿರುವಾಗ ಹಿರೇಕೆರೂರು ರಸ್ತೆಯಲ್ಲಿ ಬೇರೆ ಕೋಮಿನ ಯುವಕರ ತಂಡ ಅಡ್ಡಗಟ್ಟಿ ಹಲ್ಲೆ ಮಾಡಿದೆ. ಇದರಲ್ಲಿ ಮಂಚಿಕೊಪ್ಪ ಗ್ರಾಮದ ಆರು ಯುವಕರು ಗಾಯಗೊಂಡಿದ್ದಾರೆ. ಶಿರಾಳಕೊಪ್ಪದ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ. ಈ ಸಂಬಂಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಘಟನೆ ನಡೆದ ನಂತರ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಪಟ್ಟಣದಲ್ಲಿನ ವ್ಯಾಪಾರ ಬೈಬಲ್ ಸ್ಥಗಿತಗೊಳಿಸುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಮಾಲೀಕರು ಸ್ವಯಂ ಪ್ರೇರಿತರಾಗಿ ಅಂಗಡಿಗಳನ್ನು ಮುಚ್ಚಿದರು.
ಹೆಚ್ಚುವರಿ ಪೊಲೀಸ ವರಿಷ್ಠಾಧಿಕಾರಿ ವಿಕ್ರಮ ಅಮಟೆ, ಡಿವೈಎಸ್ಪಿ ಶಿವಾನಂದ್ ಮದರಖಂಡಿ ನೇತೃತ್ವದಲ್ಲಿ ಬಂದುಬಸ್ತ್ ಕೈಗೊಳ್ಳಲಾಗಿತ್ತು. ಜಿಲ್ಲಾ ಮೀಸಲು ಪೊಲೀಸ್ ಪಡೆಯ ಎರಡು ತುಕಡಿ ಹಾಗೂ ಆನವಟ್ಟಿ, ಸೊರಬ, ಶಿಕಾರಿಪುರದ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಪರಿಸ್ಥಿತಿ ಹತೋಟಿಯಲ್ಲಿದೆ.