ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಶ್ರೀಲಂಕಾಗೆ ಭಾರತ ಮತ್ತೆ ನೆರವಿನ ಹಸ್ತಚಾಚಿದೆ. 21 ಸಾವಿರ ಟನ್ ರಾಸಾಯನಿಕ ಗೊಬ್ಬರವನ್ನು ಕಳುಹಿಸಿ ಸಹಾಯಕ್ಕೆ ಬಂದಿದೆ.
ವಿಶೇಷ ಬೆಂಬಲದಡಿ ಭಾರತದ ಹೈಕಮಿಷನ್ ಆ ದೇಶಕ್ಕೆ ನಿನ್ನೆ ರಾಸಾಯನಿಕ ಗೊಬ್ಬರವನ್ನು ಹಸ್ತಾಂತರಿಸಿತು. ಕಳೆದ ತಿಂಗಳು 44 ಸಾವಿರ ಟನ್ ರಾಸಾಯನಿಕ ಗೊಬ್ಬರವನ್ನು ಪೂರೈಸಲಾಗಿತ್ತು. ಒಟ್ಟಾರೆ ಈ ವರ್ಷ ದ್ವೀಪರಾಷ್ಟ್ರಕ್ಕೆ ಭಾರತ 4 ಬಿಲಿಯನ್ ಡಾಲರ್ ನೆರವು ನೀಡಿದಂತಾಗಿದೆ.
ಶ್ರೀಲಂಕಾದ ಕೃಷಿ ಕ್ಷೇತ್ರ ಮತ್ತೆ ಚೇತರಿಕೆ ಕಾಣಲು ಈ ನೆರವು ನೀಡಲಾಗಿದೆ. ದೇಶದ ಆಹಾರ ಭದ್ರತೆಗೂ ಇದು ಬೆಂಬಲವಾಗಿರಲಿದೆ. ಉಭಯ ರಾಷ್ಟ್ರಗಳ ನಿಕಟ ಬಾಂಧವ್ಯವನ್ನೂ ಇದು ತೋರಿಸುತ್ತದೆ” ಎಂದು ಕೊಲಂಬೊದಲ್ಲಿರುವ ಭಾರತ ಹೈಕಮಿಷನ್ ಸರಣಿ ಟ್ವೀಟ್ ಮಾಡಿದೆ.
ಶ್ರೀಲಂಕಾದ ಅವಶ್ಯಕತೆಗಳಿಗೆ ಅನುಗುಣವಾಗಿ ಆರ್ಥಿಕ ಸಹಾಯವನ್ನು ನೀಡುವಲ್ಲಿ ಭಾರತ ಮುಂದಿದೆ. ಅಗತ್ಯವಿರುವ ಸಮಯದಲ್ಲಿ ಗರಿಷ್ಠ ಪ್ರಮಾಣದ ಸಹಾಯವನ್ನು ಒದಗಿಸಿದ ದೇಶವಾಗಿದೆ. ಈ ವರ್ಷದ ಆರಂಭದಿಂದ ದ್ವೀಪರಾಷ್ಟ್ರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿ ನಲುಗಿದೆ. ವಿದೇಶಿ ಸಾಲಗಳನ್ನು ಮರುಪಾವತಿ ಮಾಡುವುದನ್ನು ಮುಂದೂಡಿದೆ. ದೇಶದ 5.7 ಮಿಲಿಯನ್ ಜನರ ರಕ್ಷಣೆಗಾಗಿ ಲಂಕಾಡಳಿತ ಹಲವು ದೇಶಗಳ ನೆರವು ಬಯಸಿದೆ.