Shimoga News ಶಿವಮೊಗ್ಗ ಬದುಕು ಸುಂದರಗೊಳಿಸಲು ಹಾಗೂ ಸದಾ ಲವಲವಿಕೆಯಿಂದ ಆರೋಗ್ಯದಿಂದ ಇರಲು ಯೋಗ, ಪ್ರಾಣಾಯಾಮ ಮತ್ತು ಧ್ಯಾನ ಅತ್ಯಂತ ಸಹಕಾರಿಯಾಗುತ್ತದೆ ಎಂದು ರಾಷ್ಟ್ರಪ್ರಶಸ್ತಿ ಪುರಸ್ಕೃತ ಯೋಗಾಚಾರ್ಯ ಸಿ.ವಿ.ರುದ್ರಾರಾಧ್ಯ ಅಭಿಪ್ರಾಯಪಟ್ಟರು.
ಶಿವಗಂಗಾ ಯೋಗಕೇಂದ್ರದ ರಾಘವ ಶಾಖೆಯಲ್ಲಿ ಹಮ್ಮಿಕೊಂಡಿದ್ದ ವಿಶೇಷ ಯೋಗ, ಧ್ಯಾನ, ಪ್ರಾಣಾಯಾಮ ತರಬೇತಿ ಮತ್ತು ಮಾಹಿತಿ ಶಿಬಿರದಲ್ಲಿ ಮಾತನಾಡಿ, ಮನುಷ್ಯ ತನ್ನಲ್ಲಿನ ಅಸೂಯೆ, ಹೊಟ್ಟೆಕಿಚ್ಚು, ನಕರಾತ್ಮಕ ಭಾವನೆಗಳನ್ನು ತೊರೆಯಬೇಕು. ದುರಾಸೆ ಬಿಟ್ಟು ನೆಮ್ಮದಿ ಹಾಗೂ ಸಂತೋಷದ ಜೀವನ ರೂಢಿಸಿಕೊಳ್ಳಲು ಮುಂದಾಗಬೇಕು ಎಂದು ತಿಳಿಸಿದರು.
ಪ್ರತಿಯೊಬ್ಬರೂ ಯೋಗ ಅಭ್ಯಾಸ ಮಾಡುವುದು ಒಳ್ಳೆಯದು. ಯೋಗ, ಧ್ಯಾನ, ಪ್ರಾಣಾಯಾಮವನ್ನು ಅಭ್ಯಾಸ ಮಾಡುವುದರಿಂದ ದೇಹದ ಆರೋಗ್ಯ ಸದೃಢಗೊಳ್ಳುತ್ತದೆ. ಒತ್ತಡರಹಿತ ಜೀವನ ನಡೆಸಲು ಸಾಧ್ಯವಾಗುತ್ತದೆ. ಆಯುಷ್ಯ ವೃದ್ಧಿ ಜತೆಯಲ್ಲಿ ತೃಪ್ತಿಕರ ಬದುಕು ನಮ್ಮದಾಗುತ್ತದೆ ಎಂದರು.
Shimoga News ಯೋಗದ ಅಭ್ಯಾಸದಿಂದ ಮನುಷ್ಯನದಲ್ಲಿ ಧನಾತ್ಮಕ ಬದಲಾವಣೆ ಕಾಣಬಹುದಾಗಿದೆ. ಜೀವನಶೈಲಿ ಉತ್ತಮಗೊಳ್ಳುವ ಮೂಲಕ ಉನ್ನತ ಸಾಧನೆ ಮಾಡಲು ಸಹಕಾರಿಯಾಗುತ್ತದೆ. ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಅನೇಕರು ಯೋಗ ಕಲಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ತಿಳಿಸಿದರು.
ಮನಶಾಂತಿ ಮತ್ತು ಏಕಾಗ್ರತೆ ವೃದ್ಧಿಸುವ ಯೋಗ ಕಾರ್ಯಕ್ರಮ, ಒತ್ತಡ ಆತಂಕ ನಿರ್ವಹಣೆ ಬಗ್ಗೆ ಎಸ್.ವ್ಯಾಸ ಅವರು ಯೋಗ ವಿಶ್ವವಿದ್ಯಾಲಯ ನಿರ್ಮಿತ ತರಬೇತಿಯನ್ನು ನೀಡಿದರು.
80ಕ್ಕೂ ಹೆಚ್ಚು ಯೋಗ ಪ್ರಶಿಕ್ಷಣಾರ್ಥಿಗಳು ಯೋಗ ಶಿಬಿರದಲ್ಲಿ ಪಾಲ್ಗೊಂಡಿದ್ದರು. ರಾಘವ ಶಾಖೆ ಯೋಗ ಶಿಕ್ಷಕರಾದ ಜಿ.ಎಸ್.ಓಂಕಾರ್, ವೈ.ಎಸ್.ವಿಜಯಕೃಷ್ಣ, ಎಚ್.ಕೆ.ಹರೀಶ್, ನರಸೋಜಿ ರಾವ್, ಜಿ.ವಿಜಯಕುಮಾರ್, ಸುಜಾತಾ ಮಧುಕೇಶ್ವರ, ಗಾಯತ್ರಿ ಅಶೋಕ್, ಮಹೇಶ್, ಎಸ್.ಟಿ.ಆನಂದ್, ಶಂಕರ್, ಶಶಿಧರ್, ಶಿವಕುಮಾರ್, ದೀಪಕ್, ಸುರೇಖಾ, ಅಜಯ್, ಅರುಣ್, ಸುಮಂತ್, ಸತೀಶ್ ಉಮೇಶ್ ಉಪಸ್ಥಿತರಿದ್ದರು.