ಹಬ್ಬ ಹರಿದಿನಗಳು ನಮ್ಮ ಸಂಸ್ಕೃತಿಯ ಪ್ರತಿಬಿಂಬ. ಹಬ್ಬಗಳು ನಮ್ಮನ್ನು ಪರಸ್ಪರ ಒಂದಾಗಿಸಲು, ನಮ್ಮ ಪ್ರೀತಿ, ವಿಶ್ವಾಸ ಹಂಚಿಕೊಳ್ಳಲು ಹಾಗೂ ಭಾವನೆಗಳನ್ನು ವ್ಯಕ್ತಪಡಿಸಲು ಸಹಕಾರಿಯಾಗುತ್ತದೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಜಿಲ್ಲಾ ಮುಖ್ಯ ಆಯುಕ್ತ ಕೆ.ಪಿ.ಬಿಂದುಕುಮಾರ್ ಹೇಳಿದರು.
ಶಿವಮೊಗ್ಗ ನಗರದಲ್ಲಿರುವ ಸ್ಕೌಟ್ ಭವನದಲ್ಲಿ ಮಲ್ನಾಡ್ ಓಪನ್ ಗ್ರೂಪ್‌ನಿಂದ ಆಯೋಜಿಸಿದ್ದ ಪರಿಸರ ಗಣಪತಿ ಗಣೇಶೋತ್ಸವ ವಿಶೇಷ ಪೂಜೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿ, ಉತ್ಸವ ಸಂದರ್ಭಗಳಲ್ಲಿ ಪ್ರತಿಭೆ ಅನಾವರಣಗೊಳಿಸಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಎಚ್.ಪರಮೇಶ್ವರ್ ಮಾತನಾಡಿ, ಸಾಕಷ್ಟು ವರ್ಷಗಳಿಂದ ನಿರಂತರವಾಗಿ ಭಕ್ತಿ ಶ್ರದ್ಧೆಯಿಂದ ಗಣೇಶನ ಪ್ರತಿಷ್ಠಾಪಿಸಿ ಪೂಜೆ, ಹೋಮ, ಹವನಗಳನ್ನು ನಡೆಸಿಕೊಂಡು ಬಂದಿದ್ದು, ಎಲ್ಲರಿಗೂ ಒಳಿತಾಗಲಿ ಎಂದು ಆಶಿಸಿದರು.
Bharat Scouts and Guides ಇದೇ ಸಂದರ್ಭದಲ್ಲಿ ಕೇಂದ್ರ ಸ್ಥಾನಿಕ ಆಯುಕ್ತ ಜಿ.ವಿಜಯಕುಮಾರ್ ಮಾತನಾಡಿ, ಮಕ್ಕಳಲ್ಲಿ ಧಾರ್ಮಿಕ ಭಾವನೆ ಜತೆಗೆ ಆತ್ಮವಿಶ್ವಾಸ ಮೂಡಿಸುವುದರ ಜತೆಗೆ ಸಂವಹನ ಕೌಶಲ್ಯ ವೃದ್ಧಿಯಾಗುತ್ತದೆ. ಮಲ್ನಾಡ್ ಓಪನ್ ಗ್ರೂಪ್ ಮಕ್ಕಳು ಪದಾಧಿಕಾರಿಗಳು ಶ್ರಮ ವಹಿಸಿ ಪರಿಸರ ಗಣಪತಿ ಮಾಡಿದ್ದು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅತ್ಯಂತ ಉತ್ಸಾಹದಿಂದ ಪಾಲ್ಗೊಳ್ಳುತ್ತಿರುವುದು ಸಂತೋಷದ ಸಂಗತಿ ಎಂದು ತಿಳಿಸಿದರು.
ಪ್ರಮುಖರಾದ ಶ್ರೀನಿವಾಸ್ ವರ್ಮಾ, ಮಲ್ಲಿಕಾರ್ಜುನ ಕಾನೂರ್, ರಾಜೇಶ್ ಅವಲಕ್ಕಿ, ಕೃಷ್ಣಪ್ಪ , ಚೇತನ್ ರಾಯನಹಳ್ಳಿ, ಲೋಹಿತ್ ಕುಮಾರ್ , ಪೃಥ್ವಿರಾಜ್ ಗಿರಿಮಾಜಿ , ರೇವಂತ್ ಹೆಚ್ ಪಿ , ಗಣೇಶ್ ಹೆಚ್ ವಿ , ಹೇಮಲತಾ , ಆಶಾ ವರ್ಮಾ , ರಕ್ಷಾ ಹೆಚ್ ಎಸ್ , ಪೃಥ್ವಿ, ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳು ಹಾಜರಿದ್ದರು.