Wednesday, November 27, 2024
Wednesday, November 27, 2024

D. Devaraja Arasu ಹಸಿದ ಹೊಟ್ಟೆಗೆ ಅನ್ನ ನೀಡಿದವರು ದೇವರಾಜ ಅರಸ್- ಬಿ.ವೈ.ರಾಘವೇಂದ್ರ

Date:

D. Devaraja Arasu ಶೋಷಿತರು, ಹಿಂದುಳಿದವರು, ತಳ ಸಮುದಾಯ, ರೈತಾಪಿ ವರ್ಗದವರ ಕೈಹಿಡಿದು ಅವರ ಪರವಾಗಿ ಕಾನೂನುಗಳನ್ನು ತರುವ ಮೂಲಕ ಅವರ ಏಳ್ಗೆಗೆ ಶ್ರಮಿಸಿದವರು ಡಿ.ದೇವರಾಜ ಅರಸುರವರು ಎಂದು ಸಂಸದರಾದ ಬಿ.ವೈ.ರಾಘವೇಂದ್ರ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ಪ್ರಗತಿಪರ ಸಾಧನೆಗಳ ಸರದಾರ, ಸಾಮಾಜಿಕ ಪರಿವರ್ತನೆಯ ಹರಿಕಾರ ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಡಿ.ದೇವರಾಜ ಅರಸುರವರ 109 ನೇ ಜನ್ಮ ದಿನಾಚರಣೆ ಹಾಗೂ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕ್ರಾಂತಿಕಾರಿ ಬದಲಾವಣೆಯಿಂದ ಹಸಿದ ಹೊಟ್ಟೆಗೆ ಅನ್ನ ನೀಡಿದವರು. ಭೂ ಸುಧಾರಣೆ ಕಾಯ್ದೆ ಜಾರಿಗೆ ತರುವ ಮೂಲಕ ಜಮೀನ್ದಾರಿ ಪದ್ದತಿಯನ್ನು ನಿರ್ಮೂಲನೆ ಮಾಡಿ ಉಳುವವನೇ ಒಡೆಯನನ್ನಾಗಿ ಮಾಡಿದರು. ಸಾಮಾಜಿಕ ಪಿಡುಗಾಗಿದ್ದ ಮಲ ಹೊರುವ ಪದ್ಧತಿ ನಿರ್ಮೂಲನೆ ಮಾಡಿದರು. ಜೀತದಾಳು ಪದ್ದತಿಗೆ ಮುಕ್ತಿ ನೀಡಿದರು.

ಹತ್ತು ಹಲವಾರು ಕಾರ್ಯಕ್ರಮಗಳ ಮೂಲಕ ಹಿಂದುಳಿದವರ ಬೆಳಕಾದರು. ಹಾವನೂರು ವರದಿ ಜಾರಿಗೆ ತರುವ ಮೂಲಕ ಹಿಂದುಳಿದ ವರ್ಗಗಳ ಏಳ್ಗೆಗೆ ಕಾರಣರಾದರು.
ಬ್ರಹ್ಮಶ್ರೀ ನಾರಾಯಣ ಗುರುಗಳು ಜಾತಿ, ಧರ್ಮಕ್ಕಿಂತ ಮನುಕುಲ ಶ್ರೇಷ್ಟವೆಂದು ಅಸ್ಪೃಶ್ಯರಿಗೆ, ಹಿಂದುಳಿದವರಿಗೆ ನೂರಾರು ಕೆರೆ ಕಟ್ಟೆ, ದೇವಾಲಯ ಕಟ್ಟಿಸಿದರು.

ಕೀಳರಿಮೆ ಬಿಟ್ಟು ಬೃಹತ್ ಆಗಿ ಚಿಂತಿಸಬೇಕು ಹಾಗೂ ಸಮಾಜದ ಏಳ್ಗೆಗಾಗಿ ಎಲ್ಲರೂ ಒಂದಾಗ ಬೇಕು ಎಂದು ಸಾರಿದರು.
ಪ್ರಕೃತಿಗೆ ನಾವು ಇದುವೆರೆಗೆ ಮಾಡಿರುವ ದಬ್ಬಾಳಿಕೆಗೆ ಪ್ರಕೃತಿ ಸುನಾಮಿ, ಭೂಸಿತ ಇತರೆ ವಿಕೋಪದ ಮೂಲಕ ಸೇಡು ತೀರಿಸಿಕೊಳ್ಳುತ್ತಿದೆ. ಇಂದಿನ ಪೀಳಿಗೆ ಇದನ್ನೆಲ್ಲ ಸೂಕ್ಷ್ಮ ವಾಗಿ ಗಮನಿಸಿ ತಿದ್ದಿ ನಡೆಯಬೇಕು ಎಂದ ಅವರು ಯುವಜನತೆಗೆ ಪ್ರಸ್ತುತ ಅನೇಕ ಉದ್ಯೋಗಾವಕಾಶವನ್ನು ಸರ್ಕಾರಗಳು ಕಲ್ಪಿಸಿವೆ. ರಾಷ್ಟ್ರೀಯ ಕೌಶಲ್ಯಾಭಿವೃದ್ದಿ ಕಾರ್ಯಕ್ರಮದ ವತಿಯಿಂದ 500 ಅತ್ಯುತ್ತಮ ಕಂಪನಿಗಳು ಕೌಶಲ್ಯ ತರಬೇತಿ ಪಡೆದವರಿಗೆ ಉದ್ಯೋಗಾವಕಾಶ ನೀಡಲು ಮುಂದಾಗಿವೆ. ದಕ್ಷಿಣ ಭಾರತದಲ್ಲೇ ಮೊದಲನೆಯದಾಗಿ ಬೈಂದೂರಿನಲ್ಲಿ ಕೌಶಲ್ಯಾಭಿವೃದ್ದಿ ತರಬೇತಿ ಕೇಂದ್ರ ಆರಂಭಿಸಲಾಗುತ್ತಿದ್ದು ಶಿವಮೊಗ್ಗದಲ್ಲಿಯೂ ತರಬೇತಿ ನೀಡಲಾಗುವುದು. ಶಿವಮೊಗ್ಗ ಜಿಲ್ಲೆಯಲ್ಲಿ ಅಭಿವೃದ್ದಿ ಕೆಲಸಗಳು ಉತ್ತಮವಾಗಿ ಸಾಗುತ್ತಿದ್ದು ಜಿಲ್ಲೆಗೆ ಉಜ್ವಲ ಭವಿಷ್ಯವಿದೆ ಎಂದರು.

ಬೆಂಗಳೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ.ರಾಜಪ್ಪ ದಳವಾಯಿ ಅರಸುರವರ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ರಾಜ್ಯದ ಚರಿತ್ರೆಯಲ್ಲಿ 70 ರ ದಶಕ ರಾಜಕೀಯ, ಸಾಮಾಜಿಕ, ಶೈಕ್ಷಣಿಕ ದೃಷ್ಟಿಯಿಂದ ಭೀಕರವಾಗಿದ್ದು, ಇಂತಹ ವೈಪರೀತ್ಯಗಳ ಸಂದರ್ಭದಲ್ಲಿ ಅರಸುರವರು ರಾಜಕೀಯ ಪ್ರವೇಶ ಮಾಡುತ್ತಾರೆ. ಅರಸು ಮನೆತನದವರಾದರೂ ರೈತ ಕುಟುಂಬದ ಶ್ರಮಜೀವಿ ವ್ಯಕ್ತಿ ಇವರಾಗಿರುತ್ತಾರೆ. ರಾಜ್ಯದಲ್ಲಿ ಮೊತ್ತ ಮೊದಲಿಗೆ ಪ್ರಜಾಸತ್ತಾತ್ಮಕಕವಾಗಿ ಮೈಸೂರು ಸಂಸ್ಥಾನ ಮತ್ತು ಕೊಲಾಪುರ್ ಸಂಸ್ಥಾನಗಳು ಹಿಂದುಳಿದವರಿಗೆ ಮೀಸಲಾತಿಯನ್ನು ಜಾರಿಗೆ ತರುತ್ತಾರೆ.

D. Devaraja Arasu ಮೀಸಲಾತಿ ಒಂದು ವೈಜ್ಞಾನಿಕ ಕ್ರಮವಾಗಿದ್ದು ಮೊದಲ ಬಾರಿಗೆ ಅರಸುರವರು ರೋಸ್ಟರ್ ಪದ್ದತಿ ಜಾರಿಗೆ ತರುತ್ತಾರೆ. ರಾಜಕೀಯವಾಗಿ ಹಲವಾರು ಶಿಷ್ಯಂದಿರನ್ನು ಬೆಳೆಸುತ್ತಾರೆ. ಕೆಲವರಿಗೆ ರಾಜಕೀಯ ಧೀಕ್ಷೆ ನೀಡುತ್ತಾರೆ. 20 ಅಂಶಗಳ ಕಾರ್ಯಕ್ರಮವನ್ನು ಯಶಸ್ವಿಯಾಗಿ ಜಾರಿಗೊಳಿಸುತ್ತಾರೆ.
. ಅರಸು ಅವರ ಜೀವನವೇ ಆದರ್ಶಮಯ, ತುಂಬಾ ಓದಿಕೊಂಡವರು. ಸಾಮಾನ್ಯ ಜನರಿಗೆ ಮಿಡಿಯುವ ಶಕ್ತಿ ಅವರಲ್ಲಿತ್ತು. ಭೂ ಸುಧಾರಣಾ ಕಾಯ್ದೆ ತಂದಾಗ ಅನೇಕರು ಈ ಕಾನೂನನ್ನು ಒಪ್ಪಿ ನಡೆಯುತ್ತಾರೆ. ಅನಿಷ್ಟ ಪದ್ದತಿಯಾದ ಮಲಹೊರುವ ಪದ್ದತಿ ನಿಷೇಧ ಮಾಡುತ್ತಾರೆ. ಹಾವನೂರು ಕಮಿಷನ್ ಜಾರಿಗೊಳಿಸುವ ಮೂಲಕ ಹಿಂದುಳಿದವರಿಗೆ ಉದ್ಯೊಗ ಶಿಕ್ಷಣ ದೊರೆತು ಬದುಕು ಬದಲಿಸಲು ಸಾಧ್ಯವಾಯಿತು.

ಅನೇಕ ಬಗೆಯ ಖಾತೆಗಳನ್ನು ನಿರ್ವಹಿಸಿದ ಅವರು ಹಲವಾರು ಸುಧಾರಣೆ ತರುತ್ತಾರೆ. 70 ರ ದಶಕದಲ್ಲಿ ರಾಜ್ಯದಲ್ಲಿ ಸರ್ವಾಂಗೀಣ ಬೆಳವಣಿಗೆಯನ್ನು ಮಾಡಿದವರೆಂದರೆ ಅರಸು. .ಜನತಾ ಮನೆ, ಭಾಗ್ಯಜ್ಯೋತಿ ವಿದ್ಯುತ್, ಉದ್ಯೋಗ ಕಚೇರಿ, ನ್ಯಾಯಬೆಲೆ ಅಂಗಡಿ ಸ್ಥಾಪನೆ, ನಿಗಮಗಳ ಸ್ಥಾಪನೆ ಸೇರಿದಂತೆ 150 ಕ್ಕೂ ಹೆಚ್ಚು ಮಹತ್ವದ ಕಾರ್ಯಕ್ರಮ ನೀಡುತ್ತಾರೆ. ರಾಜ್ಯ ಬೆಳಗಿದ ದೊಡ್ಡ ಆಡಳಿತಗಾರನ ರಾಜಕೀಯ ಜೀವನವೇ ರೋಚಕವಾಗಿದ್ದು ಅನೇಕ ಏಳುಬೀಳು ಸಂಭವಿಸುತ್ತವೆ.
ವರದಿಯೊಂದರ ಪ್ರಕಾರ ಪ್ರಸ್ತುತ ರಾಜ್ಯದಲ್ಲಿ 1500 ಕ್ಕೂ ಹೆಚ್ಚು ಉಪ ಜಾತಿ ಇವೆ. 89 ಹೊಸ ಜಾತಿ ಸೇರ್ಪಡೆಯಾಗಿದೆ.

ನಾವೆಲ್ಲ ನಮ್ಮ ನಡುವಿನ ಜಾತಿ ಕೋಟಲೆಯನ್ನು ಕಡಿಮೆ ಮಾಡಲು ಪ್ರಯತ್ನಿಸಬೇಕು. ಜಾತೀಯತೆ ಮಾಡದಿರುವುದೇ ನಾವು ಸಮಾಜಕ್ಕೆ ಕೊಡುವ ಕೊಡುಗೆ ಎಂದು ತಿಳಿಸಿದರು.
ವಿಧಾನ ಪರಿಷತ್ ಶಾಸಕರಾದ ಬಲ್ಕೀಶ್ ಬಾನು ಮಾತನಾಡಿ, ನಾನು ಕೂಡ ಅರಸುರವರ ಸುಧಾರಣಾ ಕಾರ್ಯಕ್ರಮಗಳ ಫಲಾನುಭವಿ. ಅವರೊಬ್ಬ ಸಾಮಾಜಿಕ ಚಿಂತಕ. ಬಡವರು, ದೀನ ದಲಿತರ ಸಮಸ್ಯೆ ಆಲಿಸಿ ಪರಿಹಾರ ಒದಗಿಸುತ್ತಿದ್ದ ನಾಯಕ. ಅವರು ವೃತ್ತಿಯಲ್ಲಿ ಹಿಂದುಳಿದವರಿಗಾಗಿ, ಶ್ರಮಿಕರಿಗಾಗಿ, ಶೋಷಿತರಿಗಾಗಿ ಹೋರಾಟ ಮಾಡುತ್ತಿದ್ದರೇ ಹೊರತು ಅವರ ಹೋರಾಟ ಜಾತಿ ಆಧಾರಿತವಾಗಿರಲಿಲ್ಲ ಎಂದರು.
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪನ್ಯಾಸಕಿ ಜ್ಯೋತಿ ಕುಮಾರಿ ಕೆ ವಿ ನಾರಾಯಣ ಗುರುಗಳ ಬಗ್ಗೆ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಅಂದಿನ ಕಾಲಘಟ್ಟದಲ್ಲಿದ್ದ ಸಾಮಾಜಿಕ ಸುಶುಪ್ತಿಯನ್ನು ಎಚ್ಚರಿಸಿ, ಸಿದ್ದತೆ ಮೂಲಕ ಉತ್ತರ ನೀಡಿದವರು ಶ್ರೀ ನಾರಾಯಣ ಗುರುಗಳು. ತಮ್ಮ ಹೋರಾಟಕ್ಕೆ ಧೈರ್ಯ ತಂದುಕೊಂಡು ಸಮನ್ವಯ ಸಾಧಿಸಲು ಮುಂದಾಗುತ್ತಾರೆ. ಮನುಷ್ಯ ಧರ್ಮ ಒಂದೇ ಎಂದು ಸಾರುತ್ತಾರೆ. ಅಸ್ಪೃಶ್ಯರಿಗೆ ದೇವಾಲಯಗಳನ್ನೇ ನಿಮ್ಮೆಡೆಗೆ ತರುತ್ತೇನೆಂದು ಅವರಿಗಾಗಿ ದೇವಸ್ಥಾನಗಳನ್ನು ಸ್ಥಾಪಿಸಿ ಧಾರ್ಮಿಕ ಸುಧಾರಣೆ ತರುತ್ತಾರೆ. ಅವರೊಬ್ಬ ಸಾಮಾಜಿಕ ಚಿಕಿತ್ಸಕ. ಶಿಕ್ಷಣದಿಂದ ಸಮಾಜನತೆ ಸಾಧ್ಯವೆಂದು ಅರಿತ ಅವರು 176 ಶಾಲೆಗಳನ್ನು ಹಾಗೂ ಹಲವು ವಯಸ್ಕರ ಶಿಕ್ಷಣ ಕೇಂದ್ರಗಳನ್ನು ಸ್ಥಾಪಿಸುತ್ತಾರೆ.. ಅವರ ಹೋರಾಟ ಶಾಂತಿಯುತವಾಗಿದ್ದು ಸಾಮಾಜಿಕ ಜಾಗೃತಿ ಮೂಡಿಸುತ್ತಾರೆ. ಮಾನವ ಧರ್ಮ ಶ್ರೇಷ್ಟವೆಂದು ಪ್ರತಿಪಾದಿಸಿದ ಅವರು ಯುವಕರನ್ನು ಸಂಘಟಿಸುವ ಮೂಲಕ ಸಂಘಟನೆಯ ಮಹತ್ವ ತಿಳಿಸುತ್ತಾರೆ.

ಶಾಪಗ್ರಸ್ತ ನಾಡು ಎಂದೆನಿಸಿಕೊಂಡಿದ್ದ ಕೇರಳ ಇಂದು ಅತಿ ಹೆಚ್ಚು ಲಿಂಗಾನುಪಾತ, ಸಾಕ್ಷರತೆ ಇದ್ದು ಬುದ್ದಿವಂತರ ದೇವರನಾಡು ಎಂದು ಕರೆಸಿಕೊಳ್ಳುವಲ್ಲಿ ನಾರಾಯಣ ಗುರುಗಳ ಕೊಡುಗೆಯೂ ಇದೆ ಎಂದು ತಿಳಿಸಿದರು.

ಪ್ರತಿಭಾ ಪುರಸ್ಕಾರ: ಹಿಂದುಳಿದ ವರ್ಗಗಳ ವಸತಿ ಶಾಲೆಗಳಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಹಾಗೂ ಶೇ.100 ಫಲಿತಾಂಶ ಪಡೆದ ವಸತಿ ಶಾಲೆಗಳ ಮುಖ್ಯ ಶಿಕ್ಷಕರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಹಾಗೂ ವಸತಿ ಶಾಲೆಗಳಲ್ಲಿ ಏರ್ಪಡಿಸಲಾಗಿದ್ದ ಪ್ರಬಂಧ, ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಇದೇ ವೇಳೆ ಸದ್ಬಾವನಾ ದಿನದ ಪ್ರತಿಜ್ಞಾ ವಿಧಿಯನ್ನು ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಶೋಭಾ ಕೆ ಆರ್ ಬೋಧಿಸಿದರು. ಶಾಸಕರಾದ ಎಸ್.ಎನ್. ಚನ್ನಬಸಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಸ್ವಾಗತಿಸಿದರು. ವಿಧಾನ ಪರಿಷತ್ ಶಾಸಕರಾದ ಧನಂಜಯ ಸರ್ಜಿ, ಡಿ.ಎಸ್.ಅರುಣ್, ಕರ್ನಾಟಕ ರಾಜ್ಯ ಭೋವಿ ಅಭಿವೃದ್ದಿ ನಿಗಮದ ಅಧ್ಯಕ್ಷ ರವಿಕುಮಾರ್, ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಚಂದ್ರಭೂಪಾಲ್, ಆರ್ಯ ಈಡಿಗರ ಸಂಘದ ಜಿಲ್ಲಾಧ್ಯಕ್ಷ ಶ್ರೀಧರ್ ಹುಲ್ತಿಕೊಪ್ಪ, ಜಿಲ್ಲಾ ಹಿಂದುಳಿದ ವರ್ಗಗಳ ಜಾತಿ ಒಕ್ಕೂಟದ ಅಧ್ಯಕ್ಷ ವಿ.ರಾಜು, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಿಥುನ್ ಕುಮಾರ್, ವಿವಿಧ ಸಮಾಜದ ಮುಖಂಡರು, ಅಧಿಕಾರಿಗಳು, ವಿದ್ಯಾರ್ಥಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related