Saturday, November 23, 2024
Saturday, November 23, 2024

Klive Special Article ಆನೆಗಳಿಗೂ ಮನಸ್ಸುಂಟು

Date:

ಅಪರೂಪದ ಕೃತಿಗಳು…
” ಒಂದು ಆನೆಯ ಸುತ್ತ”
ಲೇ; ಗಿರಿಮನೆ ಶಾಮರಾವ್.
ಪರಿಚಯ: ಪ್ರಭಾಕರ ಕಾರಂತ.
ಹೊಸಕೊಪ್ಪ- ಶೃಂಗೇರಿ.

Klive Special Article “ಒಂದು ಆನೆಯ ಸುತ್ತ” ಗಿರಿಮನೆ ಶ್ಯಾಮರಾಯರ ಮತ್ತೊಂದು ಕಾದಂಬರಿ.ಹೆಸರೇ ಸೂಚಿಸುವಂತೆ ಇದು ಆನೆಯ ಸುತ್ತಲೇ ರಚಿಸಿದ ಕತೆಯಾದರೂ ಅದರೊಳಗೆ ಆನೆಯ ಕಾಡಿದೆ. ಅದನ್ನು ನಾಶಮಾಡಿದ ಮನುಷ್ಯನಿದ್ದಾನೆ. ವನ್ಯ ಜೀವಿ ಮತ್ತು ಮನುಷ್ಯ ಸಂಘರ್ಷದಲ್ಲಿ ಕಳನಾಯಕ ಯಾರು ಎಂಬ ಜಿಜ್ಞಾಸೆ ಇದೆ.ಪಶ್ಚಿಮ ಘಟ್ಟದ ದಟ್ಟ ಕಾನನದ ಕರಾಳ ಅಧ್ಯಾಯ ಇದೆ.ಮಾಫಿಯಾ ಮತ್ತು ಮರಿ ಮಾಫಿಯಾ ಕತೆ ಇದೆ.ಅರಣ್ಯ ಇಲಾಖೆಯ ಗುಟ್ಟಿದೆ.ಭ್ರಷ್ಟರ ಹುನ್ನಾರ ಇದೆ.ಅಪರೂಪವಾದರೂ ನೈಜ ವನ್ಯ ಜೀವಿ ಪ್ರೇಮಿಗಳಿದ್ದಾರೆ. ಧಕ್ಷ ನಿಯಮ ಕರ್ತವ್ಯ ನಿಷ್ಠೆಯ ಅಧಿಕಾರಿಗಳಿದ್ದಾರೆ. ಹಳ್ಳಿಗಾಡಿನ ಬದುಕಿನ ನೈಜ ಚಿತ್ರಣ ಇದೆ.ರೆಸಾರ್ಟ್ ಸಂಸ್ಕೃತಿಯ ಅನಾವರಣ ಇದೆ.ಒಂದು ಪುಟ್ಟ ಕಾದಂಬರಿಯಲ್ಲಿ ಇಷ್ಠೆಲ್ಲಾ ಸಂಗತಿ ತುರುಕಿದಂತೆ ಇರದೇ ಸಹಜವಾಗೇ ಒಂದಕ್ಕೊಂದು ಬೆಸೆದ ಕತನ ಆಗಿರುವುದೇ ಇದರ ವಿಶೇಷ.

ನನ್ನ ಬಾಲ್ಯ ಆನೆ ಸದಾ ಕಣ್ಣಿಗೆ ಬೀಳುತ್ತಲೇ ಇದ್ದ ಕಾಲ.ಅವು ಕಾಡಾನೆಗಳಲ್ಲ. ಸಾಕಿದ ಆನೆ.ಹುಲಿಕಲ್ ನಲ್ಲಿ ಅರಣ್ಯ ಕಡಿತಲೆ 1963-64 ರ ಹಾಗೇ ಆರಂಭವಾಗಿತ್ತು. ಕಾಡಿನ ಕಮರಿಯಲ್ಲಿ ಉರುಳಿದ ಮರ ಆಗ ಎತ್ತಲು ಆನೆ ಬರುತ್ತಿದ್ದವು.ಅವು ಹೋಗುತ್ತಿದ್ದಾಗ ಪ್ರತಿ ಬಾರಿಯೂ ಅದರ ಹಿಂದೆ ನಮ್ಮ ಮಕ್ಕಳ ಸೈನ್ಯ ಸಾಕಷ್ಟು ದೂರ ಅದನ್ನು ಹಿಂಬಾಲಿಸುತ್ತಿತ್ತು. ಅದೆಷ್ಟು ಬಾರಿ ಆ ದೈತ್ಯ ಪ್ರಾಣಿಯನ್ನು ನೋಡಿದರೂ ನಮಗೆ ಬೇಜಾರು ಬಂದಿದ್ದೇ ಇಲ್ಲ. ಮುಂದೆ ನಮ್ಮ ಮುಳುಗಡೆಯ ಊರಿಗೂ ಅರಣ್ಯ ಬೋಳಿಸಿ ಸಾಗಿಸುವಾಗ ಆನೆ ಬಂದಿತ್ತು. ಆಗ ಯುವಕನಾಗಿದ್ದರೂ ಆನೆ ಬೇಜಾರು ಬಂದಿರಲಿಲ್ಲ.ಅದೇ ಕುತೂಹಲದಿಂದ ಆನೆ ನೋಡುವುದಿತ್ತು. ಈಗ ಶೃಂಗೇರಿಯ ಹತ್ತಿರವೇ ನೆಲೆಸಿರುವ ನನಗೆ ಮಠಕ್ಕೆ ಹೋದಾಗ ಆನೆ ಜೋಡಿ ಬಂದರೆ ಅವುಗಳನ್ನು ಅದೇ ಅಚ್ಚರಿಯಿಂದಲೇ ನೋಡುವ ಅಭ್ಯಾಸ ಉಳಿದಿದೆ.
ಸಕ್ರೆಬೈಲಿನ ಆನೆ ಬಿಡಾರದ ಕುರಿತು ಲೇಖನ ಮಾಡಿಕೊಡಲು ತರಂಗ ಸಂಪಾದಕರಾದ ರಾಜಲಕ್ಷ್ಮಿಯವರು ಕೋರಿದಾಗ ನಾನು ವಾರ್ಷಿಕ ಆನೆ ಹಬ್ಬದ ದಿನ ಆನೆ ಬಿಡಾರಕ್ಕೆ ತೆರಳಿದ್ದೆ.ಅಂದು ಲೇಖನಕ್ಕಾಗಿ ಆನೆ ಮಾವುತರು, ಆನೆ ಡಾಕ್ಟರ್, ಅರಣ್ಯ ಇಲಾಖೆಯ ಸಿಸಿಎಫ್ ಸೇರಿದಂತೆ ಅನೇಕರನ್ನು ಸಂದರ್ಶಿಸಿದ್ದೆ. ನನ್ನ ಗುರುತಿನ ಎಸಿಎಫ್ ಚಂದ್ರಶೇಖರ್ ಎಂಬುವವರು ನನಗೆ ಶಿವಮೊಗ್ಗದಿಂದ ಅಲ್ಲಿಗೆ ಕರೆದೊಯ್ದು ಎಲ್ಲಾ ಸಹಕಾರ ನೀಡಿದ್ದರು. ಆನೆ ಬಂತೊಂದಾನೆ ಲೇಖನ ತರಂಗದ ಮುಖಪುಟ ಲೇಖನವಾಗಿ ಪ್ರಕಟವಾಗಿ ವ್ಯಾಪಕ ಓದುಗರ ಮೆಚ್ಚಿಗೆ ಗಳಿಸಿತು. ಆದಿನ ಅರಣ್ಯ ಇಲಾಖೆಯವರು ನನಗೆ ಆನೆ ಚಿತ್ರದ ನೆನಪು ಕಾಣಿಕೆ ಕೊಟ್ಟಿದ್ದರು.
Klive Special Article ಸಾಕಿದ ಆನೆಗಳೂ ಮರಿ ಹಾಕುತ್ತವೆ.ಅವುಗಳ ಆಟ ಪಾಟ ನೋಡುವುದೇ ಒಂದು ಸಂಭ್ರಮ.ಆದರೆ ಕಾಡಾನೆಗಳಿಗೆ ಇರುವಂತೆ ಈ ಸಾಕಿದಾನೆ ಮರಿಗಳಿಗೆ ತಾಯಿಯ ಜೊತೆಗೇ ಬೆಳೆದು ದೊಡ್ಡ ಆಗುವ ಭಾಗ್ಯ ಇಲ್ಲ.ಅವುಗಳನ್ನು ಆನೆ ಶಾಲೆಗೆ ಸೇರಿಸುವಾಗ ಬೇರ್ಪಡಿಸಿ ಪರಸ್ಪರ ಮರೆಸುವ ಕ್ರೂರ ಪದ್ದತಿ ಅನುಸರಿಸಲಾಗುತ್ತದೆ.ತನ್ನ ಮರಿಗಾಗಿ ತಾಯಾನೆ ಮತ್ತು ತಾಯಿಗಾಗಿ ಮರಿಯ ಹಂಬಲ ಕಣ್ಣೀರು ತರಿಸುತ್ತದೆ. ಕಡೆಗೂ ಶಾಲಾ ಜೀವನ ಮುಗಿಸಿ ಅವೆರಡು ಒಂದಾಗುವಾಗ ಅವುಗಳಿಗೆ ಪರಸ್ಪರ ಪರಿಚಯವೇ ಇರುವುದಿಲ್ಲ!.
ಗಿರಿಮನೆಯವರ ಕಾದಂಬರಿ ಇದನ್ನೆಲ್ಲಾ ನೆನಪಿಗೆ ತಂದಿತು. ಆನೆಯನ್ನಿಟ್ಟುಕೊಂಡೇ ಒಂದು ಕಾದಂಬರಿ ಬರೆಯುತ್ತಲೇ ಒಂದು ಪ್ರಭಲ ಸಂದೇಶ ನೀಡುವ ಲೇಖಕರ ಯಶಸ್ಸು ನನ್ನ ಮೆಚ್ಚಿಗೆಗೆ ಪಾತ್ರವಾಯಿತು. ಊರಿಗೆ ನುಗ್ಗಿ ಬೆಳೆ ನಾಶ,ಕಿರಿಕಿರಿ ಮಾಡಿದ ಕೆಲವರ ಹತ್ಯೆ,ಸೊಂಟ ಮುರಿತ, ಹೀಗೆ ಸಾಕಷ್ಟು ಅನಾಹುತ ಮಾಡಿದ ಆನೆಯ ವರ್ತನೆಗೆ ಲೇಖಕರು ಸಕಾರಣವನ್ನು ಒಪ್ಪುವಂತೆ ಕೊಟ್ಟಿದ್ದಾರೆ. ಕಾದಂಬರಿ ಪುಟ್ಟದಾದರೂ ಲೇಖಕರು ಸಾಕಷ್ಟು ಪೂರ್ವ ತಯಾರಿ ಅಧ್ಯಯನ ನಡೆಸಿದ್ದಾರೆ.ಆನೆಗಳ ಒಂದು ಮನಸ್ಸುಂಟು ಎಂದು ಸಾಬೀತು ಮಾಡಿದ್ದಾರೆ.
ಈ ಒಂಟಿ ಸಲಗವನ್ನು ಹಿಡಿಯುವ ಸಾಹಸ ,ಅದನ್ನು ಹುಡುಕುವ ಸಾಹಸದಲ್ಲಿ ಅಚಾನಕ್ ಎದುರಾಗುವ ಕಾಡುಗಳ್ಳರ ಕೃತ್ಯಗಳ ಪರಿಚಯ,ಮಂತ್ರಿಗಳ ಪ್ರವೇಶದಿಂದ ಆನೆ ಹತ್ಯೆಯ ಆದೇಶ,ಅದನ್ನು ರಕ್ಷಿಸುವ ಪ್ರಯತ್ನ ಹೀಗೆ ಕುತೂಹಲಭರಿತವಾಗಿ ಕತೆ ಸಾಗುತ್ತದೆ.ಎಲ್ಲೂ ಅಸಹಜತೆ ಇಣುಕದಂತೆ ಲೇಖಕರು ಎಚ್ಚರ ವಹಿಸಿದ್ದಾರೆ. ಕಡೆಗೆ ಓದುಗರು ಹೇಗಾದರೂ ಸರಿ ಈ ಆನೆ ಸಾಯಲೇ ಬಾರದು ಎಂದಂದುಕೊಳ್ಳುವಂತೆ ಮಾಡುವಲ್ಲಿ ಲೇಖಕರು ಯಶಸ್ವಿ ಆಗಿದ್ದಾರೆ. ತೇಜಸ್ವಿಯವರ ಕಾಡ ಕತೆ ಓದುತ್ತಿದ್ದ ನನಗೆ ಗಿರಿಮನೆ ಕತೆ ಅದರಂತೆ ಇಷ್ಟವಾಯಿತು. ತೇಜಸ್ವಿ ಕೈಬಿಟ್ಟ ಭಾಗ ಇವರು ಮುಂದುವರೆಸಿದ ತೃಪ್ತಿ ಆಯಿತು. ಒಂದು ರೀತಿ ಕಾದಂಬರಿಯಲ್ಲಿ ಆಸಕ್ತಿಯೇ ಕಳೆದುಕೊಳ್ಳುತ್ತಿರುವ ಕಾಲಘಟ್ಟದಲ್ಲಿ ಕಾದಂಬರಿಯ ಓದಿನಿಂದಲೂ ಪ್ರಯೋಜನ ಇದೆ ಎಂದು ನಂಬುವಂತೆ ಮಾಡಿದ ಬರಹ ಇದು.
ಓದ ಬಯಸುವವರು 9739525514 ಸಂಪರ್ಕಿಸಬಹುದು. ಕರ್ಮವೀರದಲ್ಲಿ ದಾರವಾಹಿಯಾಗಿ ಪ್ರಕಟವಾದ ಈ ಕೃತಿ ಒಂಬತ್ತು ಮುದ್ರಣ ಕಂಡಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

State Central Library ಕೇಂದ್ರ ಗ್ರಂಥಾಲಯಕ್ಕೆ ಪುಸ್ತಕ ಆಯ್ಕೆ ಪ್ರಕ್ರಿಯೆಗೆ ಅರ್ಜಿ‌ಆಹ್ವಾನ

State Central Library 2024ನೇ ವರ್ಷದಲ್ಲಿ ಪ್ರಥಮ ಮುದ್ರಣಗೊಂಡು ಪ್ರಕಟವಾಗಿರುವ ಸಾಹಿತ್ಯ,...

Karnataka Congress ರಾಜ್ಯ ವಿಧಾನಸಭಾ ಉಪಚುನಾವಣೆ ಫಲಿತಾಂಶ

Karnataka Congress ರಾಜ್ಯದಲ್ಲಿ ನಡೆದ ವಿಧಾನಸಭಾ ಉಪಚುನಾವಣೆಯಲ್ಲಿ ಸಂಡೂರು ಕ್ಷೇತ್ರದ ಕಾಂಗ್ರೆಸ್...

Akhila Bharatiya Sahitya Parishad ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ “ರಾಜ್ಯೋತ್ಸವ ಕವಿಗೋಷ್ಠಿ”

Akhila Bharatiya Sahitya Parishad ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕರ್ನಾಟಕ...

Mohare Hanumantharaya Award ಪ್ರಶಸ್ತಿ ಪುರಸ್ಕೃತ ಪತ್ರಕರ್ತ, ‘ಕ್ರಾಂತಿ ದೀಪ ‘ಮಂಜುನಾಥ್ ಅವರಿಗೆ ಸನ್ಮಾನ

Mohare Hanumantharaya Award ಪತ್ರಿಕೋದ್ಯಮದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ಮೊಹರೆ ಹಣಮಂತರಾಯ...