DVS College of Arts, Science and Commerce ವಿದ್ಯಾರ್ಥಿಗಳು ಶಾಲಾ ಕಾಲೇಜಿನ ಹಂತದಿಂದಲೇ ಪರಿಶ್ರಮ ವಹಿಸಿ ಮುನ್ನಡೆದರೆ ಜೀವನದಲ್ಲಿ ಯಶಸ್ಸು ನಿಶ್ಚಿತ ಎಂದು ದಾವಣಗೆರೆ ಯುಬಿಡಿಟಿಸಿಇ ಕಾಲೇಜಿನ ಪ್ರಾಚಾರ್ಯ ಡಾ. ಡಿ.ಪಿ.ನಾಗರಾಜಪ್ಪ ಹೇಳಿದರು.
ದೇಶೀಯ ವಿದ್ಯಾಶಾಲಾ ಸಮಿತಿಯ ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಐಕ್ಯೂಎಸಿ ಘಟಕದಿಂದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದ್ದ ಡಿವಿಎಸ್ ಸಾರಂಗ್ 2024ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಣ್ಣ ಸಣ್ಣ ಹುದ್ದೆ ಅಲಂಕರಿಸಿದರೂ ಸಂಪೂರ್ಣ ಮನಸ್ಸಿನಿಂದ ಕೆಲಸ ಮಾಡಿದಾಗ ಜೀವನದಲ್ಲಿ ಉನ್ನತ ಹಂತಕ್ಕೇರಲು ಸಾಧ್ಯವಿದೆ ಎಂದು ತಿಳಿಸಿದರು.
ಸಾಧಿಸುವ ಮನಸ್ಸಿದ್ದರೆ ಯಾವುದೇ ಸಮಸ್ಯೆಗಳು ಅಡ್ಡಿ ಎನಿಸುವುದಿಲ್ಲ. ನೀವು ಗುರಿ ಸಾಧಿಸಲು ಕಡೆಗೆ ಗಮನ ಇರಬೇಕು. ಗುರು ಹಿರಿಯರ ಮಾರ್ಗದರ್ಶನದಲ್ಲಿ ಬದುಕು ಕಟ್ಟಿಕೊಳ್ಳಬೇಕು. ಆತ್ಮವಿಶ್ವಾಸ ಮತ್ತು ಶ್ರದ್ಧೆಯಿಂದ ಕೆಲಸ ಮಾಡಬೇಕು ಎಂದರು.
ದಾವಣಗೆರೆ ಯುಬಿಡಿಟಿಸಿಇ ಕಾಲೇಜಿನ ಡೀನ್ ಡಾ. ಎಸ್.ಮಂಜಪ್ಪ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ದೇಶೀಯ ವಿದ್ಯಾಶಾಲಾ ಸಮಿತಿಯು ಅಪಾರ ಸೇವೆ ಸಲ್ಲಿಸಿದ್ದು, ಇಲ್ಲಿ ಶಿಕ್ಷಣ ಪಡೆದಿರುವ ಸಾವಿರಾರು ವಿದ್ಯಾರ್ಥಿಗಳು ಉನ್ನತ ಸ್ಥಾನಗಳನ್ನು ಅಲಂಕರಿಸಿ ಸಮಾಜದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಹೇಳಿದರು.
ವಿದ್ಯಾರ್ಥಿಗಳು ಅಧ್ಯಯನ ಹೊರತುಪಡಿಸಿ ಬೇರೆ ವಿಷಯಗಳ ಕಡೆಗೆ ಹೆಚ್ಚು ಆಕರ್ಷಿತರಾಗುತ್ತಿದ್ದು, ಮೊಬೈಲ್‌ನಲ್ಲಿ ಹೆಚ್ಚು ಸಮಯ ವ್ಯರ್ಥ ಮಾಡಬಾರದು. ಶಿಕ್ಷಣದಲ್ಲಿ ಪರಿಶ್ರಮ ಪಟ್ಟರೆ ಜೀವನದಲ್ಲಿ ಫಲ ಸಿಗುತ್ತದೆ ಎಂದು ತಿಳಿಸಿದರು.
DVS College of Arts, Science and Commerce ದೇಶೀಯ ವಿದ್ಯಾಶಾಲಾ ಸಮಿತಿ ಕಾರ್ಯದರ್ಶಿ ಎಸ್.ರಾಜಶೇಖರ್ ಮಾತನಾಡಿ, ಸಾಂಸ್ಕೃತಿಕ ವೇದಿಕೆಗಳು ವಿದ್ಯಾರ್ಥಿಗಳಲ್ಲಿನ ಪ್ರತಿಭೆ ಅನಾವರಣಗೊಳಿಸಲು ಸಹಕಾರಿಯಾಗುತ್ತದೆ. ತಮ್ಮಲ್ಲಿರುವ ವಿಶೇಷ ಸಾಮಾರ್ಥ್ಯವನ್ನು ವಿದ್ಯಾರ್ಥಿಗಳು ಅರ್ಥ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ದೇಶೀಯ ವಿದ್ಯಾಶಾಲಾ ಸಮಿತಿ ಅಧ್ಯಕ್ಷ ಕೆ.ಎನ್.ರುದ್ರಪ್ಪ ಕೊಳಲೆ ಅಧ್ಯಕ್ಷತೆ ವಹಿಸಿದ್ದರು. ದೇಶೀಯ ವಿದ್ಯಾಶಾಲಾ ಸಮಿತಿ ಉಪಾಧ್ಯಕ್ಷ ಎಸ್.ಪಿ.ದಿನೇಶ್, ಖಜಾಂಚಿ ಬಿ.ಗೋಪಿನಾಥ್, ಐಕ್ಯೂಎಸಿ ಸಂಯೋಜಕ ಪ್ರೊ.ಎನ್.ಕುಮಾರಸ್ವಾಮಿ, ಸಾಂಸ್ಕೃತಿಕ ಸಂಯೋಜಕಿ ಎನ್.ಕೇತನಾ ಆರ್ತಿ, ರಾಜೇಶ್ವರಿ ಉಪಸ್ಥಿತರಿದ್ದರು.