Saturday, November 23, 2024
Saturday, November 23, 2024

Klive Special Article ಕೆ ಲೈವ್ ವಿಶೇಷ

Date:

Klive Special Article ಹೊಸ ಅಪರಾಧಿಕ ಕಾನೂನುಗಳು-ಒಂದು ಪರಿಚಯ
ಬದಲಾವಣೆ ಜಗದ ನಿಯಮ.ಜಗತ್ತಿನಲ್ಲಿ ಇದಕ್ಕೆ ಹೊರತಾಗಿ ಯಾರೂ , ಯಾವುದೂ ಇಲ್ಲ. ಸಮಾಜ, ತಂತ್ರಜ್ಞಾನ ಈ ಕೆಲವು ವರ್ಷಗಳಲ್ಲಿ ಹಿಂದೆ ಕಲ್ಪಿಸಿಕೊಳ್ಳಲಾರದ ಮಟ್ಟಿಗೆ ಬದಲಾಗಿದೆ. ಹೀಗೆ ಬದಲಾದ, ಬದಲಾಗುತ್ತಿರುವ ಪರಿದೃಶ್ಯದಲ್ಲಿ ಕಾನೂನುಗಳ ಬದಲಾವಣೆಯೂ ಅಷ್ಟೇ ಮುಖ್ಯ.

ಹಳೆಯ ಮೂರು ಕ್ರಿಮಿನಲ್ ಕಾನೂನುಗಳಿಗೆ ಹೊಸ ಬದಲಾವಣೆ ತಂದು ಕೇಂದ್ರ ಸರ್ಕಾರ ಜಾರಿಗೆ ತಂದಿದೆ.
ಈ ಹೊಸ ಬದಲಾವಣೆ ಏನಿದೆ?
ಕಾನೂನು ತಜ್ಞ ಶ್ರೀ ಸುಧೀರ್ ಕೀಳಂಬಿ
ನಮ್ಮ “ಕೆ ಲೈವ್” ಓದುಗರಿಗೆಂದೇ ಸರಳವಾಗಿ ನಿರೂಪಿಸಿದ್ದಾರೆ.

ಈ ನಿಟ್ಟಿನಲ್ಲಿ, ಸರ್ಕಾರವು ಬ್ರಿಟಿಷ್ ಕಾಲದ ಹಳೆಯ ಮೂರು ಕ್ರಿಮಿನಲ್ ಕಾನೂನುಗಳನ್ನು ಹೊಸ ಕಾನೂನುಗಳೊಂದಿಗೆ ಬದಲಾಯಿಸಿದೆ. ಈ ಮೂಲಕ ಭಾರತದ ಅಪರಾಧಿಕ ನ್ಯಾಯ ವ್ಯವಸ್ಥೆಯು ಯನ್ನು ಬಹುತೇಕವಾಗಿ ಬದಲಾಯಿಸಿ, ಹೊಸ ಆಯಾಮವನ್ನು ನೀಡಿದೆ. 163 ವರ್ಷಗಳ ಹಿಂದೆ ರೂಪುಗೊಂಡ ಭಾರತೀಯ ದಂಡ ಸಂಹಿತೆ (IPC) ಬದಲಿಗೆ ಭಾರತೀಯ ನ್ಯಾಯ ಸಂಹಿತಾ, 2023 (BNS); 126 ವರ್ಷಗಳ ಹಿಂದಿನ ಭಾರತೀಯ ಅಪರಾಧ ಪ್ರಕ್ರಿಯಾ ಸಂಹಿತೆ (CrPC) ಬದಲಿಗೆ ಭಾರತೀಯ ನಾಗರೀಕ ಸುರಕ್ಷಾ ಸಂಹಿತಾ, 2023 (BNSS); ಮತ್ತು 151 ವರ್ಷಗಳ ಹಿಂದೆ ರೂಪುಗೊಂಡ ಭಾರತೀಯ ಸಾಕ್ಷಿ ಅಧಿನಿಯಮದ ಬದಲಿಗೆ ಭಾರತೀಯ ಸಾಕ್ಷಿ ಅಧಿನಿಯಮ 2023 (BSA) ಯನ್ನು ಜಾರಿಗೆ ತರಲಾಗಿದೆ. ಈ ಮೂರೂ ಕಾನೂನುಗಳನ್ನು ಡಿಸೆಂಬರ್ 2023 ರಲ್ಲಿ ಸಂಸತ್ತಿನಲ್ಲಿ ಅಂಗೀಕರಿಸಲಾಗಿತ್ತು. ಅವು ಜುಲೈ 1 ರಿಂದ ಕಾರ್ಯಾನ್ವಯ ಆಗಿವೆ

ಈ ಮೂರು ಹೊಸ ಕಾನೂನುಗಳು ಶಿಕ್ಷೆಗಿಂತ ಹೆಚ್ಚಾಗಿ ನ್ಯಾಯದ ಮೇಲೆ ಕೇಂದ್ರೀಕರಿಸುತ್ತವೆ ಮತ್ತು ತ್ವರಿತ ನ್ಯಾಯವನ್ನು ಒದಗಿಸುವ ಗುರಿಯನ್ನು ಹೊಂದಿವೆ, ನ್ಯಾಯಾಂಗ ಮತ್ತು ನ್ಯಾಯಾಲಯದ ನಿರ್ವಹಣಾ ವ್ಯವಸ್ಥೆಯನ್ನು ಬಲಪಡಿಸುವ ಹಾಗು ಎಲ್ಲರಿಗೂ ನ್ಯಾಯ ದೊರಕಿಸುವ ಉದ್ದೇಶವನ್ನು ಇವು ಒತ್ತಿಹೇಳುತ್ತವೆ.

Klive Special Article ಭಾರತದಲ್ಲಿನ ಆಪರಾಧಿಕ ನ್ಯಾಯ ವ್ಯವಸ್ಥೆಯಲ್ಲಿ ಕೆಲವು ನ್ಯೂನತೆಗಳಿದ್ದು ಸುಧಾರಣೆಯ ಅವಶ್ಯಕತೆಯನ್ನು ಭಾರತದ ಕಾನೂನು ಆಯೋಗ ಪ್ರತಿಪಾದಿಸುತ್ತಲೇ ಇತ್ತು. ಇವುಗಳಲ್ಲಿ ಕೆಲವನ್ನು ಹೇಳುವುದಾದರೆ, ತನಿಖೆಯಲ್ಲಿ ಲೋಪ ಮತ್ತು ಅಪರಾಧಿಗಳು ಶಿಕ್ಷೆಯಿಂದ ತಪ್ಪಿಸಿಕೊಳ್ಳುವಿಕೆ, ಬೃಹತ್ ಸಂಖ್ಯೆಯ ಕ್ರಿಮಿನಲ್ ಮೊಕದ್ದಮೆಗಳ ಬಾಕಿ, ವಿಳಂಬವಾದ ನ್ಯಾಯಾಲಯದ ವಿಚಾರಣೆಗಳು, ಕಡಿಮೆ ಶಿಕ್ಷೆ ಪ್ರಮಾಣ ಮತ್ತು ಹೆಚ್ಚಿನ ಸಂಖ್ಯೆಯ ವಿಚಾರಣಾಧೀನ ಕೈದಿಗಳು ಇತ್ಯಾದಿ.

ರಚನಾತ್ಮಕವಾಗಿ ನೋಡುವುದಾದರೆ, ಜಾರಿಯಾಗಿರುವ ಹೊಸ ಭಾರತೀಯ ದಂಡ ಸಂಹಿತೆ ಬದಲಿಗೆ ಬಂದಿರುವ ಭಾರತೀಯ ನ್ಯಾಯ ಸಂಹಿತಾ ಕಾಯಿದೆಯು ಹಿಂದಿನ 511 ಸೆಕ್ಷನ್‌ಗಳ ಬದಲಿಗೆ 358 ಸೆಕ್ಷನ್‌ ಗಳನ್ನು ಹೊಂದಿದೆ. ಇದರಲ್ಲಿ 175 ಸೆಕ್ಷನ್‌ಗಳನ್ನು ಬದಲಿಸಿ, 8 ಹೊಸ ಸೆಕ್ಷನ್‌ಗಳನ್ನು ಸೇರಿಸಿ, 22 ಸೆಕ್ಷನ್‌ಗಳನ್ನು ರದ್ದುಗೊಳಿಸಲಾಗಿದೆ. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಈಗ 513 ಸೆಕ್ಷನ್‌ಗಳನ್ನು ಹೊಂದಿದೆ. ಹಳೆಯ ಕಾನೂನಿನ 160 ಸೆಕ್ಷನ್‌ಗಳನ್ನು ಬದಲಾಯಿಸಲಾಗಿದೆ. ಅದರಲ್ಲಿ 9 ಹೊಸ ಸೆಕ್ಷನ್‌ ಸೇರಿಸಿ, 9 ಸೆಕ್ಷನ್‌ಗಳನ್ನು ರದ್ದುಗೊಳಿಸಲಾಗಿದೆ. ಭಾರತೀಯ ಸಾಕ್ಷಿ ಸಂಹಿತೆ ಹಿಂದಿನ 167ರ ಬದಲಿಗೆ 170 ಸೆಕ್ಷನ್‌ಗಳನ್ನು ಹೊಂದಿರುತ್ತದೆ. 23 ಸೆಕ್ಷನ್‌ಗಳನ್ನು ಬದಲಾಯಿಸಲಾಗಿದೆ. ಒಂದು ಹೊಸ ಸೆಕ್ಷನ್‌ಅನ್ನು ಸೇರಿಸಲಾಗಿದೆ ಮತ್ತು 5 ಸೆಕ್ಷನ್‌ಗಳನ್ನು ರದ್ದುಗೊಳಿಸಲಾಗಿದೆ.

ಈ ಮೂರು ಕಾನೂನುಗಳಲ್ಲಿನ ಪ್ರಮುಖ ಬದಲಾವಣೆಗಳನ್ನು ಈ ಕೆಳಗಿನಂತೆ ಸಂಕ್ಷಿಪ್ತವಾಗಿ ಕ್ರೋಡೀಕರಿಸಬಹುದು:

• ಹೊಸ BNS ನಲ್ಲಿ, ದ್ವೇಷದ ಅಪರಾಧಗಳು ಮತ್ತು ಗುಂಪು ಹತ್ಯೆ, ಭಯೋತ್ಪಾದನೆ, ಸಂಘಟಿತ ಅಪರಾಧ, ಮತ್ತು ದ್ವೇಷದ ಭಾಷಣದಂತಹ ಅಪರಾಧಗಳನ್ನು ಸೇರಿಸಲಾಗಿದೆ. ದೇಶದ್ರೋಹವನ್ನು ರಾಷ್ಟ್ರೀಯ ಸಮಗ್ರತೆಯನ್ನು ಅಪಾಯಕ್ಕೆ ಒಳಪಡಿಸುವ ಕೃತ್ಯಗಳೆಂದು ಮರು ವ್ಯಾಖ್ಯಾನಿಸಲಾಗಿದೆ. ಇದಲ್ಲದೆ, ಕಳ್ಳತನದ ವ್ಯಾಪ್ತಿಯನ್ನು ವಿಸ್ತರಿಸಿ, ಡೇಟಾ ಮತ್ತು ಅಮೂರ್ತ ವಸ್ತುಗಳ ಕಳ್ಳತನವನ್ನೂ ಇದರಲ್ಲಿ ಸೇರಿಸಲಾಗಿದೆ.
• ಹೊಸ ಕಾನೂನಿನ ಪ್ರಕಾರ, ಸಾಕ್ಷಿಗಳ ಸುರಕ್ಷತೆ ಮತ್ತು ಸಹಕಾರವನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ರಾಜ್ಯ ಸರ್ಕಾರಗಳು ಸಾಕ್ಷಿ ರಕ್ಷಣೆ ಯೋಜನೆಗಳನ್ನು ಜಾರಿಗೆ ತರಬೇಕು.
• ವಿಜ್ಞಾನ ತಂತ್ರಜ್ಞಾನ ತುಂಬಾ ಮುಂದುವರೆದಿದ್ದರೂ, ಆಪರಾಧಿಕ ಕಾನೂನಿನಲ್ಲಿ ಅವುಗಳ ಸದುಪಯೋಗ ಅಷ್ಟಾಗಿ ಆಗುತ್ತಿರಲಿಲ್ಲ. ಉದಾಹರಣೆಗೆ ವಿಡಿಯೋ ಮೂಲಕ ಸಾಕ್ಷ್ಯ ಸಂಗ್ರಹಣೆ, ಹೇಳಿಕೆ ದಾಖಲಿಸುವುದು, ಮೊಬೈಲ್ ಮೂಲಕ ಸಮನ್ಸ್ ಜಾರಿ ಇತ್ಯಾದಿ ಕ್ರಮಗಳ ಮೂಲಕ ಶೀಘ್ರ ನ್ಯಾಯ ವಿಲೇವಾರಿ ಜೊತೆಗೇ ಪಾರದರ್ಶಕ ನ್ಯಾಯ ನಿರ್ವಹಣೆಯೂ ನಡೆಯಲಿದೆ.
• ಇನ್ನೊಂದು ಹೊಸ ವಿಷಯ ಸೇರಿಸಿರುವುದೇನೆಂದರೆ, ಸಮುದಾಯ ಸೇವೆ. ಕ್ಷುಲ್ಲಕ ಕಳ್ಳತನದಂತಹ ಸಣ್ಣ ಅಪರಾಧಗಳಿಗೆ ಜೈಲು ಶಿಕ್ಷೆಯ ಬದಲು ಸಮಾಜ ಸೇವೆ ಶಿಕ್ಷೆಯಾಗಬಹುದು.
• ವೈದ್ಯಕೀಯ ವರದಿಯನ್ನು ಏಳು ದಿನಗಳಲ್ಲಿ ಪೂರ್ಣಗೊಳಿಸಬೇಕು.
• ಮಹಿಳೆಯರು ಮತ್ತು ಮಕ್ಕಳ ಮೇಲಿನ ಅಪರಾಧಗಳ ಕುರಿತು ಹೊಸ ಅಧ್ಯಾಯವನ್ನು ಕಾನೂನಿಗೆ ಸೇರಿಸಲಾಗಿದೆ. ಇದರಲ್ಲಿ ಮಗುವನ್ನು ಕೊಳ್ಳುವುದು ಅಥವಾ ಮಾರಾಟ ಮಾಡುವುದು ಘೋರ ಅಪರಾಧ ಎಂದು ವರ್ಗೀಕರಿಸಲಾಗಿದ್ದು, ಕಠಿಣ ಶಿಕ್ಷೆ ವಿಧಿಸುವ ಅವಕಾಶವಿದೆ.
• ಅತ್ಯಾಚಾರ ಸಂತ್ರಸ್ತರ ಹೇಳಿಕೆಗಳನ್ನು ಸಂತ್ರಸ್ತೆಯ ಪೋಷಕರು ಅಥವಾ ಸಂಬಂಧಿಕರ ಸಮ್ಮುಖದಲ್ಲಿ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ದಾಖಲಿಸಿಕೊಳ್ಳುತ್ತಾರೆ.
• ಅಪ್ರಾಪ್ತ ವಯಸ್ಕರ ಮೇಲೆ ಸಾಮೂಹಿಕ ಅತ್ಯಾಚಾರವು ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆಗೆ ಗುರಿಯಾಗಬಹುದು.
• ಹೊಸ ಕಾನೂನಿನ ಪ್ರಕಾರ ವಿವಾಹವಾಗುವುದಾಗಿ ನಂಬಿಸಿ ಮೋಸ ಮಾಡುವುದು ಅಥವಾ ಅವರನ್ನು ದಾರಿ ತಪ್ಪಿಸುವ ಮೂಲಕ ಕೈಕೊಡುವ ಪ್ರಕರಣಗಳಿಗೆ ಶಿಕ್ಷೆಯ ನಿಬಂಧನೆಗಳನ್ನು ಒಳಪಡಿಸಲಾಗಿದೆ.
• ಮಹಿಳೆಯರು ಮತ್ತು ಮಕ್ಕಳಿಗೆ ಸಂಬಂಧಿಸಿದ ಅಪರಾಧ ಪ್ರಕರಣಗಳಲ್ಲಿ ಎಲ್ಲಾ ಆಸ್ಪತ್ರೆಗಳು ಉಚಿತ ಚಿಕಿತ್ಸೆ ನೀಡುವುದು ಕಡ್ಡಾಯವಾಗಿದೆ.
• ಎಫ್‌ಐಆರ್, ಪೊಲೀಸ್ ವರದಿ, ಚಾರ್ಜ್ ಶೀಟ್, ಹೇಳಿಕೆ, ತಪ್ಪೊಪ್ಪಿಗೆ ಹೇಳಿಕೆ ಮತ್ತು ಇತರ ದಾಖಲೆಗಳ ನಕಲು ಪ್ರತಿಗಳನ್ನು 14 ದಿನಗಳಲ್ಲಿ ಪಡೆಯುವ ಹಕ್ಕು ಆರೋಪಿ ಮತ್ತು ಸಂತ್ರಸ್ತರು ಇಬ್ಬರಿಗೂ ಇದೆ.
• ಇದಲ್ಲದೆ, ಎಲೆಕ್ಟ್ರಾನಿಕ್ ಸಂವಹನದ ಮೂಲಕ ಘಟನೆಗಳನ್ನು ವರದಿ ಮಾಡಬಹುದು, ಇದು ಪೊಲೀಸ್ ಠಾಣೆಗೆ ಹೋಗುವ ಅಗತ್ಯವನ್ನು ತಪ್ಪಿಸುತ್ತದೆ.
• ಅಪರಾಧ ಎಲ್ಲಿಯೇ ನಡೆದಿರಲಿ, ಒಬ್ಬ ವ್ಯಕ್ತಿ ತನ್ನ ಹತ್ತಿರ ಇರುವ ಯಾವುದೇ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಬಹುದು.
• ಈಗ ಗಂಭೀರ ಅಪರಾಧಗಳಿಗೆ, ಫೋರೆನ್ಸಿಕ್ ತಜ್ಞರು ಅಪರಾಧ ನಡೆದ ಸ್ಥಳಕ್ಕೆ ಭೇಟಿ ನೀಡಿ ಸಾಕ್ಷ್ಯ ಸಂಗ್ರಹಿಸುವುದು ಕಡ್ಡಾಯವಾಗಿದೆ.
• ಲಿಂಗದ ವ್ಯಾಖ್ಯಾನವು ಈಗ ತೃತೀಯ ಲಿಂಗಿಗಳನ್ನೂ ಸಹ ಒಳಗೊಂಡಿರುತ್ತದೆ, ಇದು ಸಮಾನತೆಯನ್ನು ಉತ್ತೇಜಿಸುತ್ತದೆ.
• ಮಹಿಳೆಯರ ವಿರುದ್ಧದ ಕೆಲವು ಅಪರಾಧಗಳಿಗೆ, ಸಾಧ್ಯವಾದಾಗಲೆಲ್ಲಾ, ಸಂತ್ರಸ್ತೆಯ ಹೇಳಿಕೆಯನ್ನು ಮಹಿಳಾ ಮ್ಯಾಜಿಸ್ಟ್ರೇಟ್ ದಾಖಲಿಸಲು ಅವಕಾಶವಿದೆ.ಕ್ರಿಮಿನಲ್ ಕಾನೂನುಗಳ ಸುಧಾರಣೆಯ ಗಾಳಿ ಬೇರೆ ಕಾನೂನುಗಳೆಡೆಯೂ ಬೀಸಿ, ಸಮಗ್ರ ಕಾನೂನುಗಳು ಸುಧಾರಣೆಯಾಗಲಿ. ಬದಲಾಗುತ್ತಿರುವ ಸಮಾಜಕ್ಕೆ ಹೊಂದಿಕೆಯಾಗುವಂತಹ ಕಾನೂನುಗಳು ಇನ್ನಷ್ಟು ಬರಲಿ. ಈ ಮೂಲಕ ಸಮಾಜ ಮತ್ತು ಜನರ ಜೀವನ ಮಟ್ಟ ಸುಧಾರಿಸಲಿ.

(ಇದರಲ್ಲಿ ವ್ಯಕ್ತವಾಗಿರುವುದು ಲೇಖಕರ ವೈಯಕ್ತಿಕ ಅಭಿಪ್ರಾಯ)
ಸುಧೀರ್ ಕೀಳಂಬಿ
ಲೇಖಕರು ವಿದೇಶಾಂಗ ಇಲಾಖೆಯಲ್ಲಿ ಕಾನೂನು ಸಲಹೆಗಾರರು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Maharashtra Election ‘ಮಹಾ’ ಚುನಾವಣೆ.ಮತ್ತೆ ತಲೆಯೆತ್ತಿದ ” ಮಹಾಯುತಿ” ಮಕಾಡೆ ಬಿದ್ದಅಘಾಡಿ

Maharashtra Election ದೇಶದ ಗಮನ ಸೆಳೆದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ...

Police Department ರಾಜ್ಯದ ಜೈಲುಗಳ ವಾರ್ಡನ್ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕವಾಗಲು ಆಸಕ್ತ ಮಾಜಿ ಸೈನಿಕರು ಅರ್ಜಿ ಸಲ್ಲಿಸಲು ಅವಕಾಶ

Police Department ಕರ್ನಾಟಕ ರಾಜ್ಯಾದ್ಯಾಂತ ಇರುವ ಜೈಲುಗಳಲ್ಲಿ ವಾರ್ಡನ್‌ ಹುದ್ದೆಗೆ ಗುತ್ತಿಗೆ...

DC Shivamogga ಶಿವಮೊಗ್ಗ ಜಿಲ್ಲೆಯಲ್ಲಿ ಚುನಾವಣಾ ಜನಸಂಖ್ಯೆ ಅನುಪಾತದ ಬಗ್ಗೆ ಡಾ.ತ್ರಿಲೋಕ ಚಂದ್ರ ಅವರಿಂದ ಪರಿಶೀಲನೆ

DC Shivamogga ಶಿವಮೊಗ್ಗ ಜಿಲ್ಲೆಯಲ್ಲಿ ಚುನಾವಣಾ ಜನಸಂಖ್ಯೆ ಅನುಪಾತ (ಇಪಿ ರೇಷಿಯೋ)...