Saturday, November 23, 2024
Saturday, November 23, 2024

Klive Special Article ಹಿಂದುಳಿದ ವರ್ಗಗಳಿಗೆ ರಾಜಕೀಯ ವೇದಿಕೆ ಕಲ್ಪಿಸಿದ ನಾಲ್ವಡಿ ಕೃಷ್ಣರಾಜ ಒಡೆಯ ಲೇ:ಎನ್.ಅನಂತ ನಾಯಕ್.ಬೆಂಗಳೂರು

Date:

Klive Special Article ಬಂಜಾರರಿಗೆ ಬೆಳಕಿನ ದಾರಿ ತೋರಿದ ನಾಲ್ವಡಿ ಕೃಷ್ಣರಾಜ ಒಡೆಯರ್

ಭಾರತದಲ್ಲಿದ್ದ ಚಾತುವರ್ಣ ವ್ಯವಸ್ಥೆ ಮತ್ತು ಬ್ರಿಟಿಷರ ದಬ್ಬಾಳಿಕೆಯಿಂದ ನಲುಗಿ ಹೋಗಿದ್ದ ಮೂಲ ನಿವಾಸಿ ಬಹುಜನರ ಅಭಿವೃದ್ಧಿಗಾಗಿ ಪಣ ತೊಟ್ಟವರು ಮೈಸೂರಿನ ಒಡೆಯ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್. ಸವರ್ಣಿಯರು ಅಂದರೆ ಮೇಲ್ ಜಾತಿಗರು ಎನಿಸಿಕೊಂಡವರ ಊರಗಳಲ್ಲಿ ವಾಸಿಸಲು ಅವಕಾಶ ಇಲ್ಲದೆ, ಕಾಡು ಮೇಡುಗಳಲ್ಲಿ ಅಪರಾಧಿ ಬುಡಕಟ್ಟುಗಳೆಂದು ಕರೆಸಿಕೊಂಡು ದೇಶವ್ಯಾಪಿ ಅಲೆಮಾರಿಗಳಾಗಿ ಛಿದ್ರರಾಗಿದ್ದ ಬಂಜಾರರನ್ನು ಗುರುತಿಸಿ ರಕ್ಷಣೆ ಮತ್ತು ಅವಕಾಶ ನೀಡಿ ಮುಖ್ಯವಾಹಿನಿಗೆ ಬರಲು ಆಹ್ವಾನ ನೀಡಿದವರು ಈ ನಾಲ್ವಡಿ ಕೃಷ್ಣರಾಜ ಒಡೆಯರ್.

ಮೊಟ್ಟಮೊದಲ ಬಾರಿ ಬಂಜಾರರಿಗೆ ಮೈಸೂರು ರಾಜ್ಯದಲ್ಲಿ ರಾಜಕೀಯ ಸ್ಥಾನಮಾನ ನೀಡಿ ಗೌರವಿಸಿದವರು ಈ ನಾಲ್ವಡಿ. ಮೈಸೂರು ಪ್ರಜಾಪ್ರತಿನಿಧಿ ಸಭೆಗೆ ಸದಸ್ಯರಾಗಿ (ಇಂದಿನ‌ ಶಾಸಕರಂತೆ) ಬಂಜಾರ ಸಮುದಾಯದ ಮುಖಂಡರಾದ

೧.ಜಾತ್ರನಾಯಕ್ (21 ವರ್ಷ ಅವದಿ)
ಬಬ್ಬೂರು ಫಾರಂ, ಹಿರಿಯೂರು

೨.ಸಣ್ಣರಾಮನಾಯ್ಕ
ಕೆಂಗ್ಲಾಪುರ, ಚಿಕ್ಕನಾಯ್ಕನಹಳ್ಳಿ

೩.ಖಿರ್ಯಾನಾಯ್ಕ
ಕುಡಿನೀರ ಕಟ್ಟೆ, .ಹೊಳಲ್ಕೆರೆ

೪.ಚಂದ್ರನಾಯ್ಕ
ಕೊಡದ ಗುಡ್ಡ, ಜಗಳೂರು

೫.ಹನಿಯಾನಾಯ್ಕ
ಚಿಕ್ಕ ಬಾಸೂರು ತಾಂಡ, ಹೊನ್ನಾಳಿ

೬.ತೋತ್ಯಾನಾಯ್ಕ
ಗಂಟಾಪುರ, ಚನ್ನಗಿರಿ ದಾವಣಗೆರೆ

೭.ಭೀಮನಾಯ್ಕ
ಕೆರೆ ಹಾಗಲಹಳ್ಳಿ, ಚಳ್ಳಕೆರೆ

೮.ಸೇವ್ಯಾನಾಯ್ಕ
ಆಯನೂರು, ಶಿವಮೊಗ್ಗ
ಇವರುಗಳನ್ನು ನೇಮಕ ಮಾಡಿದರು. ಇದು ಬಂಜಾರ ಜನಾಂಗದ ಮೊದಲು ‌ರಾಜಕೀಯ ಪ್ರವೇಶ.‌ ಇದಕ್ಕಾಗಿ ಬಂಜಾರ ಸಮುದಾಯ ಒಡೆಯರ್ ಅವರಿಗೆ ಕೃತಜ್ಞತೆ ಸಲ್ಲಿಸಬೇಕು.

Klive Special Article ರಾಜ್ಯದ ವಿವಿಧ ಪ್ರದೇಶಗಳಲ್ಲಿ ಬಂಜಾರ (ಲಂಬಾಣಿ) ವಿದ್ಯಾರ್ಥಿಗಳಿಗಾಗಿ ಹಾಸ್ಟೆಲ್ ಗಳ ಪ್ರಾರಂಭಿಸಲು ಶಕ್ತಿಯಾದವರು ಈ ನಾಲ್ವಡಿ. ಹಾಸ್ಟೆಲ್ ಆರಂಭಿಸಲು ಭೂಮಿ ಮತ್ತು ಹಣಕಾಸು ನೆರವು ನೀಡಿದ್ದರು. ಈ ಹಾಸ್ಟೆಲ್ ಗಳಿಂದ ಬಂಜಾರ ಸಮುದಾಯ ಮೊದಲು ಶಿಕ್ಷಣ ಅವಕಾಶ ಪಡೆಯಿತು. ನಾಲ್ವಡಿ ಅವರು ಆರಂಭಿಸಿದ ಬಂಜಾರರ ಹಾಸ್ಟೆಲ್ ಇವತ್ತು ಏನಾಗಿವೆ ? ಬಂಜಾರರಿಗೆ ಶಿಕ್ಷಣ ಸಂಸ್ಥೆ, ಹಾಸ್ಟೆಲ್ ಪ್ರಾರಂಭಿಸಲು ರಾಜ್ಯದ ಕೆಲ ಜಿಲ್ಲೆಗಳಲ್ಲಿ ನಾಲ್ವಡಿ ಅವರು ನೀಡಿದ್ದ ಭೂಮಿ ಇವತ್ತು ಯಾರ ಪಾಲಾಗಿವೆ ? ಪತ್ತೆ ಹಚ್ಚಬೇಕಿದೆ.

ಮೂಲನಿವಾಸಿ ಸಮುದಾಯಗಳಲ್ಲಿ ಸಾಮಾಜಿಕ, ಸಾಂಸ್ಕೃತಿಕ ಘನತೆ ಹೆಚ್ಚಿಸಲು ದುಡಿದವರು ಈ ನಾಲ್ವಡಿ. ಮೂಡನಂಬಿಕೆಗಳ ಹೆಸರಿನಲ್ಲಿ ತಳ ಸಮುದಾಯಗಳ ಮೋಸ ಮಾಡುತ್ತಿರುವವರನ್ನು ನಿರ್ಬಂಧಿಸಲು ದುಡಿದರು. ಅನಿಷ್ಟ ದೇವದಾಸಿ ಪದ್ದತಿ, ಸತಿ ಪದ್ದತಿ, ಗೆಜ್ಜೆ ಪೂಜೆ, ಅಸ್ಪೃಶ್ಯತೆ ಆಚರಣೆ ನಿರ್ಬಂಧಿಸುವ ಕಾನೂನು ತಂದವರು ನಾಲ್ವಡಿ.

ನಾಡಿನ ವಂಚಿತ ಸಮುದಾಯಗಳ ಏಳಿಗೆಗಾಗಿ ಮೀಸಲಾತಿ ಕಲ್ಪಿಸಲು ‘ಶೋಷಿತ ವರ್ಗಗಳ ಪಟ್ಟಿ’ (ಡಿಪ್ರೆಸ್ಡ್ ಕ್ಲಾಸ್ ಲಿಸ್ಟ್) ಮಾಡಿ ಅದರಲ್ಲಿ ಲಂಬಾಣಿಗರನ್ನು ಸೇರಿಸಿ ಸಾಮಾಜಿಕ ನ್ಯಾಯ ನೀಡಿದವರು ಇದೆ ನಾಲ್ವಡಿ. ಇದು ಬಂಜಾರರು ಮುಖ್ಯವಾಹಿನಿಗೆ ಬರುವಂತಾಗಲು ಸಹಕಾರಿಯಾದ ಮೊದಲ ಹೆಜ್ಜೆಯಾಗಿತ್ತು. ಸ್ವಾತಂತ್ರ್ಯ ನಂತರ ಡಾ‌ ಬಿ ಅರ್ ಅಂಬೇಡ್ಕರ್ ಅವರು ಇದೇ ಪಟ್ಟಿಯನ್ನು ಪರಿಗಣಿಸಿ ಕರ್ನಾಟಕದ ಮೊದಲ ಪರಿಶಿಷ್ಟ ಜಾತಿಗಳ ಪಟ್ಟಿಯನ್ನು ಅನುಮೋದನೆ ಮಾಡಿದ್ದರು.

1926 ರಲ್ಲಿ ಚಿತ್ರದುರ್ಗ ದಲ್ಲಿ ನಡೆದ ಬಂಜಾರರ ಪ್ರಥಮ ಅಧಿವೇಶನಕ್ಕೆ ನಾಲ್ವಡಿಯವರು ಒಂದು ನೂರು ರೂಪಾಯಿ ಗಳನ್ನು ದೇಣಿಗೆ ನೀಡಿದ್ದರು. ಸಮಾವೇಶದ ಯಶಸ್ವಿಗಾಗಿ ಅಧಿಕಾರಿಗಳಿಗೆ ಜವಾಬ್ದಾರಿ ನೀಡಿದ್ದರು. ನಾಲ್ವಡಿ ಯವರು ಖುದ್ದಾಗಿ ಕೆಲ ಲಂಬಾಣಿ ತಾಂಡಗಳಿಗೆ ಭೇಟಿ ಮಾಡಿದ್ದಾರೆ. ತುಳಿತಕ್ಕೊಳಗಾದ ಬಂಜಾರರ ಬದುಕನ್ನು ಕಣ್ಣಾರೆ ಕಂಡಿದ್ದರು. ಬಂಜಾರರ ಶ್ರೀಮಂತ ಸಂಸ್ಕೃತಿ ಮತ್ತು ಬಡತನವನ್ನು ಕಣ್ಣಾರೆ ಕಂಡು ಅವುಗಳನ್ನು ಪರಿಹರಿಸಲು ಮುಂದಾಗಿದ್ದರು.

ಸ್ವಾತಂತ್ರ ಪೂರ್ವದಲ್ಲಿ ಅಂದರೆ 1921 ರಲ್ಲಿ ನಾಲ್ವಡಿ ಯವರು ಜಸ್ಟಿಸ್ ಮಿಲ್ಲರ್ ಆಯೋಗದ ವರದಿಯನ್ನು ಅನುಮೋದಿಸಿದರು. ಆ ಮೂಲಕ ಬ್ರಾಹ್ಮಣೇತರ ಸಮುದಾಯಗಳಿಗೆ 75% ಮೀಸಲಾತಿ ಜಾರಿ ಮಾಡಿ ಕಾನೂನು ಮಾಡಿದರು. ಇದರಿಂದಾಗಿ ಬಂಜಾರರಿಗೆ ಆದ ಲಾಭ ಸಾಕಷ್ಟು.

ನಾಲ್ವಡಿ ಯವರ ಈ ‘ಡಿಪ್ರೆಸ್ಡ್ ಕ್ಲಾಸ್ ಲಿಸ್ಟ್’ ಅನ್ನು ಪರಿಗಣಿಸಿಯೇ 1950 ರಲ್ಲಿ 6 ಜಾತಿಗಳು ಅಂದರೆ ೧. ಆದಿ ಕರ್ನಾಟಕ, ೨. ಆದಿ ದ್ರಾವಿಡ, ೩.ಬಂಜಾರ-ಲಂಬಾಣಿ, ೪. ಭೋವಿ, ೫ಕೊರಚ, ೬. ಕೊರಮ ಜಾತಿಗಳುಳ್ಳ ರಾಜ್ಯದ ಮೊದಲ ಪರಿಶಿಷ್ಟ ಜಾತಿಗಳ ಪಟ್ಟಿ ಯನ್ನು ಕೇಂದ್ರ ಸರ್ಕಾರ ಅಧಿಕೃತ ನೋಟಿಪೀಕೇಷನ್ ಮಾಡಿತು.‌ ಮಹಾನಾಯಕ ಡಾ ಬಿ ಆರ್ ಅಂಬೇಡ್ಕರ್ ಅವರು ಈ ಪಟ್ಟಿಯನ್ನು ಅನುಮೋದಿಸಿದರು. ಈ ಮೊದಲ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಬಂಜಾರರಿಗೆ ಸೂಕ್ತ ಸ್ಥಾನ, ಅವಕಾಶ, ಪ್ರಾತಿನಿಧ್ಯ ಸಿಕ್ಕಿರುವುದಕ್ಕೆ ನಾಲ್ವಡಿಯವರೇ ಮುಖ್ಯ ಕಾರಣ. ಇದಕ್ಕಾಗಿ ನಾವು ಅವರಿಗೆ ಚಿರಋಣಿ ಆಗಿರಬೇಕು. ಮೈಸೂರು ರಾಜ್ಯದಲ್ಲಿ ಎಲ್ಲಾ ಹುದ್ದೆಗಳಲ್ಲಿ ನೂರಕ್ಕೆ ನೂರರಷ್ಟು ತುಂಬಿಕೊಂಡಿದ್ದ ಬ್ರಾಹ್ಮಣರ ಪ್ರಾಬಲ್ಯ ಕಡಿಮೆ ಮಾಡಿ ಡಿಪ್ರೆಸ್ಡ್ ಕ್ಲಾಸ್ ಅಂದರೆ ಬಂಜಾರರನ್ನು ಒಳಗೊಂಡಂತೆ ದಮನಿತ ಸಮುದಾಯಗಳಿಗೆ ಶೇಕಡಾ 75% ಮೀಸಲಾತಿ ಕಲ್ಪಿಸಿ ಹೊಸ ಚರಿತ್ರೆ ಬರೆದವರು ಇದೇ ನಾಲ್ವಡಿ.

ಶಿಕ್ಷಣ, ಕೃಷಿ, ನೀರಾವರಿ, ಆರೋಗ್ಯ ಹೀಗೆ ಹಲವಾರು ಕ್ಷೇತ್ರಗಳಲ್ಲಿ ನಾಲ್ವಡಿಯವರ ಕೊಡುಗೆ ಅಪಾರವಾದದ್ದು. ದುರ್ಬಲ ವರ್ಗಗಳ ಧ್ವನಿ ಈ ಮನುಷ್ಯ. ಶಿಕ್ಷಣ, ಆರೋಗ್ಯ,ಕೈಗಾರಿಕೆಗಳ ಕನಸುಗಾರ ಇವರು. ಸಾಮಾಜಿಕ ಅನಿಷ್ಟಗಳ ಸಂಹಾರ ಮಾಡಿದವರು ಈ ನಾಲ್ವಡಿ. ಸಮಾನತೆಯ ಪ್ರತಿಪಾದಕ ಈ ನಾಲ್ವಡಿ.

ಈ ಎಲ್ಲಾ ಕಾರಣಗಳಿಂದಾಗಿ ನಾವು, ನಮ್ಮಂತ ವಂಚಿತ ಸಮುದಾಯಗಳು ಇವತ್ತು ಒಂದಷ್ಟು ಬೆಳಕಿನತ್ತ, ಪ್ರಗತಿಯತ್ತ ಸಾಗಿತ್ತಿರುವುದನ್ನು ಮರೆಯಲಾಗದು. ನಮ್ಮಂತ ಅನೇಕ ಶೋಷಿತ ಸಮುದಾಯಗಳ ಧ್ವನಿಯಾಗಿದ್ದ ಈ ನಾಲ್ವಡಿಯವರ ಕೊಡುಗೆಯನ್ನು ಯಾವತ್ತೂ ಸ್ಮರಿಸುತ್ತೇನೆ‌. ನಾನಂತೂ ನಮ್ಮ ಮನೆ, ಮನದಲ್ಲಿ ನಾಲ್ವಡಿ ಅವರನ್ನು ನಿರಂತರವಾಗಿ ಪೂಜಿಸುತ್ತಲೇ ಇರುತ್ತೇನೆ. ಅವರ ಸಾಧನೆಗಳನ್ನು ಪ್ರಚಾರ ಮಾಡುತ್ತೇನೆ.

ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರನ್ನು ನೆನೆಯೋಣ.

ಬರಹ : ಅನಂತನಾಯಕ್.ಎನ್, ನ್ಯಾಯವಾದಿಗಳು, ಹೈಕೋರ್ಟ್, ಬೆಂಗಳೂರು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Maharashtra Election ‘ಮಹಾ’ ಚುನಾವಣೆ.ಮತ್ತೆ ತಲೆಯೆತ್ತಿದ ” ಮಹಾಯುತಿ” ಮಕಾಡೆ ಬಿದ್ದಅಘಾಡಿ

Maharashtra Election ದೇಶದ ಗಮನ ಸೆಳೆದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ...

Police Department ರಾಜ್ಯದ ಜೈಲುಗಳ ವಾರ್ಡನ್ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕವಾಗಲು ಆಸಕ್ತ ಮಾಜಿ ಸೈನಿಕರು ಅರ್ಜಿ ಸಲ್ಲಿಸಲು ಅವಕಾಶ

Police Department ಕರ್ನಾಟಕ ರಾಜ್ಯಾದ್ಯಾಂತ ಇರುವ ಜೈಲುಗಳಲ್ಲಿ ವಾರ್ಡನ್‌ ಹುದ್ದೆಗೆ ಗುತ್ತಿಗೆ...

DC Shivamogga ಶಿವಮೊಗ್ಗ ಜಿಲ್ಲೆಯಲ್ಲಿ ಚುನಾವಣಾ ಜನಸಂಖ್ಯೆ ಅನುಪಾತದ ಬಗ್ಗೆ ಡಾ.ತ್ರಿಲೋಕ ಚಂದ್ರ ಅವರಿಂದ ಪರಿಶೀಲನೆ

DC Shivamogga ಶಿವಮೊಗ್ಗ ಜಿಲ್ಲೆಯಲ್ಲಿ ಚುನಾವಣಾ ಜನಸಂಖ್ಯೆ ಅನುಪಾತ (ಇಪಿ ರೇಷಿಯೋ)...