K. S. Eshwarappa ಪೊಲೀಸ್ ಇಲಾಖೆ ಗೋವು ಸಾಗಾಟ ಮತ್ತು ಗಾಂಜಾ ವಿಷಯದಲ್ಲಿ ಪ್ರಾಮಾಣಿಕವಾಗಿ ನಡೆದುಕೊಳ್ಳಬೇಕೆಂದು ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಗಾಂಜಾ, ಅಫೀಮು ಮಾರುವ ವ್ಯಕ್ತಿಗಳ ನಡುವೆ ಎಲ್ಲಿಯವರೆಗೆ ಪೊಲೀಸರಿಗೆ ಸಂಬಂಧವಿರುತ್ತದೆಯೋ, ಎಲ್ಲಿಯವರೆಗೂ ಗಾಂಜಾ, ಮಟ್ಕಾ ಹಣ ಮುಟ್ಟುವುದಿಲ್ಲವೋ ಅಲ್ಲಿಯವರೆಗೆ ಸಮಸ್ಯೆಗಳು ಬಗೆಹರಿಯುವುದಿಲ್ಲ. ಪೊಲೀಸರು ಉದ್ಧಾರವಾಗುವುದಿಲ್ಲ. ಶಾಲಾ-ಕಾಲೇಜಿನಲ್ಲಿ ಗಾಂಜಾ ಅಫೀಮು ಓಡಾಡುತ್ತಿದೆ. ಇದು ಪೊಲೀಸರಿಗೆ ಗೊತ್ತಿಲ್ಲವೇ ಎಂದು ಪ್ರಶ್ನಿಸಿದ ಅವರು, ಪೊಲೀಸರು ಎಲ್ಲಿ ತಿನ್ನಬೇಕೋ ಅಲ್ಲಿ ತಿನ್ನಲಿ. ಆದರೆ ಗೋವು ಸಾಗಾಟ ಮತ್ತು ಗಾಂಜಾ ವಿಷಯದಲ್ಲಿ ತಿನ್ನುವ ಕೆಲಸ ಮಾಡಬಾರದು ಎಂದು ಹೇಳಿದರು.
K. S. Eshwarappa ಶಿವಮೊಗ್ಗದ ಹೊಸಮನೆಯಲ್ಲಿ ನಡೆದ ಘಟನೆಯ ಬಗ್ಗೆ ಮಾತನಾಡಿದ ಈಶ್ವರಪ್ಪ, ಈ ಪ್ರಕರಣ ಗಾಂಜಾ ನಶೆಯಲ್ಲಿ ನಡೆದಿರುವ ಬಗ್ಗೆ ಅನುಮಾನವಿದೆ. ಜೈಲಿನಿಂದ ಬಿಡುಗಡೆ ಆಗುತ್ತಿದ್ದಂತೆ ನಶೆಯಲ್ಲಿ ಹಲ್ಲೆ ಮಾಡಲು ಮತ್ತೆ ತನ್ನ ವಿರೋಧಿಯನ್ನು ಹುಡುಕಿಕೊಂಡು ಹೋಗುತ್ತಾನೆ. ಇವೆಲ್ಲ ಪೊಲೀಸರಿಗೆ ಗೊತ್ತಾಗುವುದಿಲ್ಲವೇ?. ಅವರು ತಮ್ಮ ಕೆಲಸವನ್ನು ನಿಷ್ಠೆ, ಪ್ರ‍್ರಾಮಾಣಿಕತೆಯಿಂದ ಮಾಡಬೇಕು ಎಂದರು.
ಮಂಗಳೂರಿನಲ್ಲಿ ರಸ್ತೆ ಮಧ್ಯೆಯೇ ನಮಾಜ್ ಮಾಡಿದ ಪ್ರಕರಣ, ಲವ್ ಜಿಹಾದ್ ಕುರಿತು ಮಾತನಾಡಿದ ಅವರು, ಮಂಗಳೂರಿನ ನಮಾಜ್ ಪ್ರಕರಣದಲ್ಲಿ ಪೊಲೀಸರು ಪ್ರ‍್ರಾಮಾಣಿಕತನ ಮೆರೆದರೂ ಪ್ರಕರಣದಲ್ಲಿ ಬಿ ರಿಪೋರ್ಟ್ ಹಾಕಿರುವುದು ಸರ್ಕಾರದ ತುಷ್ಠೀಕರಣದ ನೀತಿಯ ಮುಂದುವರಿಕೆಯಾಗಿದೆ. ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿದ್ದರು. ಆದರೆ ಇನ್‌ಸ್ಪೆಕ್ಟರ್‌ರನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಲಾಗಿದೆ. ಇದು ಮುಸ್ಲೀಂ ಸರ್ಕಾರ ಎಂದು ಘೋಷಿಸಲಿ ಎಂದರಲ್ಲದೆ, . ಈ ರೀತಿ ನಡೆದುಕೊಂಡರೆ ಕಾನೂನು ಸುವ್ಯವಸ್ಥೆ ಉಳಿಯಲು ಸಾಧ್ಯವೇ? ಚನ್ನಗಿರಿ ಪೊಲೀಸ್ ಠಾಣೆಯ ಮೇಲಿನ ದಾಳಿ ವಿಷಯದಲ್ಲೂ ಸರ್ಕಾರ ಎಡವಿದೆ ಎಂದು ಹೇಳಿದರು.
ಲವ್ ಜಿಹಾದ್‌ಗೆ ಹೆಲ್ಪ್ ಲೈನ್
ಪ್ರಮೋದ್ ಮುತಾಲಿಕ್ ಲವ್ ಜಿಹಾದ್ ವಿರುದ್ಧ ಹೆಲ್ಪ್ ಲೈನ್ ಆರಂಭಿಸಿದ್ದಾರೆ. ಇದನ್ನು ಸ್ವಾಗತಿಸುತ್ತೇನೆ. ನನ್ನ ಅವಶ್ಯಕತೆ ಅವರಿಗಿದ್ದರೆ ಈ ವಿಷಯದಲ್ಲಿ ಸಹಾಯ ಮಾಡಲು ಸಿದ್ಧ. ಶಿವಮೊಗ್ಗದಲ್ಲೂ ಈ ಹೆಲ್ಪ್ಲೈನ್ ಆರಂಭಿಸುವ ಕುರಿತು ಚಿಂತಿಸುವುದಾಗಿ ಘೋಷಿಸಿದರು.
ಮುಸ್ಲೀಂರ ಮತ ಎಷ್ಟು ಬೇಕಾದರೂ ತೆಗೆದುಕೊಳ್ಳಲಿ ಆದರೆ ಈ ರೀತಿಯ ನಡೆ ಸರಿಯಲ್ಲ. ಆದರೆ ಕಾನೂನು, ಸುವ್ಯವಸ್ಥೆ ವಿಚಾರದಲ್ಲಿ ರಾಜಿಯಾಗಬಾರದು ಎಂದರು.
ಪತ್ರಿಕಾಗೋಷ್ಟಿಯಲ್ಲಿ ಈಶ್ವರಪ್ಪ ಬೆಂಬಲಿಗರಾದ ವಿಶ್ವಾಸ್, ಎಂ ಜಿ ಬಾಲು, ಭೂಪಾಲ್, ಗನ್ನಿ ಶಂಕರ್ ಮೊದಲಾದವರಿದ್ದರು.