Asianet Suvarna News ಮುಸ್ಲಿಂ ಜನಸಂಖ್ಯೆಯನ್ನು ತೋರಿಸಲು ಪಾಕಿಸ್ತಾನ ಧ್ವಜವನ್ನು ಬಳಸಿದ್ದ ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ನಿರೂಪಕ ಅಜಿತ್ ಹನುಮಕ್ಕನವರ್ ವಿರುದ್ಧ ಕೋಮು ದ್ವೇಷವನ್ನು ಹರಡಿದ ಆರೋಪದಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಅದರ ನಿರೂಪಕ ಅಜಿತ್ ಹನುಮಕ್ಕನವರ್ ವಿರುದ್ಧ ಐಪಿಸಿ ಸೆಕ್ಷನ್ 505 (2) ಅಡಿಯಲ್ಲಿ ದ್ವೇಷವನ್ನು ಸೃಷ್ಟಿಸಿದ ಅಥವಾ ಉತ್ತೇಜಿಸಲು ಯತ್ನಿಸಿದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ.
ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಮಂಡಳಿ ಬಿಡುಗಡೆ ಮಾಡಿರುವ ಜನಸಂಖ್ಯಾ ವರದಿಯಲ್ಲಿ ದೇಶದಲ್ಲಿ ಹಿಂದೂಗಳ ಜನ ಸಂಖ್ಯೆ ಇಳಿಕೆಯಾಗಿದೆ. ಮುಸ್ಲಿಮರ ಜನಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ತಿಳಿಸಿತ್ತು.
Asianet Suvarna News ಚುನಾವಣೆಯ ಹೊತ್ತಲ್ಲೇ ಬಿಡುಗಡೆ ಮಾಡಿರುವ ವರದಿ ದೇಶದಾದ್ಯಂತ ವಿವಾದದ ಕಿಡಿ ಹೊತ್ತಿಸಿದೆ. ಈ ವರದಿ ಆಧರಿಸಿ ಮೇ 9, 2024ರಂದು ರಾತ್ರಿ 8:30ಕ್ಕೆ ಸುವರ್ಣ ನ್ಯೂಸ್ ಸುದ್ದಿ ಪ್ರಕಟಿಸಿತ್ತು. ಅಜಿತ್ ಹನುಮಕ್ಕನವರ್ ಸುದ್ದಿ ವಿಶ್ಲೇಷಣೆ ಮಾಡಿದ್ದರು. ಸುದ್ದಿಯಲ್ಲಿ ಹಿಂದೂ ಮುಸ್ಲಿಮರ ಜನಸಂಖ್ಯೆ ತೋರಿಸುವಾಗ ಹಿಂದೂಗಳ ಜನಸಂಖ್ಯೆಗೆ ಭಾರತದ ಧ್ವಜ ಮತ್ತು ಮುಸ್ಲಿಮರ ಜನಸಂಖ್ಯೆಗೆ ಪಾಕಿಸ್ತಾನ ಧ್ವಜದ ಗ್ರಾಫಿಕ್ಸ್ ಬಳಸಲಾಗಿದೆ.
ಈ ಕುರಿತು ಸಾಮಾಜಿಕ ಕಾರ್ಯಕರ್ತರಾಗಿರುವ ತನ್ವೀರ್ ಅಹ್ಮದ್ ಎಂಬವರು ದೂರು ದಾಖಲಿಸಿದ್ದರು. ಈ ದೂರಿನ ಮೇರೆಗೆ ಹೈಗ್ರೌಂಡ್ಸ್ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
ಇದಲ್ಲದೆ ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ನಿರೂಪಕ ಅಜಿತ್ ಹನುಮಕ್ಕನವರ್ ವಿರುದ್ಧ ಕೋಮು ದ್ವೇಷವನ್ನು ಹರಡಿದ ಆರೋಪದಲ್ಲಿ ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಸಿವಿಲ್ ರೈಟ್ಸ್ ಸಂಘಟನೆಯ ನಿಯೋಗವು (ಎಪಿಸಿಆರ್) ಬೆಂಗಳೂರು ಸಹಾಯಕ ಪೊಲೀಸ್ ಆಯುಕ್ತರಿಗೆ ದೂರು ನೀಡಿತ್ತು.
ದೂರಿನಲ್ಲಿ ರಾಷ್ಟ್ರೀಯ ಧ್ವಜಗಳನ್ನು ಧಾರ್ಮಿಕ ಸಮುದಾಯಗಳಿಗೆ ರೂಪಕಗಳಾಗಿ ಬಳಸುವುದು ತಪ್ಪುದಾರಿಗೆಳೆಯುವಂತಿದೆ, ಆದ್ದರಿಂದ ಸುವರ್ಣ ನ್ಯೂಸ್ ಮತ್ತು ನಿರೂಪಕ ಅಜಿತ್ ಹನುಮಕ್ಕನವರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಗಿತ್ತು.