Dr. Shivamurthy Murugha Sharanaru ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿರುವ ಚಿತ್ರದುರ್ಗದ ಮುರುಘಾ ಮಠದ ಡಾ.ಶಿವಮೂರ್ತಿ ಶರಣರು ಸೋಮವಾರ ಜಿಲ್ಲಾ ನ್ಯಾಯಾಲಯಕ್ಕೆ ಶರಣಾಗಿದ್ದಾರೆ.
ಫೋಕ್ಸೋ ಪ್ರಕರಣದಲ್ಲಿ ಮುರುಘಾ ಶ್ರೀಗೆ ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ಕಳೆದ ಮಂಗಳವಾರ (ಏ.23) ರದ್ದು ಮಾಡಿತ್ತು ಮತ್ತು ಒಂದು ವಾರದೊಳಗೆ ನ್ಯಾಯಾಲಯಕ್ಕೆ ಹಿಂದಿರುಗುವಂತೆ ಸೂಚಿಸಿತ್ತು.
ಪೋಕ್ಸೊ ಪ್ರಕರಣದಡಿ ಕಳೆದ ವರ್ಷ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದ ಮುರುಘಾ ಶ್ರೀ ಹೈಕೋರ್ಟ್‌ನಿಂದ ಷರತ್ತುಬದ್ಧ ಜಾಮೀನು ಪಡೆದು ಬಿಡುಗಡೆಯಾಗಿದ್ದರು. ಬಳಿಕ ದಾವಣಗೆರೆಯಲ್ಲಿದ್ದರು.
Dr. Shivamurthy Murugha Sharanaru ಸದರಿ ಜಾಮೀನು ಪ್ರಶ್ನಿಸಿ ಸಂತ್ರಸ್ತ ಬಾಲಕಿಯ ಪರ ವಕೀಲರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಏಪ್ರಿಲ್ 22 ರಂದು ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ವಿಕ್ರಮ್ ನಾಥ್ ನೇತೃತ್ವದ ದ್ವಿಸದಸ್ಯ ಪೀಠ, ಜಾಮೀನು ರದ್ದುಗೊಳಿಸಿ ಜೈಲಿಗೆ ಹಿಂದಿರುಗುವಂತೆ ಆದೇಶಿಸಿತ್ತು.
ನವೆಂಬರ್ 8, 2023 ರಂದು ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಏ.29 ಸೋಮವಾರ ಮಧ್ಯಾಹ್ನ ಚಿತ್ರದುರ್ಗದ ಒಂದನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಎದುರು ಮುರುಘಾ ಶ್ರೀ ಹಾಜರಾಗಿದ್ದಾರೆ.
ಹೈಕೋರ್ಟ್ ಜಾಮೀನು ಪ್ರಶ್ನಿಸಿ ಸಂತ್ರಸ್ತೆಯ ತಂದೆ ಸುಪ್ರೀಂ ಕೋರ್ಟ್‌ಗೆ ವಿಶೇಷ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಪೀಠ ಪ್ರಕರಣದ ವಿಚಾರಣೆಯನ್ನು ವರ್ಷದೊಳಗೆ ಮುಗಿಸಲು ಗಡುವು ನೀಡಿದೆ.