Ninasam ಚೆನ್ನಾಗಿ ಯೋಚನೆ ಮಾಡು, ಚೆನ್ನಾಗಿ ಓದು, ಬರಿ ಎಂದು ಮಕ್ಕಳಿಗೆ ನಿತ್ಯ ಹೇಳುತ್ತಿರುತ್ತೇವೆ – ಅವುಗಳನ್ನು ಮಾಡುವುದು ಹೇಗೆ ಎಂಬುದನ್ನು ಕಲಿಸುವಲ್ಲಿ ನಾವು ಸೋಲುತ್ತೇವೆ. ಇವತ್ತಿನ ಶಿಕ್ಷಣವೂ ಮಕ್ಕಳ ತಲೆಯಲ್ಲಿ ಮಾಹಿತಿಯನ್ನು ತುಂಬಿಸುವ, ಹಾಗೆ ತುಂಬಿಸಿದ್ದನ್ನು ಪರೀಕ್ಷೆಯಲ್ಲಿ ಹೊರತೆಗೆಯುವ ಕಸುಬನ್ನೇ ಕೇಂದ್ರವಾಗಿಸಿಕೊಂಡಿದೆ. ಆದರೆ, ಆಲೋಚನೆ-ಓದು-ಬರಹಗಳು ವಿದ್ಯಾರ್ಥಿಗಳಿಗೆ ಮಹತ್ತ್ವದ ವಿಚಾರಗಳಷ್ಟೇ ಅಲ್ಲ, ಬಲು ಮೋಜಿನ ಕ್ರಿಯೆಗಳೂ ಹೌದು. ನೀನಾಸಮ್ ಮಕ್ಕಳ ಶಿಬಿರ 2024 ಈ ಮಹತ್ತ್ವದ, ಮೋಜಿನ ವಿಚಾರಗಳನ್ನು ಕಲಿಯುವ ಲವಲವಿಕೆಯ ವಾತಾವರಣವನ್ನು ಒದಗಿಸುತ್ತದೆ.
ಯಾರಿಗೆ?
ಆರನೆಯ ತರಗತಿಯಿಂದ ಎಂಟನೆಯ ತರಗತಿಯ ಮಕ್ಕಳು ಈ ಶಿಬಿರದಲ್ಲಿ ಭಾಗವಹಿಸಬಹುದು. ಈ ಶಿಬಿರವು ಕನ್ನಡದಲ್ಲಿ ನಡೆಯುತ್ತದೆ ಆದರೆ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಓದುವ ವಿದ್ಯಾರ್ಥಿಗಳಿಗೂ ಇದು ಉಪಯುಕ್ತ.
ಇಲ್ಲಿ ಏನಿರುತ್ತದೆ?
ಆಲೋಚನೆ ಎಂದರೇನು? ಆಲೋಚನೆಯಲ್ಲಿ ಎಷ್ಟು ವಿಧ? ಯೋಚನೆ ಮಾಡುವುದನ್ನು ಉತ್ತಮಪಡಿಸಿಕೊಳ್ಳಲು ಸಾಧ್ಯವೇ? ಪದ್ಯವೊಂದನ್ನು ಓದುವುದಕ್ಕೂ ಗಣಿತದ ಸಮಸ್ಯೆಯೊಂದನ್ನು ಓದುವುದಕ್ಕೂ ಏನಾದರೂ ವ್ಯತ್ಯಾಸವಿದೆಯೇ? ಓದುವುದು ಯಾಕೆ ಕಷ್ಟ? ಅದನ್ನು ಸುಲಭ ಮಾಡಿಕೊಳ್ಳುವ ಮಾರ್ಗಗಳಿವೆಯೇ? ಬರೆಯುವುದು ಹೇಗೆ? ಯಾರು ಬೇಕಾದರೂ ಪದ್ಮ, ಕತೆಗಳನ್ನು ಬರೆಯಲು ಸಾಧ್ಯವೇ? ಚಿತ್ರ ಬಿಡಿಸುವುದಕ್ಕೂ ಬರೆಯುವುದಕ್ಕೂ ಇರುವ ವ್ಯತ್ಯಾಸಗಳೇನು? ಛೋಟಾ ಭೀಮ್ಗೂ ಗಣಿತಕ್ಕೂ ಇರುವ ಸಂಬಂಧವೇನು? ಮುಂತಾದ ಮೂಲಭೂತ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಮಕ್ಕಳು ಸಂಭ್ರಮದಿಂದ ಪಾಲ್ಗೊಳ್ಳುವಂತಹ ಹಲವು ಚರ್ಚೆ ಚಟುವಟಿಕೆಗಳು ಈ ಶಿಬಿರದಲ್ಲಿ ಇರುತ್ತವೆ.
ಇಲ್ಲಿ ಏನು ಇರುವುದಿಲ್ಲ?
ಈಗಾಗಲೇ ಹೇಳಿರುವ ವಿಚಾರಕ್ಕೆ ಪೂರಕವಾಗಿ ಆಟ, ಚಲನೆ, ಚಿತ್ರಕಲೆ ಮುಂತಾದವನ್ನು ಅಗತ್ಯಕ್ಕೆ ತಕ್ಕಂತೆ ಬಳಸಲಾಗುತ್ತದೆಯಾದರೂ ಈ ಶಿಬಿರದಲ್ಲಿ ನಾಟಕ, ಆಬಿನಯ, ನೃತ್ಯ, ಗಾಯನ ಮುಂತಾದವನ್ನು ಹೇಳಿಕೊಡುವುದಿಲ್ಲ. ಆಲೋಚನೆ, ಓದು, ಬರಹಗಳ ವಿಶ್ವ ತವಾದ ಚರ್ಚೆ, ಚಟುವಳಿಕೆಗಳು ಇಲ್ಲಿ ಇರುತ್ತವೆಯಾದರೂ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆಯುವುದನ್ನು ಹೇಳಿಕೊಡುವ ಕೋಚಿಂಗ್ ಕ್ಲಾಸ್ ಇದಲ್ಲ.
ನಡೆಸಿಕೊಡುವವರು ಯಾರು?
Ninasam ಈಗಾಗಲೇ ಭಾರತದ ಹಲವು ನಗರಗಳಲ್ಲಿ ಈ ರೀತಿಯ ಮಕ್ಕಳ ಶಿಬಿರಗಳನ್ನು ನಡೆಸಿದ. ‘ಮಕ್ಕಳಿಗಾಗಿ ತತ್ತ್ವ ಚಿಂತನೆ’ ಎನ್ನುವ ಪುಸ್ತಕವನ್ನು ಬರೆದಿರುವ, ತತ್ತ್ವಶಾಸ್ತ್ರ, ವಿಜ್ಞಾನ, ಸಮಾಜಶಾಸ್ತ್ರಗಳಲ್ಲಿ ಭಾರತದ ಶ್ರೇಷ್ಠ ವಿದ್ವಾಂಸರಲ್ಲೊಬ್ಬರಾದ ಡಾ. ಸುಂದರ್ ಸರುಕ್ಕೆ ಈ ಶಿಬಿರವನ್ನು ನಡೆಸಿಕೊಡುತ್ತಾರೆ. ಇವರ ಜೊತೆ ನೀನಾಸಮ್ ರಂಗಶಿಕ್ಷಣ ಕೇಂದ್ರದ ಸಂಪನ್ಮೂಲ ವ್ಯಕ್ತಿಗಳೂ ಕೈ ಜೋಡಿಸುತ್ತಾರೆ.
ಎಲ್ಲಿ ಯಾವಾಗ?
ಈ ಶಿಬಿರವು ಹೆಗ್ಗೋಡಿನ ನೀನಾಸಮ್ ಆವರಣದಲ್ಲಿ ನಡೆಯುತ್ತದೆ. ಶಾಲೆಗಳಲ್ಲಿನ ತರಗತಿ ಕೋಣೆಗಿಂತ ಭಿನ್ನವಾದ ವಾತಾವರಣದಲ್ಲಿ ಚಟುವಟಿಕೆಗಳು ಇರುತ್ತವೆ. 2024ನೇ ಏಪ್ರಿಲ್ 21ರಿಂದ 24ರವರೆಗೆ ನಡೆಯುವ ಈ ಶಿಬಿರವು ಪ್ರತಿದಿನ ಬೆಳಗ್ಗೆ 9:30ಕ್ಕೆ ಸರಿಯಾಗಿ ಪ್ರಾರಂಭವಾಗಿ ಸಂಜೆ 4:30ಗೆ ಮುಗಿಯುತ್ತದೆ. ಮಕ್ಕಳು ಬೆಳಗ್ಗೆ ಸರಿಯಾದ ಸಮಯಕ್ಕೆ ಬರಬೇಕು ಮತ್ತು ಸಂಜೆ ನಿಗದಿತ ಸಮಯಕ್ಕೆ ಪೋಷಕರು ಅವರನ್ನು ಕರೆದೊಯ್ಯಬೇಕು. ಶಿಬಿರ ನಡೆಯುವ ಹೊತ್ತಿಗೆ ಪೋಷಕರು ಮಕ್ಕಳ ಜೊತೆಗೆ ಇರುವಂತಿಲ್ಲ.
ಆರ್ಜಿ ಸಲ್ಲಿಸುವ ವಿಧಾನ
ಈ ಶಿಬಿರವು ನಿಗದಿತ ಸಂಖ್ಯೆಯ ಮಕ್ಕಳಿಗೆ ಮಾತ್ರ. ಮೊದಲು ಅರ್ಜಿ ಸಲ್ಲಿಸಿದವರಿಗೆ ಆದ್ಯತೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15 ಏಪ್ರಿಲ್ 2024. ನೀನಾಸಮ್ ಕಛೇರಿಗೆ ಬಂದು ಅರ್ಜಿ ತುಂಬಿ ಶುಲ್ಕವನ್ನು ಪಾವತಿ ಮಾಡಬೇಕು.
ಶಿಬಿರ ಶುಲ್ಕ
ನಾಲ್ಕು ದಿನಗಳ ಈ ಶಿಬಿರದ ಶುಲ್ಕ ಒಬ್ಬ ಅಭ್ಯರ್ಥಿಗೆ ರೂ. 600 (ರೂಪಾಯಿ ಆರು ನೂರು ಮಾತ್ರ). ಯಾವುದೇ ವಿದ್ಯಾರ್ಥಿಗೆ ಶಿಬಿರದಲ್ಲಿ ಭಾಗವಹಿಸುವ ಆಸಕ್ತಿಯಿದ್ದು ಶುಲ್ಕವನ್ನು ಭರಿಸಲು ತೊಂದರೆಯಿದ್ದರೆ ನೀನಾಸಮ್ ಕಛೇರಿಯನ್ನು ಸಂಪರ್ಕಿಸಿ.
ಮಕ್ಕಳಿಗೆ ಏನು ಕೊಡುತ್ತೇವೆ?
ಈ ಶಿಬಿರದಲ್ಲಿ ಪಾಲ್ಗೊಳ್ಳುವ ಮಕ್ಕಳಿಗೆ ಸುಂದರ್ ಸರುಕ್ಕೆ ಅವರ ‘ಮಕ್ಕಳಿಗಾಗಿ ತತ್ತ್ವಚಿಂತನೆ’ ಎನ್ನುವ ಸಚಿತ್ರ ಪುಸ್ತಕವನ್ನು, ಶಿಬಿರದಲ್ಲಿ ಬಳಸಲು ಅಗತ್ಯವಾಗುವ ಪೆನ್ಸಿಲ್-ಮಸ್ತಕ ಇತ್ಯಾದಿ ಮತ್ತು ಭಾಗವಹಿಸಿದ್ದಕ್ಕಾಗಿ ಧೃಡೀಕರಣ ಪತ್ರ/ಸರ್ಟಿಫಿಕೇಟ್ ಕೊಡುತ್ತೇವೆ. ಮಧ್ಯಾಹ್ನ ಸರಳ ಊಟದ ವ್ಯವಸ್ಥೆಯನ್ನು ನಾವು ಮಾಡುತ್ತೇವೆ.
ಹೆಚ್ಚಿನ ವಿವರಗಳಿಗೆ ನೀನಾಸಮ್ ಕಛೇರಿಯನ್ನು ಸಂಪರ್ಕಿಸಿ:
ವಾಟ್ಸ್ ಆ್ಯಪ್- 8183295646
9480282791 (ರಾಘು ಪುರಪ್ಪೆಮನೆ)
9449337250 ( ಶ್ರೀಕಾಂತ್)