K. Annamalai ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿರುವ ತಮಿಳುನಾಡು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಕೆ. ಅಣ್ಣಾಮಲೈ ಅವರ ನಾಮಪತ್ರವನ್ನು ತಿರಸ್ಕರಿಸುವಂತೆ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ ಚುನಾವಣಾ ಆಯೋಗಕ್ಕೆ ಗುರುವಾರ ಮನವಿ ಮಾಡಿದೆ.
ಅಣ್ಣಾಮಲೈ ಅವರು ನ್ಯಾಯಾಂಗ ಅಂಚೆ ಚೀಟಿಯಲ್ಲಿ ನಾಮಪತ್ರ ಸಲ್ಲಿಸುವ ಬದಲು ಕೋರ್ಟ್ ಶುಲ್ಕದ ಅಂಚೆ ಚೀಟಿಯಲ್ಲಿ ನಾಮಪತ್ರ ಸಲ್ಲಿಸಿದ್ದಾರೆ ಎಂದು ಎಐಡಿಎಂಕೆ ಆರೋಪಿಸಿದೆ.
ಇಲ್ಲಿ ಗಮನಾರ್ಹ ಸಂಗತಿಯೆಂದರೆ, ಕೆಲ ತಿಂಗಳ ಮುಂಚೆ ಎಐಡಿಎಂಕೆ ಬಿಜೆಪಿ ಮಿತ್ರ ಪಕ್ಷವಾಗಿತ್ತು. ಪ್ರಸ್ತುತ ಅದು ಬಿಜೆಪಿ ಜೊತೆಗಿನ ಮೈತ್ರಿ ತೊರೆದಿದೆ.
ಅಣ್ಣಾಮಲೈ ನಾಮಪತ್ರ ಸಲ್ಲಿಸುವಾಗ ಅಫಿಡವಿಟ್‌ನಲ್ಲಿ ಆಸ್ತಿ ವಿವರಗಳನ್ನು ಸರಿಯಾಗಿ ಉಲ್ಲೇಖಿಸಿಲ್ಲ. ಹಾಗಾಗಿ ಅವರ ನಾಮಪತ್ರ ತಿರಸ್ಕರಿಸುವಂತೆ ಗುರುವಾರ ಆಡಳಿತರೂಢ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಕಾರ್ಯಕರ್ತರೊಬ್ಬರು ಚುನಾವಣಾ ಆಯೋಗಕ್ಕೆ ಆಗ್ರಹಿಸಿದ್ದಾರೆ.
ಮಾದರಿ ನೀತಿ ಸಂಹಿತೆಯ ಪ್ರಕಾರ, ಅಭ್ಯರ್ಥಿ ನಾಮಪತ್ರ ಸಲ್ಲಿಸುವಾಗ ಅವರ ಜೊತೆ ಐದು ಮಂದಿಯನ್ನು ಮಾತ್ರ ಕರೆದುಕೊಂಡು ಹೋಗಬೇಕು. ಅಣ್ಣಾಮಲೈ 50 ಜನರನ್ನು ಕರೆದುಕೊಂಡು ಹೋಗುವ ಮೂಲಕ ನಿಯಮ ಉಲ್ಲಂಘಿಸಿದ್ದಾರೆ ಎಂದೂ ಡಿಎಂಕೆ ಕಾರ್ಯಕರ್ತ ಆರೋಪಿಸಿದ್ದಾರೆ.
ಮಾರ್ಚ್ 27 ಬುಧವಾರ ತಮಿಳುನಾಡಿನಲ್ಲಿ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿತ್ತು. ಮಾರ್ಚ್ 30 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ತಮಿಳುನಾಡಿನಲ್ಲಿ ಏಪ್ರಿಲ್ 19 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ.
ಜೂನ್ 4 ರಂದು ಇಡೀ ರಾಷ್ಟ್ರದ ಫಲಿತಾಂಶ ಪ್ರಕಟಗೊಳ್ಳಲಿದೆ.
K. Annamalai ಭಾರತದಾದ್ಯಂತ ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆಯ ಮತದಾನ ನಡೆಯಲಿದೆ.