Lok Sabha Election 2024 ಬಿಜೆಪಿ ನಿನ್ನೆ 111 ಅಭ್ಯರ್ಥಿಗಳ 5ನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಕಲ್ಕತ್ತಾ ಹೈಕೋರ್ಟ್‌ಗೆ ರಾಜೀನಾಮೆ ನೀಡಿ ಇತ್ತೀಚೆಗೆ ಬಿಜೆಪಿಗೆ ಸೇರಿ ವಿವಾದವನ್ನು ಸೃಷ್ಟಿಸಿದ್ದ ಮಾಜಿ ನ್ಯಾಯಮೂರ್ತಿ ಅಭಿಜಿತ್ ಗಂಗೋಪಾಧ್ಯಾಯ ಅವರಿಗೆ ಪಶ್ಚಿಮ ಬಂಗಾಳದ ಪುರ್ಬಾ ಮೇದಿನಿಪುರ್ ಜಿಲ್ಲೆಯ ತಾಮ್ಲುಕ್ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ. ಅವರನ್ನು ಚುನಾವಣೆಗೆ ನಿಂತರೆ ಸೋಲಿಸುವುದಾಗಿ ಈ ಹಿಂದೆ ಶಪಥ ಮಾಡಿದ್ದ ಮಮತಾ ಬ್ಯಾನರ್ಜಿ, ತಾಮ್ಲುಕ್ ಕ್ಷೇತ್ರದಿಂದ ಗಂಗೋಪಾಧ್ಯಾಯ ಸ್ಪರ್ಧಿಸುವ ಮಾಹಿತಿ ತಿಳಿದು ಅವರ ವಿರುದ್ಧ ವಿದ್ಯಾರ್ಥಿ ನಾಯಕನನ್ನೇ ಕಣಕ್ಕಿಳಿಸಿದ್ದಾರೆ.
ತೃಣಮೂಲ ಕಾಂಗ್ರೆಸ್‌ನ ಸಾಮಾಜಿಕ ಐಟಿ ಸೆಲ್‌ನ ಮುಖ್ಯಸ್ಥರಾಗಿರುವ 27 ವರ್ಷದ ದೇಬಂಗ್ಶು ಭಟ್ಟಾಚಾರ್ಯ ವಿರುದ್ಧ ಬಿಜೆಪಿಯಿಂದ ಅಭಿಜಿತ್ ಗಂಗೋಪಾಧ್ಯಾಯ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. ಮಾರ್ಚ್ 10ರಂದು, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಜ್ಯದ ಎಲ್ಲಾ 42 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ಗಂಗೋಪಾಧ್ಯಾಯ ಸ್ಪರ್ಧೆ ಮಾಹಿತಿ ತಿಳಿದೇ ಅವರ ವಿರುದ್ಧ ದೇಬಂಗ್ಶು ಭಟ್ಟಾಚಾರ್ಯ ಅವರನ್ನು ದೀದಿ ಕಣಕ್ಕಿಳಿಸಿದ್ದಾರೆ ಎನ್ನಲಾಗಿದೆ.
Lok Sabha Election 2024 ನಿವೃತ್ತ ನ್ಯಾಯಮೂರ್ತಿ ಅಭಿಜಿತ್ ಗಂಗೋಪಾಧ್ಯಾಯ ಅವರು ಈ ಮೊದಲು ಚರ್ಚೆಗೆ ಗ್ರಾಸವಾಗಿದ್ದರು. ಏಪ್ರಿಲ್ 2023ರಲ್ಲಿ ಶಾಲಾ ನೇಮಕಾತಿ ಹಗರಣಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ನಡೆಸುತ್ತಿದ್ದ ನ್ಯಾ. ಗಂಗೋಪಾಧ್ಯಾಯ ಅವರು, ಈ ಹಗರಣದಲ್ಲಿ ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಅವರ ಪಾತ್ರದ ಬಗ್ಗೆ ಸ್ಥಳೀಯ ಬಂಗಾಳಿ ಸುದ್ದಿ ವಾಹಿನಿಗೆ ಸಂದರ್ಶನ ನೀಡಿದ್ದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಸುಪ್ರೀಂ ಕೋರ್ಟ್, ಟಿವಿ ಚಾನೆಲ್‌ಗಳಿಗೆ ಸಂದರ್ಶನ ನೀಡುವುದು ಹಾಲಿ ನ್ಯಾಯಮೂರ್ತಿಗಳ ಕೆಲಸವಲ್ಲ ಎಂದಿತ್ತು. ನ್ಯಾ. ಗಂಗೋಪಾಧ್ಯಾಯ ಅವರು ಸಂದರ್ಶನ ನೀಡಿದ್ದಾರೆಯೇ ಅಥವಾ ಇಲ್ಲವೇ ಎಂಬುವುದನ್ನು ಪರಿಶೀಲಿಸಲು ಕಲ್ಕತ್ತಾ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಅವರಿಂದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಸುಪ್ರೀಂಕೋರ್ಟ್ ಪೀಠ ವರದಿ ಕೇಳಿತ್ತು.