Sri Shivaganga Yoga Kendra ಮಹಾಶಿವರಾತ್ರಿ ಪ್ರಯುಕ್ತ ವಿನೋಬನಗರದ ಕಲ್ಲಳ್ಳಿಯ ಶ್ರೀ ಶಿವಗಂಗಾ ಯೋಗಕೇಂದ್ರದಲ್ಲಿ ಶಿವನಿಗೆ ವಿಶೇಷ ಪ್ರಜೆ ಸಲ್ಲಿಸಿ ಪ್ರಾರ್ಥಿಸಲಾಯಿತು.
ಶಿವಗಂಗಾ ಯೋಗಕೇಂದ್ರದ ಎಲ್ಲ ಶಾಖೆಗಳ ಯೋಗಪಟುಗಳು ಭಾಗವಹಿಸಿ ಭಜನೆ ಹಾಗೂ ಭಕ್ತಿ ಗೀತೆಗಳನ್ನು ಹಾಡಿದರು.
ಶಿವಗಂಗಾ ಯೋಗಕೇಂದ್ರದ ಕಾರ್ಯದರ್ಶಿ ಎಸ್.ಎಸ್.ಜ್ಯೋತಿಪ್ರಕಾಶ್ ಮಾತನಾಡಿ, ನಾಡಿನಾದ್ಯಂತ ಮಹಾ ಶಿವರಾತ್ರಿಯನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ. ನಮ್ಮ ಯೋಗ ಕೇಂದ್ರದಲ್ಲಿ ಶಿವನ ಪ್ರತಿಮೆ ಸ್ಥಾಪಿಸಿದ್ದು, ಎರಡನೆಯ ವರ್ಷದ ಮಹಾಶಿವರಾತ್ರಿಯನ್ನು ಅತ್ಯಂತ ಸಂಭ್ರಮದಿಂದ ಆಚರಿಸುತ್ತಿದ್ದೇವೆ. ಪ್ರತಿ ದಿನ ಶಿವನಾಮಸ್ಮರಣೆಯನ್ನು ಮಾಡುತ್ತ ಸನ್ಮಾರ್ಗದಲ್ಲಿ ನಡೆಯೋಣ ಎಂದು ತಿಳಿಸಿದರು.
ಡಾ ನಾಗರಾಜ ಪರಿಸರ ಮಾತನಾಡಿ, ಶಿವನು ಪ್ರಕೃತಿ ಪ್ರಿಯನು, ಎಲ್ಲ ಪ್ರಾಣಿ ಪಕ್ಷಿಗಳಿಗೂ ಬದುಕುವ ಹಕ್ಕಿದೆ. ಈ ನಿಟ್ಟಿನಲ್ಲಿ ನಾವು ಜಲ ಮಾಲಿನ್ಯ, ಪರಿಸರ ಮಾಲಿನ್ಯ ಮಾಡದೆ ಹೆಚ್ಚು ಹೆಚ್ಚು ಗಿಡ ಮರಗಳನ್ನು ಬೆಳೆಸಿ ಅಂತರ್ಜಲವನ್ನು ಹೆಚ್ಚಿಸುವ ಕಡೆ ಗಮನ ಹರಿಸಬೇಕು ಎಂದು ತಿಳಿಸಿದರು.
ರೋಟರಿ ಮಾಜಿ ಸಹಾಯಕ ಗವರ್ನರ್ ಜಿ. ವಿಜಯಕುಮಾರ್ ಮಾತನಾಡಿ, ನಾವೆಲ್ಲ ಪ್ರತಿದಿನ ಯೋಗ ಮಾಡುವುದರಿಂದ ಆರೋಗ್ಯವಾಗಿದ್ದೇವೆ. ನಾವು ಮಾತ್ರ ಆರೋಗ್ಯವಾಗಿದ್ದರೆ ಸಾಲದು, ಎಲ್ಲರಿಗೂ ಯೋಗ ಮಾಡಲು ತಿಳಿಸಿ ಎಲ್ಲರೂ ಆರೋಗ್ಯವಾಗಿರುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿ ಮಹಾಶಿವರಾತ್ರಿಯ ಶುಭಾಶಯಗಳನ್ನು ಕೋರಿದರು.
ಯೋಗ ಕೇಂದ್ರದ ಗುರು ಯೋಗಾಚಾರ್ಯ ರುದ್ರಾರಾಧ್ಯ ನೇತೃತ್ವದಲ್ಲಿ ಪೂಜಾ ಕಾರ್ಯಗಳು ನೆರವೇರಿದವು. ಮುಂದಿನ ದಿನಗಳಲ್ಲಿ ಶಿವರಾತ್ರಿ ಸಂಭ್ರಮವನ್ನು ಮತ್ತಷ್ಟು ವಿಜೃಂಭಣೆಯಿಂದ ಮಾಡೋಣ ಎಂದು ತಿಳಿಸಿದರು.
ವಿವಿಧ ಭಜನಾ ಮಂಡಳಿಯ ಸದಸ್ಯರು ಭಜನೆ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಡಾ. ನಾಗರಾಜ ಪರಿಸರ ಅವರ ನೇತೃತ್ವದಲ್ಲಿ ಬೆಳಗಿನವರೆಗೆ ಜಾಗರಣೆಯನ್ನು ಮಾಡಲಾಯಿತು.
Sri Shivaganga Yoga Kendra ವಿಶೇಷ ಪೂಜೆ ರುದ್ರಾಭಿಷೇಕ ಭಜನೆ ಧ್ಯಾನ ನೆರವೇರಿತು. ಸಾವಿರಕ್ಕೂ ಹೆಚ್ಚು ಯೋಗಪಟುಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.