Pulwama attack 2019ರ ಫೆ. 14ರಂದು ಇಡೀ ಜಗತ್ತು ಪ್ರೇಮಿಗಳ ದಿನಾಚರಣೆಯಲ್ಲಿ ಮುಳುಗಿದ್ದಾಗ, ಅಂದು ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್ ಪಿಎಫ್ ತುಕಡಿಗಳ ಮೇಲೆ ದಾಳಿ ನಡೆಸಿದ ಉಗ್ರರು 40 ಯೋಧರನ್ನು ಹತ್ಯೆಗೈದಿದ್ದರು. ಫೆಬ್ರವರಿ 14, ಭಾರತೀಯರು ಮರೆಯಲಾಗದ ದಿನ, ಭಾರತದ ಇತಿಹಾಸದಲ್ಲಿ ಒಂದು ಕರಾಳ ದಿನ ಎಂದೇ ಹೇಳಬಹುದು.
ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಭಾರತೀಯ ಸೇನೆಯ ಭದ್ರತಾ ಪಡೆಗಳ ಮೇಲೆ ನಡೆದ ಅತ್ಯಂತ ಭೀಕರ ದಾಳಿಯಲ್ಲಿ 40 ಮಂದಿ ಸಿಆರ್‌ಪಿಎಫ್ ಯೋಧರು ಹುತಾತ್ಮರಾಗಿದ್ದರು.
ನಾಲ್ಕು ವರ್ಷಗಳ ಹಿಂದೆ ಫೆಬ್ರವರಿ 14 ರಂದು 40 ಸಿಆರ್‌ಪಿಎಫ್ ಅಧಿಕಾರಿಗಳ ಸಾವು ಮಾಧ್ಯಮಗಳಲ್ಲಿ, ಸೋಷಿಯಲ್ ಮೀಡಿಯಾಗಳಲ್ಲಿ ವರದಿಯಾದಾಗ ಇಡೀ ಭಾರತವೇ ಶೋಕಸಾಗರದಲ್ಲಿ ಮುಳುಗಿತ್ತು.
ಜೈಶ್-ಎ-ಮೊಹಮ್ಮದ್ ಸಂಘಟನೆಯ ಉಗ್ರಗಾಮಿಗಳು ನಡೆಸಿದ್ದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಸೇನೆಯ ವಾಹನದಲ್ಲಿ ಹೋಗುತ್ತಿದ್ದ ಯೋಧರು ಕ್ಷಮಾರ್ಧದಲ್ಲಿ ಜೀವವನ್ನು ಬಲಿಕೊಟ್ಟರು.
ಸ್ಫೋಟಕ ತುಂಬಿದ ವಾಹನವನ್ನು ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) ಬೆಂಗಾವಲು ಪಡೆಗೆ ಅತ್ಯಂತ ಭೀಕರವಾಗಿ ದಾಳಿ ನಡೆಸಲಾಗಿತ್ತು.
ದಾಳಿ ನಡೆದ ಕೆಲವೇ ಸಮಯದಲ್ಲಿ ಈ ದಾಳಿಯ ಹೊಣೆಯನ್ನು ಜೈಶ್ ಇ ಮೊಹಮ್ಮದ್ ಸಂಘಟನೆ ಹೊತ್ತುಕೊಂಡಿತ್ತು.
ಆದಿಲ್ ಅಹ್ಮದ್ ದಾರ್ ಹೆಸರಿನ ಆತ್ಮಾಹುತಿ ಬಾಂಬರ್ ಈ ದಾಳಿ ನಡೆಸಿದ್ದ. ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಗುಂಡಿಬಾಗ್, ಕಾಕಪೋರಾ ನಿವಾಸಿ ಎಂದು ತಿಳಿದುಬಂದಿತ್ತು.
ಮರುದಿನ ಭಾರತದ ವಿದೇಶಾಂಗ ಸಚಿವಾಲಯವು ಪಾಕಿಸ್ತಾನವನ್ನು ಈ ದಾಳಿಯ ಹೊಣೆಗಾರನ್ನಾಗಿ ಮಾಡಿತು. ಪಾಕಿಸ್ತಾನವು ಭಯೋತ್ಪಾದನೆಯನ್ನು ಬೆಂಬಲಿಸುತ್ತಿದೆ ಎಂದು ಆರೋಪಿಸಿತು. ಜೆಎಂ ನಾಯಕ ಮಸೂದ್ ಅಜರ್‌ಗೆ ಪಾಕಿಸ್ತಾನ ಸಂಪೂರ್ಣ ಬೆಂಬಲ ನೀಡುವುದೇ ಇಂತಹ ದಾಳಿಗಳಿಗೆ ಕಾರಣ ಎಂದಿತು.
ಭದ್ರತಾ ಪಡೆಗಳನ್ನು ಬೆಂಬಲಿಸುವ ನಿರ್ಣಯವನ್ನು ಎಲ್ಲಾ ರಾಜಕೀಯ ಪಕ್ಷಗಳು ಸರ್ವಾನುಮತದಿಂದ ಅಂಗೀಕರಿಸಿದವು.
ಪಾಕಿಸ್ತಾನಿ ಸರಕುಗಳ ಮೇಲೆ ಕಸ್ಟಮ್ಸ್ ಸುಂಕವನ್ನು ಶೇಕಡ 200ರಷ್ಟು ಹೆಚ್ಚಿಸಲಾಯಿತು. ಪಾಕಿಸ್ತಾನದ ವಿರುದ್ಧ ರಾಜತಾಂತ್ರಿಕ ದಾಳಿ ನಡೆಸಲಾಯಿತು.
ಜೆಎಂ ಜತೆಗೆ ಸಂಪರ್ಕ ಹೊಂದಿರುವ ಏಳು ಜನರನ್ನು ಬಂಧಿಸಲಾಯಿತು.
ಪುಲ್ವಾಮಾ ದಾಳಿಗೆ ಪ್ರತ್ಯುತ್ತರವಾಗಿ ವಾಯುಪಡೆಯ ಜೆಟ್‌ಗಳು ಪಾಕಿಸ್ತಾನದ ಖೈಬರ್ ಪಖ್ತುನ್‌ಖ್ವಾದಲ್ಲಿರುವ ಬಾಲಾಕೋಟ್‌ನಲ್ಲಿರುವ ಜೆಇಎಂ ಶಿಬಿರದ ಮೇಲೆ ಬಾಂಬ್ ದಾಳಿ ನಡೆಸಿತು.
Pulwama attack ಭಾರತದ ದಾಳಿಯಿಂದ ಬಾಲಾಕೋಟ್‌ನ ಜೆಇಎಂ ಶಿಬಿರವು ಸಂಪೂರ್ಣವಾಗಿ ನಾಶಗೊಂಡಿದೆ ಎನ್ನಲಾಗಿದೆ. ಪಾಕಿಸ್ತಾನದ ಗಡಿ ದಾಟಿ ಭಾರತದ ಯುದ್ಧವಿಮಾನಗಳು ಈ ದಾಳಿ ನಡೆಸಿದವು.
ಬಳಿಕ ಪಾಕಿಸ್ತಾನವು ಭಾರತೀಯ ಸೇನಾ ಸೌಲಭ್ಯವನ್ನು ಗುರಿಯಾಗಿಸಿ ದಾಳಿ ಮಾಡಲು ಯತ್ನಿಸಿತು. ಈ ಸಂದರ್ಭದಲ್ಲಿ ಪ್ರತಿದಾಳಿ ನಡೆಸಿದ ಐಎಎಫ್ ವಿಂಗ್ ಕಮಾಂಡರ್ ಅಭಿನಂದನ್‌ನನ್ನು ಪಾಕಿಸ್ತಾನ ಬಂಧಿಸಿ, ಬಳಿಕ ಬಿಡುಗಡೆ ಮಾಡಲಾಯಿತು.