Malnad Layout ಮಕ್ಕಳಿಗೆ ಒತ್ತಡ ರಹಿತ ಕಲಿಕೆ ಅಗತ್ಯವಾಗಿದೆ ಎಂದು ಪತ್ರಕರ್ತ ಜಿ.ಸಿ.ಸೋಮಶೇಖರ್ ಅಭಿಪ್ರಾಯಪಟ್ಟರು.
ನಗರದ ಮಾಚೇನಹಳ್ಳಿಯ ಮಲ್ನಾಡ್ ಲೇಔಟ್ನಲ್ಲಿರುವ ಸೀಮ ಆಂಗ್ಲ ಶಾಲೆಯಲ್ಲಿ ನಡೆದ ಸೀಮ ನೃತ್ಯ ರಂಗ್ ಉತ್ಸವ ಕಾರ್ಯಕ್ರಮವನ್ನು ದೀಪಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಪ್ರಸ್ತುತ ದಿನಮಾನಗಳಲ್ಲಿ ಮಕ್ಕಳ ಕಲಿಕೆಯ ಮೇಲೆ ಒತ್ತಡ ಹೇರಲಾಗುತ್ತಿದೆ. ಇದು ಕಲಿಕೆಗೆ ಹಿನ್ನಡೆಯಾಗುತ್ತಿದೆ. ಕಲಿಕಾ ತಜ್ಞರೂ ಕೂಡ ಇದನ್ನೇ ಹೇಳುತ್ತಿದ್ದಾರೆ. ಆದ್ದರಿಂದ ಮಕ್ಕಳ ಓದು ಬರಹದ ಮೇಲೆ ಯಾವುದೇ ಕಾರಣಕ್ಕೂ ಒತ್ತಡವನ್ನು ಹಾಕಬಾರದು ಎಂದು ಹೇಳಿದರು.
ಯಾವ ವಿಷಯದಲ್ಲಿ ಮತ್ತು ಕೋರ್ಸ್ಗಳಲ್ಲಿ ಮಕ್ಕಳಿಗೆ ಆಸಕ್ತಿ ಇರುತ್ತದೋ ಅದಕ್ಕೆ ಹೆಚ್ಚು ಒತ್ತನ್ನು ನೀಡಬೇಕು. ಆದರೆ ಪೋಷಕರು ತಮ್ಮ ಮನದಿಚ್ಚೆಯನ್ನು ಮಕ್ಕಳ ಮೇಲೆ ಹಾಕುತ್ತಿದ್ದಾರೆ. ಇದರಿಂದಾಗಿ ಮಕ್ಕಳಿಗೆ ಕಲಿಕೆಯಲ್ಲಿ ನಿರಾಸಕ್ತಿ ಉಂಟಾಗುವ ಸಾಧ್ಯತೆ ಇದೆ ಎಂದ ಅವರು, ಅವರ ಅಭಿರುಚಿಗೆ ತಕ್ಕಂತೆ ಕಲಿಕೆಗೆ ಪ್ರೋತ್ಸಾಹಿಸಿ ಎಂದು ಹೇಳಿದರು.
ಶಿಕ್ಷಣದ ಜೊತೆ ಸಂಸ್ಕಾರವನ್ನು ನೀಡುವುದು ಕೂಡ ಅಗತ್ಯವಾಗಿದೆ. ಉನ್ನತ ಶಿಕ್ಷಣವನ್ನು ಪಡೆದು ಸಂಸ್ಕಾರವಿಲ್ಲದಿದ್ದರೆ ಆ ಶಿಕ್ಷಣ ವ್ಯರ್ಥವಾಗುತ್ತದೆ. ಪ್ರತಿಯೊಂದು ಮಗುವಿಗೂ ಮನೆ ಮತ್ತು ಶಾಲೆಯಲ್ಲಿ ಸಂಸ್ಕಾರದ ಬಗ್ಗೆ ಪ್ರತಿನಿತ್ಯ ಅರಿವು ಮೂಡಿಸಬೇಕು ಎಂದು ತಿಳಿಸಿದರು.
Malnad Layout ಪೋಷಕರು ತಮ್ಮ ಮಕ್ಕಳಿಗೆ ಆಸ್ತಿಯನ್ನು ಮಾಡಬಾರದು. ಮಕ್ಕಳನ್ನೇ ದೇಶದ ಆಸ್ತಿಯನ್ನಾಗಿ ಮಾಡಬೇಕು. ಇದರಿಂದ ನಿಮ್ಮ ಕುಟುಂಬಕ್ಕೂ ಹಾಗೂ ರಾಷ್ಟ್ರಕ್ಕೂ ಕೀರ್ತಿ ಬರುತ್ತದೆ. ಪ್ರತಿಯೊಬ್ಬ ಪೋಷಕರೂ ಕೂಡ ತಮ್ಮ ಮಕ್ಕಳ ಕಲಿಕೆ ಹಾಗೂ ಪಠ್ಯೇತರ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡಬೇಕು. ಆಗ ಮಗು ಸರ್ವತೋಮುಖವಾಗಿ ಬೆಳವಣಿಗೆಯಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸೀಮ ಆಂಗ್ಲ ಶಾಲೆಯ ಸಂಸ್ಥಾಪಕ ಜಗನ್ನಾಥರಾವ್ಬೊಂಗಾಳೆ, ಪಾಲಿಕೆಯ ಸ್ಥಾಯಿಸಮಿತಿ ಮಾಜಿ ಅಧ್ಯಕ್ಷ ಧೀರರಾಜ್ ಹೊನ್ನವಿಲೆ, ಸಂಸ್ಥೆಯ ಆಡಳಿತಾಧಿಕಾರಿ ಮಂಜುನಾಥ್,ರಾಜ್ಯ ಕರಾಟೆ ಅಸೋಸಿಯೇಷನ್ ರಾಜ್ಯ ಕಾರ್ಯದರ್ಶಿ ಶಿವಮೊಗ್ಗ ವಿನೋದ್, ನಿಧಿಗೆ ಗ್ರಾ.ಪಂ ಅಧ್ಯಕ್ಷೆ ಬಸಮ್ಮ ಚಂದ್ರಪ್ಪ, ಇತರರು ಉಪಸ್ಥಿತರಿದ್ದರು.