Women Entrepreneurship ಹೆಣ್ಣು ಮಕ್ಕಳು ಶಿಕ್ಷಣ ಪಡೆದು ಜೀವನದಲ್ಲಿ ಮುನ್ನಡೆಯುವುದರಿಂದ ಸದೃಢ ಸಮಾಜ ನಿರ್ಮಾಣ ಮಾಡಲು ಸಾಧ್ಯವಿದ್ದು, ಮಹಿಳೆಯರು ಅಸಾಧಾರಣ ಶಕ್ತಿ ಸಾಮಾರ್ಥ್ಯ ಹೊಂದಿದ್ದಾರೆ ಎಂದು ಸರ್ಜಿ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ. ಧನಂಜಯ ಸರ್ಜಿ ಅಭಿಪ್ರಾಯಪಟ್ಟರು.
ಶಿವಮೊಗ್ಗ ನಗರದ ಮಥುರಾ ಪಾರಾಡೈಸ್ನಲ್ಲಿ ಸ್ವೇದ ಮಹಿಳಾ ಉದ್ಯಮಿಗಳ ಸಂಘದಿಂದ ಆಯೋಜಿಸಿದ್ದ “ಜೆಡ್” ಯೋಜನೆ ಕುರಿತು ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಮಹಿಳಾ ಸಬಲೀಕರಣ ಅತ್ಯಂತ ಮುಖ್ಯ. ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡುತ್ತಿದ್ದು, ತಮ್ಮ ಆಯ್ಕೆಯ ಕ್ಷೇತ್ರಗಳಲ್ಲಿ ಯಶಸ್ಸು ಸಾಧಿಸಬೇಕು ಎಂದು ಶುಭ ಹಾರೈಸಿದರು.
ಮಹಿಳೆಯರು ಉದ್ಯಮ ಕ್ಷೇತ್ರದಲ್ಲಿ ಪರಿಣಿತರಾಗಲು ಅಗತ್ಯವಿರುವ ಕೌಶಲ್ಯ ಕಲಿಯಲು ಸೂಕ್ತ ಸಮಯ ಮೀಸಲಿಡಬೇಕು. ನಿಮ್ಮ ಆಯ್ಕೆಯ ಕ್ಷೇತ್ರದಲ್ಲಿ ಈಗಾಗಲೇ ಸಾಧನೆ ಮಾಡಿರುವವರ ಬಗ್ಗೆ ಅಧ್ಯಯನ ನಡೆಸಬೇಕು. ಪ್ರಸ್ತುತ ಇರುವ ಸ್ಥಿತಿಗಿಂತ ಉತ್ತಮ ಹಂತಕ್ಕೆರಲು ನಿರಂತರ ಪರಿಶ್ರಮ ವಹಿಸಲು ಕೆಲಸ ಮಾಡಬೇಕು ಎಂದು ತಿಳಿಸಿದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಮಾತನಾಡಿ, ಉದ್ಯಮ ಕ್ಷೇತ್ರಕ್ಕೆ ಪ್ರವೇಶ ನೀಡಿರುವ ನೀವು ಈಗಾಗಲೇ ಸಾಧಕರಾಗಿದ್ದೀರಿ, ಮಾರುಕಟ್ಟೆ ವ್ಯವಸ್ಥೆಯಲ್ಲಿ ಪ್ರಗತಿ ಹೊಂದಲು ಅಗತ್ಯವಿರುವ ಪ್ರಮಾಣಪತ್ರ ಹಾಗೂ ತರಬೇತಿ ಪಡೆಯುವುದು ಮುಖ್ಯ. ಆದ್ದರಿಂದ ಕಾರ್ಯಾಗಾರದ ಸಂಪೂರ್ಣ ಪ್ರಯೋಜನ ಪಡೆಯಬೇಕು ಎಂದು ಹೇಳಿದರು.
ಸ್ವೇದ ಮಹಿಳಾ ಉದ್ಯಮಿಗಳ ಸಂಘದ ಅಧ್ಯಕ್ಷೆ ಡಾ. ಲಕ್ಷ್ಮೀದೇವಿ ಗೋಪಿನಾಥ್ ಮಾತನಾಡಿ, ಮಹಿಳೆಯರು ಉದ್ಯಮ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ಅಗತ್ಯವಿರುವ ಕೌಶಲ್ಯಗಳನ್ನು ಮಹಿಳಾ ಉದ್ಯಮಿಗಳಿಗೆ ನಿರಂತರವಾಗಿ ತರಬೇತಿ ನೀಡುವ ಕೆಲಸವನ್ನು ನಮ್ಮ ಸಂಸ್ಥೆಯು ಮಾಡುತ್ತಿದ್ದು, ಎಂಎಸ್ಎಂಇ, ಜೆಇಡಿ ಪ್ರಮಾಣ ಪತ್ರದ ಬಗ್ಗೆ ಅರಿವು ಮೂಡಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
Women Entrepreneurship ಎಂಎಸ್ಎಂಇ ಜಿಲ್ಲಾ ಸಂಯೋಜಕ ಬಿ.ಟಿ.ಹನುಮಂತಯ್ಯ ಮಾತನಾಡಿ, ಕೇಂದ್ರ ಸರ್ಕಾರದ ಜೆಡ್ ( ಜಡ್ ಇ ಡಿ ) ಪ್ರಮಾಣಪತ್ರವು ಉದ್ಯಮಿಗಳಿಗೆ ಅತ್ಯಂತ ಅಗತ್ಯ ಇದ್ದು, ಜೆಇಡಿ ಪ್ರಮಾಣ ಪತ್ರ ಹೊಂದುವುದರಿಂದ ಬ್ಯಾಂಕ್ಗಳಲ್ಲಿ ಸಾಲ ಸೌಲಭ್ಯ ಪಡೆಯಲು ಅತ್ಯಂತ ಸಹಕಾರಿ ಆಗುತ್ತದೆ ಎಂದು ಹೇಳಿದರು.
ಜೆಡ್ ಸರ್ಟಿಫಿಕೇಟ್ನಿಂದ ಬ್ಯಾಂಕಿನಿಂದ ಕಡಿಮೆ ಬಡ್ಡಿ ದರದಲ್ಲಿ ಸಾಲ, ಸರ್ಕಾರದ ಮಾರುಕಟ್ಟೆ ಅಭಿವೃದ್ಧಿ ಯೋಜನೆಗಳಲ್ಲಿ ಸಹಾಯ ಮೊದಲಾದ ಹಲವು ಉಪಯುಕ್ತತೆಗಳಿದೆ.
ನಿವೃತ್ತ ಪ್ರಾಚಾರ್ಯ ಡಾ. ಧನಂಜಯ್, ಸ್ವೇದ ಮಹಿಳಾ ಉದ್ಯಮಿಗಳ ಸಂಘದ ಕಾರ್ಯದರ್ಶಿ ಶಿಲ್ಪಾ ಗೋಪಿನಾಥ್, ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ.ವಿಜಯಕುಮಾರ್, ಸಹನಾ ಚೇತನ್ ಮತ್ತಿತರರು ಉಪಸ್ಥಿತರಿದ್ದರು.