Republic Day ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿರುವ ಹಿನ್ನೆಲೆ ಯಲ್ಲಿ ಪಾಲಕರು ಖಾಸಗೀ ಶಾಲೆಗಳ ವ್ಯಾಮೋಹ ಬಿಟ್ಟು ಸರ್ಕಾರಿ ಶಾಲೆಗೆ ಮಕ್ಕಳನ್ನು ದಾಖಲಿಸಲು ಮುಂದಾ ಗಬೇಕು ಎಂದು ಸರ್ವಧರ್ಮ ಸೇವಾಸಂಸ್ಥೆ ಅಧ್ಯಕ್ಷ ಕೆ.ಭರತ್ ಹೇಳಿದರು.
ಚಿಕ್ಕಮಗಳೂರು ತಾಲ್ಲೂಕಿನ ಹೆಡದಾಳು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 75ನೇ ಗಣರಾಜ್ಯೋತ್ಸವ ಅಂಗವಾಗಿ ವಿದ್ಯಾರ್ಥಿಗಳಿಗೆ ಉಚಿತ ನೋಟ್‌ಪುಸ್ತಕ ವಿತರಣೆ ಹಾಗೂ ನಿವೃತ್ತ ಶಿಕ್ಷಕರ ಸನ್ಮಾನ ಕಾರ್ಯಕ್ರಮದಲ್ಲಿ ಶುಕ್ರವಾರ ಪಾಲ್ಗೊಂಡು ಅವರು ಮಾತನಾಡಿದರು.
ಸರ್ಕಾರಿ ಶಾಲೆಗಳನ್ನು ಆಕರ್ಷಿತವನ್ನಾಗಿ ಮಾಡುವ ಹಾಗೂ ಭೌತಿಕವಾಗಿ ಶ್ರೀಮಂತಗೊಳಿಸಲು ಶಾಲೆಯ ಎಸ್‌ಡಿಎಂಸಿ ಸದಸ್ಯರು, ಶಿಕ್ಷಕರು ಕಾರ್ಯೋನ್ಮುಖರಾಗಬೇಕು. ಸುತ್ತಮುತ್ತಲ ಗ್ರಾಮಗಳಿಗೆ ತೆರಳಿ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸಲು ಪಾಲಕರಿಗೆ ಪ್ರೇರೇಪಿಸಬೇಕು ಎಂದು ಸಲಹೆ ಮಾಡಿದರು.
ಶಾಲೆಯ ಆರಂಭದ ವೇಳೆಯ ಮೊದಲೇ ವಾರ್ತಾಪತ್ರಿಕೆಗಳನ್ನು ಓದಿಸುವುದು. ಶಿಸ್ತುಬದ್ಧ ಜೀವನ ರೂಪಿಸಲು ಯಾವ ರೀತಿಯಲ್ಲಿ ತಯಾರಾಗಬೇಕೆಂಬ ಶಿಕ್ಷಣವನ್ನು ಬೋಧಿಸಿದಾಗ ತಾನಾಗಿಯೇ ಮಕ್ಕಳು ಚುರುಕು ಹೊಂದಲು ಸಾಧ್ಯ. ಹೀಗಾಗಿ ಭವಿಷ್ಯದ ಮಕ್ಕಳನ್ನು ರೂಪಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ತಿಳಿಸಿದರು.
ಗಣರಾಜ್ಯೋತ್ಸವವನ್ನು ಪ್ರತಿ ವಿದ್ಯಾರ್ಥಿಗಳು ಶಿಸ್ತಿನಿಂದ ಆಚರಿಸಬೇಕು. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳು ಪ್ರಭು ಗಳು ಎಂದು ಸಾರಿದ ಅಂಬೇಡ್ಕರ್‌ರವರ ಆಶಯಕ್ಕೆ ತಕ್ಕಂತೆ ಬದುಕಬೇಕು. ಭವಿಷ್ಯದಲ್ಲಿ ನೀವುಗಳು ಕೂಡಾ ಒಂ ದಲ್ಲೊಂದು ಸಮಾಜಮುಖಿ ಕಾರ್ಯದಲ್ಲಿ ತೊಡಗಿ ದೇಶಕ್ಕೆ ಮಾದರಿಯಾಗಿರಬೇಕು ಎಂದು ತಿಳಿಸಿದರು.
Republic Day ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಕೆ.ಪುಟ್ಟಸ್ವಾಮಿ ಮಾತನಾಡಿ ಗಣರಾಜ್ಯೋತ್ಸವ ಸಂದರ್ಭದಲ್ಲಿ ಸರ್ವ ಧರ್ಮ ಸಂಸ್ಥೆಯಿಂದ ಮಕ್ಕಳಿಗೆ ಉಚಿತ ನೋಟ್‌ಪುಸ್ತಕ ವಿತರಿಸುವುದು ಖುಷಿ ತಂದಿದೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದಿರುವ ಮಕ್ಕಳಿಗೆ ಸಹಾಯಹಸ್ತ ಚಾಚಲಿ ಎಂದು ಶುಭ ಕೋರಿದರು.
ಇದೇ ವೇಳೆ ಈಚೆಗೆ ನಿವೃತ್ತಗೊಂಡ ಮುಖ್ಯೋಪಾಧ್ಯಾಯ ಚಂದ್ರಣ್ಣ ಅವರಿಗೆ ಸಂಸ್ಥೆಯಿಂದ ಬೀಳ್ಕೊಡುಗೆ ನೀಡಲಾಯಿತು. ಈ ಸಂದರ್ಭದಲ್ಲಿ ಗ್ರಾಮದ ಮುಖಂಡ ಮಂಜುನಾಥ್, ಮುಖ್ಯೋಪಾಧ್ಯಾಯ ಎಂ.ಸಿ.ಗಂಗಾಧರ್, ಸಹ ಶಿಕ್ಷಕಿ ವಿಮಲಾಕ್ಷಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.