Malenadu Vidhyasamste ಕ್ರೀಡಾ ಚಟುವಟಿಕೆಗಳಲ್ಲಿ ಸೋಲುಂಡವರು ದೃತಿಗೆಡದೇ, ಬಹುಮಾನಕ್ಕೂ ಸೀಮಿತರಾಗದೇ ಸ್ಪರ್ಧೆಗಳಲ್ಲಿ ಕಲಿತ ಅನುಭವವನ್ನೇ ಮೆಟ್ಟಿಲುಗಳನ್ನಾಗಿ ಮಾಡಿಕೊಂಡು ನಿರಂತರ ಪ್ರಯತ್ನದಲ್ಲಿ ತೊಡಗಬೇಕು ಎಂದು ಮಲೆನಾಡು ವಿದ್ಯಾಸಂಸ್ಥೆ ಉಪಾಧ್ಯಕ್ಷ ಡಾ.ಜೆ.ಪಿ.ಕೃಷ್ಣೇಗೌಡ ಹೇಳಿದರು.
ಚಿಕ್ಕಮಗಳೂರು ನಗರದ ಬೈಪಾಸ್‌ರಸ್ತೆ ಸಮೀಪದ ಶ್ರೀಮತಿ ಸೀತಮ್ಮ ಸರಾಫ್ ರಾಮಚಂದ್ರರಾವ್ ಪ್ರಾಯೋಗಿಕ ಪ್ರೌಢ ಶಾಲೆಯ 30ನೇ ವಾರ್ಷಿಕ ಕ್ರೀಡೋತ್ಸವದ ಉದ್ಘಾಟನಾ ಸಮಾರಂಭವನ್ನು ಶಾಲಾವರಣದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರತಿಯೊಬ್ಬರ ಜೀವನದಲ್ಲಿ ಶಿಸ್ತು ಎಂಬುದು ಕ್ರೀಡಾಚಟುವಟಿಕೆಯಿಂದ ಮಾತ್ರ ಬರಲು ಸಾಧ್ಯ. ದಿನನಿತ್ಯದ ಕೆಲವು ಗಂಟೆಗಳ ಕಾಲ ಕ್ರಿಕೇಟ್, ರನ್ನಿಂಗ್, ವಾಲಿಬಾಲ್, ಪುಟ್‌ಬಾಲ್ ಸೇರಿದಂತೆ ಇನ್ನಿತರೆ ದೈಹಿಕವಾಗಿ ಶಕ್ತಿ ತುಂಬುವ ಆಟೋಟಗಳಲ್ಲಿ ಭಾಗಿಯಾದರೆ ಭವಿಷ್ಯದಲ್ಲಿ ಆರೋಗ್ಯಯುತ ವ್ಯಕ್ತಿಯಾಗಿ ರೂಪುಗೊಳ್ಳಲು ಸಾಧ್ಯ ಎಂದು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ವಿಕಲಚೇತನ ಮಕ್ಕಳೇ ರಾಷ್ಟç ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ ನಮ್ಮೆಲ್ಲರನ್ನು ನಿಬ್ಬೆರಗಾಗಿಸಿದ್ದಾರೆ. ಆ ನಿಟ್ಟಿನಲ್ಲಿ ಆರೋಗ್ಯಯುತ ಶರೀರ ಹೊಂದಿರುವ ಮಕ್ಕಳು ಅವರ ಆಸಕ್ತಿಯನ್ನು ಮೈಗೂಡಿಸಿಕೊಂಡು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಹೆಸರು ಸಂಪಾದಿಸಿ ಉನ್ನತ ಕ್ರೀಡಾಪಟುವಾಗಿ ಹೊರ ಹೊಮ್ಮಬೇಕು ಎಂದರು.
ನಗರಸಭಾ ಸದಸ್ಯೆ ಇಂದಿರಾ ಶಂಕರ್ ಮಾತನಾಡಿ ಕೇವಲ ಬಹುಮಾನ ಗಳಿಸುವುದಕೋಸ್ಕರ ಆಟವಾಡದೇ ದೈಹಿಕ ಹಾಗೂ ಮಾನಸಿಕ ಸಧೃಢರಾಗಲು ಕ್ರೀಡೆಯಲ್ಲಿ ತೊಡಗಬೇಕು. ಈಚೆಗೆ ಮಕ್ಕಳು ಮೊಬೈಲ್ ಅಥವಾ ಆನ್‌ಲೈನ್ ಆಟಗಳಲ್ಲಿ ತಲ್ಲೀನರಾಗಿರುವುದು ಕಂಡಿದ್ದೇವೆ. ಆದ್ದರಿಂದ ಶಿಕ್ಷಕರ ಜೊತೆಗೆ ಪೋಷಕರು ಸಹ ಮಕ್ಕಳಿಗೆ ಶಾರೀರಿಕವಾಗಿ ಸದೃಢವಾಗುವ ಆಟೋಟಗಳಿಗೆ ಪ್ರೇರೇಪಿಸಬೇಕು ಎಂದರು.
ಮಲೆನಾಡು ವಿದ್ಯಾಸಂಸ್ಥೆ ಗೌರವ ಕಾರ್ಯದರ್ಶಿ ಡಾ.ಡಿ.ಎಲ್.ವಿಜಯ್‌ಕುಮಾರ್ ಮಾತನಾಡಿ ವಿದ್ಯಾರ್ಥಿ ಗಳು ಸದೃಢರಾಗುವ ನಿಟ್ಟಿನಲ್ಲಿ ವರ್ಷದಲ್ಲಿ ಹಲವಾರು ತಿಂಗಳ ಕಾಲ ಕ್ರೀಡೆಗೆ ಪೂರಕವಾಗಿರುವ ಕಾರ್ಯಕ್ರಮ ಆಯೋಜಿಸಿ ಪ್ರೋತ್ಸಾಹಿಸಲಾಗುತ್ತಿದೆ. ಮಕ್ಕಳು ಸ್ಪರ್ಧೆಗಳಲ್ಲಿ ಭಾಗವಹಿಸಿ ಸೋಲು-ಗೆಲುವಿಗೆ ತಲೆಕೆಡಿಸಿಕೊಳ್ಳದೇ ಸ್ಪರ್ಧೆಯ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
Malenadu Vidhyasamste ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾಸಂಸ್ಥೆ ಅಧ್ಯಕ್ಷ ಎನ್.ಕೇಶವಮೂರ್ತಿ ವಹಿಸಿದ್ದರು. ದಾನಿ ಸದಸ್ಯೆ ಉಮಾ ನಾಗೇಶ್ ಕ್ರೀಡಾ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಶಾಲಾ ಕ್ರೀಡಾಪಟುಗಳಿಂದ ಕ್ರೀಡಾ ಜ್ಯೋತಿಯನ್ನು ಜೆ.ಪಿ.ಕೃಷ್ಣೇಗೌಡ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ಕೌಸರ್ ಫಾತಿಮಾ, ಸಹ ಶಿಕ್ಷಕರಾದ ಸದಾಶಿವಮೂರ್ತಿ, ಪ್ರತಿಮಾ, ಸೌಭಿಯಾ, ಜಗದೀಶ್ ಮತ್ತಿತರರು ಉಪಸ್ಥಿತರಿದ್ದರು.
ಕು.ನಯನ ಸಂಗಡಿಗರು ಪ್ರಾರ್ಥಿಸಿದರು. ವಿದ್ಯಾರ್ಥಿನಿ ಇನ್ಸಿಯಾ ಸೈಪಿ ಸ್ವಾಗತಿಸಿದರು. ಪ್ರಮತ್ ನಾಗಸಿದ್ದಿ ನಿರೂಪಿಸಿದರು. ಹೆಚ್.ವಿ.ನಯನ ವಂದಿಸಿದರು.