Rotary Shivamogga East ಇತ್ತೀಚಿನ ಅಂಕಿ ಅಂಶಗಳ ಪ್ರಕಾರ ರಸ್ತೆ ಅಪಘಾತದಲ್ಲಿ ಪ್ರತಿ ವರ್ಷ ಲಕ್ಷಾಂತರ ಜನರು ಸಾವನ್ನಪ್ಪುತ್ತಿದ್ದು, ಮೂಲ ಕಾರಣ ರಸ್ತೆ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡದೇ ಇರುವುದಾಗಿದೆ ಎಂದು ವಿಪತ್ತು ನಿರ್ವಹಣಾ ರಾಷ್ಟ್ರೀಯ ತರಬೇತುದಾರ ಡಾ. ವಿ.ಎಲ್.ಎಸ್.ಕುಮಾರ್ ಹೇಳಿದರು.
ರಾಜೇಂದ್ರ ನಗರದ ರೋಟರಿ ಪೂರ್ವ ಶಾಲೆಯ ರೋಟರಿ ಸಭಾಂಗಣದಲ್ಲಿ ರೋಟರಿ ಶಿವಮೊಗ್ಗ ಪೂರ್ವ ಇಂಟರಾಕ್ಟ್ ಕ್ಲಬ್ ವತಿಯಿಂದ ಆಯೋಜಿಸಿದ್ದ ರಸ್ತೆ ಸುರಕ್ಷತೆ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಸ್ತೆ ಅಪಘಾತದಲ್ಲಿ ಯುವಜನತೆ ಹೆಚ್ಚು ಸಾವನ್ನಪ್ಪುತ್ತಿದ್ದು, ವ್ಹೀಲಿಂಗ್, ಬೈಕ್ ಅತಿಯಾದ ವೇಗದಲ್ಲಿ ಓಡಿಸುವುದರಿಂದ ಅಪಘಾತ ಸಂಭವಿಸುತ್ತಿವೆ. ತ್ರಿಬಲ್ ರೈಡಿಂಗ್, ವಾಹನ ಚಾಲನಾ ಪರವಾನಗಿ ಇಲ್ಲದೇ ಗಾಡಿ ಓಡಿಸುವುದರಿಂದ ಅಪಘಾತ ಹೆಚ್ಚಾಗುತ್ತಿವೆ ಎಂದು ಅಭಿಪ್ರಾಯಪಟ್ಟರು.
Rotary Shivamogga East ರೋಟರಿ ಶಿವಮೊಗ್ಗ ಪೂರ್ವ ಉಪಾಧ್ಯಕ್ಷ ಜಿ.ವಿಜಯ್‌ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ರಸ್ತೆ ನಿಯಮಗಳನ್ನು ಪಾಲಿಸಿ ವಾಹನ ಚಲಾಯಿಸಬೇಕು. ಸುರಕ್ಷತಾ ಫಲಕಗಳನ್ನು ಗಮನಿಸಿ ಸೂಚನೆ ಅನುಸಾರ ಚಾಲನೆ ಮಾಡಬೇಕು. ವೇಗದ ಮಿತಿ ಇರಬೇಕು. ಚಾಲನಾ ಪರವಾನಗಿ ಇಲ್ಲದೇ ವಾಹನ ಚಲಾಯಿಸಬಾರದು ಎಂದರು.
ರೋಟರಿ ಮ್ಯಾನೇಜಿಂಗ್ ಟ್ರಸ್ಟಿ ಚಂದ್ರಶೇಖರಯ್ಯ, ಟ್ರಸ್ಟ್ ಉಪಾಧ್ಯಕ್ಷ ಡಾ. ಪರಮೇಶ್ವರ್ ಶಿಗ್ಗಾವ್ ಮಾತನಾಡಿ ರಸ್ತೆ ನಿಯಮಗಳನ್ನು ಪಾಲಿಸುವಂತೆ ಪೋಷಕರಿಗೆ ವಿದ್ಯಾರ್ಥಿಗಳು ತಿಳವಳಿಕೆ ಮೂಡಿಸುವಂತೆ ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಮಕ್ಕಳೊಂದಿಗೆ ಸಂವಾದ ನಡೆಯಿತು. ರೋಟರಿ ಶಿವಮೊಗ್ಗ ಪೂರ್ವ ವತಿಯಿಂದ ಆತ್ಮೀಯವಾಗಿ ಕುಮಾರ್ ಅವರನ್ನು ಸನ್ಮಾನಿಸಲಾಯಿತು.
ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಕಿಶೋರ್ ಕುಮಾರ್, ಉಪಪ್ರಾಚಾರ್ಯ ನರಸಿಂಹಯ್ಯ, ಪ್ರಶಾಂತ್, ದಿವ್ಯಾ, ರುಕ್ಕಯ್ಯ, ಇಂಟರಾಕ್ಟ್ ಕ್ಲಬ್ ಅಧ್ಯಕ್ಷ ಹರ್ಷಿತ, ಕಾರ್ಯದರ್ಶಿ ಗಾನವಿ ಮತ್ತಿತರರು ಉಪಸ್ಥಿತರಿದ್ದರು.