ಸುಬ್ರಹ್ಮಣ್ಯ ಷಷ್ಠಿ ಕಾರ್ತಿಕ ಮಾಸದ ದೀಪೋತ್ಸವ ಹಬ್ಬವು ಹಿಂದುಗಳಿಗೆ ಬಹಳ ಪವಿತ್ರ ಹಾಗೂ ಮಹತ್ವ ಪಡೆದಿದೆ ಎಂದು ಗೋಪಾಳದ ಶ್ರೀ ನಾಗಸುಬ್ರಹ್ಮಣ್ಯ ದೇವಸ್ಥಾನದ ಪ್ರಧಾನ ಅರ್ಚಕ ಸಂದೇಶ ಉಪಾಧ್ಯ ಹೇಳಿದರು.
ಸುಬ್ರಹ್ಮಣ್ಯ ಷಷ್ಠಿ ಸಂದರ್ಭದಲ್ಲಿ ಶ್ರೀನಾಗಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕಾರ್ತಿಕ ಅಮಾವ್ಯಾಸೆ ಪ್ರಯುಕ್ತ ಆಯೋಜಿಸಿದ್ದ ಅಗಣಿತ ದೀಪೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಕಾರ್ತಿಕ ಮಾಸದಲ್ಲಿ ದೀಪಗಳನ್ನು ಬೆಳಗಿಸುವುದರಿಂದ ಪುಣ್ಯ ಲಭಿಸುವ ಜತೆಯಲ್ಲಿ ಸುಖ ಸಮೃದ್ಧಿ ನೆಲೆಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಕಾರ್ತಿಕ ಮಾಸದಲ್ಲಿ ದೇವಸ್ಥಾನ ಹಾಗೂ ಮನೆಯ ಮುಂಬಾಗಿಲು, ದೇವರ ಮನೆಯಲ್ಲಿ ದೀಪ ಬೆಳಗುವುದರಿಂದ ನಕರಾತ್ಮಕ ವಾತಾವರಣದಿಂದ ದೂರ ಇದ್ದು, ಧನಾತ್ಮಕ ಮನೋಸ್ಥಿತಿ ನಮ್ಮಲ್ಲಿ ಅಧಿಕವಾಗುತ್ತದೆ. ಒಂದು ತಿಂಗಳ ಅವಧಿ ದೇವಸ್ಥಾನದಲ್ಲಿ ದೀಪೋತ್ಸವ ನಡೆಯುತ್ತದೆ ಎಂದು ಮಾಹಿತಿ ನೀಡಿದರು.
Srinagasubrahmanya Temple ಕತ್ತಲೆ ಹೆಚ್ಚಿರುವ ಕಾರ್ತಿಕ ಮಾಸದಲ್ಲಿ ದೀಪವು ಅಜ್ಞಾನ, ಅಂಧಕಾರ ತೊಲಗಿಸುವ ಜತೆಗೆ ಆತ್ಮವಿಶ್ವಾಸ, ಹೊಸ ಚೈತನ್ಯವನ್ನು ನೀಡುತ್ತದೆ. ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ. ಸುಬ್ರಹ್ಮಣ್ಯ ಷಷ್ಠಿಯಲ್ಲಿ ದೀಪ ಬೆಳಗಿಸುವುದರಿಂದ ಹಿರಿಯರ, ಭಗವಂತನ ಆಶೀರ್ವಾದ ದೊರೆಯುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಬಡಾವಣೆಯ ನಿವಾಸಿಗಳು ಒಟ್ಟಿಗೆ ಸಹಸ್ರ ದೀಪಗಳನ್ನು ಬೆಳಗಿಸಿ ದೇವರನ್ನು ಪ್ರಾರ್ಥಿಸಿದರು.
ನಾಗಸುಗ್ರಹ್ಮಣ್ಯ ದೇವಸ್ಥಾನದಲ್ಲಿ ವಿಶೇಷ ಪೂಜೆ, ಅಗಣಿತ ದೀಪೋತ್ಸವ, ಸಂಗೀತ ಸೇವೆ ಹಾಗೂ ಪ್ರಸಾದ ವಿನಿಯೋಗ ನಡೆಯಿತು.
ಕಾರ್ಯಕ್ರಮದಲ್ಲಿ ಶ್ರೀ ನಾಗಸುಬ್ರಹ್ಮಣ್ಯ ದೇವಸ್ಥಾನದ ಕಿಶೋರ್ ಕುಮಾರ್, ವೇದ ನಾಗರಾಜ್, ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ.ವಿಜಯಕುಮಾರ್, ಭಕ್ತರು, ಮಹಿಳೆಯರು, ಸಾರ್ವಜನಿಕರು ಮತ್ತಿತರರು ಉಪಸ್ಥಿತರಿದ್ದರು.