Samanvaya Trust ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಲು ನಿರಂತರ ಪರಿಶ್ರಮ ವಹಿಸಿ ಅಧ್ಯಯನ ನಡೆಸಬೇಕು. ಆತ್ಮವಿಶ್ವಾಸ ಹಾಗೂ ಸಕರಾತ್ಮಕ ಆಲೋಚನೆಗಳಿಂದ ಮುನ್ನಡೆಯಬೇಕು ಎಂದು ಮುಂಬೈ ನಿವೃತ್ತ ಐಎಎಸ್ ಅಧಿಕಾರಿ ಡಾ. ಪ್ರಕಾಶ್ ಅಭಿಪ್ರಾಯಪಟ್ಟರು.
ಶಿವಮೊಗ್ಗ ನಗರದ ಪೋದಾರ್ ಶಾಲೆ ಸಮೀಪದಲ್ಲಿ ಸಮನ್ವಯ ಟ್ರಸ್ಟ್ ನಿರ್ಮಿಸಿರುವ “ಕೆ.ಎ.ದಯಾನಂದ ಐಎಎಸ್” ಸ್ಪರ್ಧಾತ್ಮಕ ಪರೀಕ್ಷೆಗಳ ಉಚಿತ ವಾಚನಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.
ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ಅಧ್ಯಯನ ಅಭ್ಯರ್ಥಿಗಳು ಗುರಿ ಸಾಧಿಸಲು ಇರುವ ಮಾರ್ಗವನ್ನು ಹಂತ ಹಂತವಾಗಿ ತಲುಪಬೇಕು. ಪರಿಣಿತರಿಂದ ಮಾರ್ಗದರ್ಶನ ಪಡೆದು ಅಧ್ಯಯನ ನಡೆಸಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಿ ಉನ್ನತ ಸ್ಥಾನಗಳನ್ನು ಅಲಂಕರಿಸಿ ಸಮಾಜದ ಸೇವೆ ಸಲ್ಲಿಸಬೇಕು ಎಂದು ತಿಳಿಸಿದರು.
ಪ್ರಕೃತಿಯ ಪ್ರಶಾಂತ ವಾತಾವರಣದಲ್ಲಿ ಅಧ್ಯಯನ ನಡೆಸಲು ವಿದ್ಯಾರ್ಥಿಗಳಿಗೆ ಉತ್ತಮ ವಾತಾವರಣ ರೂಪಿಸಿರುವ ಸಮನ್ವಯ ಸಂಸ್ಥೆಯ ಕಾರ್ಯ ಶ್ಲಾಘನೀಯ. ವಿದ್ಯಾರ್ಥಿಗಳಿಗೆ ಮಾದರಿ ಹಾಗೂ ಸ್ಫೂರ್ತಿಯುತ ವಾತಾವರಣ ನಿರ್ಮಿಸಿ ಸಾಧಿಸಲು ಪ್ರೋತ್ಸಾಹಿಸಲಾಗುತ್ತಿದೆ. ಸಮನ್ವಯ ಪ್ರಯತ್ನದ ಫಲವಾಗಿ ಮುಂದಿನ ದಿನಗಳಲ್ಲಿ ಶಿವಮೊಗ್ಗದ ಅಭ್ಯರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚು ಸಾಧನೆ ಮಾಡಬೇಕು ಎಂದು ಆಶಿಸಿದರು.
ಸಮನ್ವಯ ಟ್ರಸ್ಟ್ ನಿರ್ದೇಶಕ ಸಮನ್ವಯ ಕಾಶಿ ಮಾತನಾಡಿ, ಸಾಧನೆಯ ಕನಸು ಹೊತ್ತಿರುವ ಆಕಾಂಕ್ಷಿಗಳಿಗೆ ನೆರವಾಗುವ ಆಶಯದಿಂದ ಕೆ.ಎ.ದಯಾನಂದ ಐಎಎಸ್ ವಾಚನಾಲಯ ಸ್ಥಾಪಿಸಿದ್ದು, ಈಗಾಗಲೇ ಮೊದಲ ಬ್ಯಾಚ್ ವಿದ್ಯಾರ್ಥಿಗಳನ್ನು ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಂಡು ತರಬೇತಿ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ತರಬೇತಿ ನೀಡುವ ಆಶಯ ಹೊಂದಲಾಗಿದೆ ಎಂದು ಮಾಹಿತಿ ನೀಡಿದರು.
Samanvaya Trust ಸಮನ್ವಯ ಸ್ವಯಂ ಸೇವಕರು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳು ಹಾಜರಿದ್ದರು.